ದೇವನಹಳ್ಳಿ: ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಹೇಳಿದರು
ದೇವನಹಳ್ಳಿ: ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಹೇಳಿದರು.ಪಟ್ಟಣದಲ್ಲಿ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡವರ, ಹಿಂದುಳಿದವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಿದ ನಾಯಕ ಡಿ.ದೇವರಾಜ ಅರಸು ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.ಭೂ ಸುಧಾರಣೆ ಕಾಯ್ದೆ (ಉಳುವವನೇ ಭೂ ಒಡೆಯ) ೧೯೭೪ರಲ್ಲಿ ಕ್ರಾಂತಿಕಾರಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು, ಜಮೀನ್ದಾರರ ವಶದಲ್ಲಿದ್ದ ಜಮೀನನ್ನು ಉಳುತ್ತಿದ್ದ ಗೇಣಿದಾರರಿಗೆ ವಹಿಸಿಕೊಟ್ಟರು. ಇದರಿಂದ ಲಕ್ಷಾಂತರ ಬಡ ರೈತರಿಗೆ ಭೂಮಿಯ ಹಕ್ಕು ಸಿಕ್ಕಿತು. ಉಳುವವನೇ ಭೂ ಒಡೆಯ ಯೋಜನೆ ಮೂಲಕ ಹಿಂದುಳಿದ ಕುಟುಂಬಗಳಿಗೆ ಭೂಮಿ ಕಲ್ಪಿಸಿಕೊಟ್ಟರು. ಪಿಂಚಣಿ, ಶಿಕ್ಷಣ, ಮೀಸಲಾತಿ, ಆಹಾರ ಭದ್ರತೆ ಮುಂತಾದ ಹಲವು ಜನಪರ ಯೋಜನೆ ಜಾರಿಗೆ ತಂದರು ಎಂದು ಹೇಳಿದರು. ಜಿಪಂ ಸಿಇಒ ಡಾ. ವಾಸಂತಿ ಅಮರ್ ಮಾತನಾಡಿ, ದಿವಂಗತ ದೇವರಾಜ ಅರಸು ಜಾರಿಗೆ ತಂದ ಶೈಕ್ಷಣಿಕ ಮೀಸಲಾತಿಯಿಂದ ಎಂಬಿಬಿಎಸ್ ಸೀಟು ಪಡೆದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ತರಬೇತಿಗೆ ಆಯ್ಕೆಯಾದೆ. ಬಳಿಕ ಕೆಎಎಸ್ ಪರೀಕ್ಷೆ ಬರೆದೆ, ಅಲ್ಲಿಯೂ ಕೂಡ ಮೀಸಲಾತಿ ಮೂಲಕ ನನಗೆ ಹುದ್ದೆ ಸಿಕ್ಕಿ ಬಳಿಕ ಐಎಎಸ್ ಗೆ ಪದೋನ್ನತಿ ಹೊಂದಿದ್ದು ಈಗ ಸಿಇಒ ಆಗಿದ್ದೇನೆ. ಇವೆಲ್ಲವೂ ಕೂಡ ದೇವರಾಜ ಅರಸು ಅವರು ಜಾರಿಗೆ ತಂದ ಜನಪರ ಯೋಜನೆಗಳಿಂದ ಸಾಧ್ಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ನಿಮಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಿ ಎಂದು ಹೇಳಿದರು.ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕೊಡುಗೆಯನ್ನು ನೀಡಿದ್ದಾರೆ. ಮೀಸಲಾತಿ, ವೃದ್ಧಾಪ್ಯ ವೇತನ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ವಸತಿ ಶಾಲೆ, ವಸತಿ ನಿಲಯ ಸ್ಥಾಪನೆಗೆ ಮುನ್ನುಡಿ ಬರೆದರು ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದರು.
ಹಿಂದುಳಿದ ವರ್ಗಗಳ ಸಮಾಜದ ಪ್ರತಿಭಾವಂತ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ.೯೫ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪ್ರಬಂಧ, ಚಿತ್ರ ಕಲಾ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ದೇವರಾಜ ಅರಸು ವರ್ಗಗಳ ಒಕ್ಕೂಟದ ಸಾಧಕರಿಗೆ ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಯಶ್ರೀ ಹೆಂಡೇಗಾರ, ಇಒ ಮುನಿರಾಜು, ಹಿಂದೂಳಿದ ವರ್ಗಗಳ ತಾಲೂಕು ಅಧ್ಯಕ್ಷರಾದ ಮುನಿರಾಜು, ಪ್ರ.ಕಾರ್ಯದರ್ಶಿ ದಾಸಪ್ಪ, ಉಪಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಸತ್ಯನಾರಾಯಣ, ವೇಣುಗೋಪಾಲ್, ಸಾಮಾಜದ ಮುಖಂಡರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.೨೦ ದೇವನಹಳ್ಳಿ ಚಿತ್ರಸುದ್ದಿ: ೦೧
ದೇವನಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಉದ್ಘಾಟಿಸಿದರು.