ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಮೇರೆಗೆ ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆ ಅಕ್ರಮಗಳ ಬಗ್ಗೆ ಎನ್‌ಡಿಎ ಮೈತ್ರಿಕೂಟದ ಮುಖಂಡರು ಸೋಮವಾರ ಜಂಟಿಯಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಿದ್ದಾರೆ.

ಬೆಳಗ್ಗೆ 10.30ಕ್ಕೆ ಈ ನಿಯೋಗವು ದೂರು ನೀಡಲಿದೆ. ಈ ನಿಯೋಗದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು ಸೇರಿ ಉಭಯ ಪಕ್ಷಗಳ ಇತರ ನಾಯಕರು ಇರಲಿದ್ದಾರೆ.

ರಾಜ್ಯದಲ್ಲಿ ಎಸ್ಐಆರ್‌ ಪ್ರಕ್ರಿಯೆಯ ಲೋಪಗಳ ಬಗ್ಗೆ ಈಗಾಗಲೇ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನಿಂದ ಪ್ರತ್ಯೇಕವಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಈ ನಡುವೆ ಇದೀಗ ರಾಜ್ಯ ಎನ್‌ಡಿಎ ಮೈತ್ರಿಕೂಟ ಪ್ರಮುಖ ನಾಯಕರು ಒಟ್ಟಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಬೂತ್‌ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ-ಮನೆಗೆ ತೆರಳಿ ಗಣತಿ ನಮೂನೆ ವಿತರಿಸುವ ಬದಲು ಸಮುದಾಯ ಭವನಗಳು, ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಸಾಮೂಹಿಕವಾಗಿ ಗಣತಿ ನಮೂನೆ ವಿತರಿಸುತ್ತಿದ್ದಾರೆ. ಈ ಮೂಲಕ ಎಸ್‌ಐಆರ್‌ ಮೂಲ ಉದ್ದೇಶಕ್ಕೆ ಚ್ಯುತಿ ತಂದಿದ್ದಾರೆ ಎಂದು ದೂರಲಾಗಿದೆ.SIR ಅಕ್ರಮ ತಡೆಯಲಾಗದ ರಾಜ್ಯ ಕತ್ತೆ ಕಾಯಲೂ ಲಾಯಕ್ಕಿಲ್ಲ:


ರಾಜ್ಯದಲ್ಲಿ ಎಸ್‌ಐಆರ್‌ ಅಕ್ರಮ ತಡೆಯಲಾಗದ ರಾಜ್ಯ ಸರ್ಕಾರವೇ ಕತ್ತೆ ಕಾಯಲೂ ಲಾಯಕ್ಕಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್‌ ಜೋಶಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಆರ್‌ ಅಕ್ರಮ ತಡೆಯದೆ ಚುನಾವಣಾ ಆಯೋಗ ಏನು ಕತ್ತೆ ಕಾಯುತ್ತಿದೆಯೇ ಎಂದು ರಾಜ್ಯ ಸರ್ಕಾರದ ಮಂತ್ರಿ ಆಗಿರುವ ಮಹಾನ್ ಪುರುಷರೊಬ್ಬರು ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗ ತನ್ನ ಕರ್ತವ್ಯ ಮಾಡುತ್ತಿದೆ. ಆದರೆ, ಇವರ ಸರ್ಕಾರವೇ ಕತ್ತೆ ಕಾಯಲೂ ಲಾಯಕ್ಕಿಲ್ಲ ಎಂದು ಹರಿಹಾಯ್ದರು.ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಪೆಡ್ಲರ್, ತಯಾರಕರನ್ನು ಮತ್ತೊಂದು ರಾಜ್ಯದ ಪೊಲೀಸರು ಬಂದು ಬಂಧಿಸುತ್ತಾರೆ. ಕಾರ ಹುಣ್ಣಿಮೆ ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ರೈತರ ಕೈ ಕತ್ತರಿಸುತ್ತಾರೆ. ಇದ್ಯಾವುದೂ ಇವರಿಗೆ ಗೊತ್ತೇ ಆಗುವುದಿಲ್ಲ. ಆದರೆ ಜಗತ್ತಿನ ಬೇರೆಲ್ಲಾ ವಿಷಯವನ್ನೂ ಇವರು ಮಾತನಾಡುತ್ತಾರೆ ಎಂದು ಟೀಕಿಸಿದರು.ರಾಜ್ಯದಲ್ಲಿ ಎಲ್ಲಾ ಚಿರಂಜೀವಿಗಳೇ?:ಎಸ್ಐಆರ್‌ ಮೊದಲೂ ಆಗಿದೆ. ಹತ್ತು, ಹದಿನೈದು ವರ್ಷದ ಹಿಂದೆಯೇ ಆಗಿದೆ. ಆದರೆ, ಈಗ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಕೆಲವೆಡೆ ಶೇ.100ರಷ್ಟು, ಮತ್ತೆ ಕೆಲವೆಡೆ ಶೇ.80ರಷ್ಟು ಮ್ಯಾಚಿಂಗ್ ಆಗುತ್ತಿದೆ. ಹಾಗಾದರೆ ರಾಜ್ಯದಲ್ಲಿ ಯಾರೂ ಮರಣ ಹೊಂದಿಲ್ಲವೇ? ಅಶ್ವತ್ಥಾಮನಂತೆ ಎಲ್ಲರೂ ಚಿರಂಜೀವಿ ಆಗಿದ್ದಾರೆಯೇ ಎಂದು ಕೇಂದ್ರ ಸಚಿವ ಜೋಶಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಕೇಂದ್ರ ಚು.ಆಯೋಗ ತಂಡ ಇಂದು ರಾಜ್ಯಕ್ಕೆ:

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಗೊಂದಲಗಳ ಬಗ್ಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಸೋಮವಾರ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರಿಂದ ಮಾಹಿತಿ ಸಂಗ್ರಹಿಸಲಿದೆ. ಅಂತೆಯೇ ರಾಜ್ಯದ ವಿವಿಧೆಡೆ ಸಂಚರಿಸಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಖುದ್ದು ವೀಕ್ಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಎಸ್‌ಐಆರ್‌ ಪ್ರಕ್ರಿಯೆ ಬಗ್ಗೆ ವಿವಿಧ ರಾಜಕೀಯ ಪಕ್ಷಗಳಿಂದ ಕೇಳಿ ಬಂದಿರುವ ಆರೋಪಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಿದೆ. ಅಂತೆಯೆ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆಯೂ ಕೇಂದ್ರ ಅಧಿಕಾರಿಗಳ ಈ ತಂಡವು ಸಮಾಲೋಚನೆ ನಡೆಸಲಿದೆ ಎಂದು ತಿಳಿದು ಬಂದಿದೆ.