;Resize=(412,232))
ಬೆಂಗಳೂರು : ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಆಟೋ ಗ್ಯಾಸ್‌ಗಾಗಿ ಚಾಲಕರ ಪರದಾಟ ಗುರುವಾರವೂ ಮುಂದುವರೆದಿದ್ದು ರಾತ್ರಿಯೆಲ್ಲಾ ಸರದಿ ಸಾಲಿನಲ್ಲಿ ನಿಂತರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಇದರಿಂದ ಸಿಟ್ಟಿಗೆದ್ದ ಚಾಲಕರು ಕಣ್ಣೀರು ಹಾಕುತ್ತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರವಾರದಲ್ಲಿ ಇರುವ ಏಕೈಕ ಬಂಕ್ ಬಂದ್ ಆಗಿದ್ದರಿಂದ ಆಕ್ರೋಶಗೊಂಡ ಆಟೋ ಚಾಲಕರು, ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ಬಳ್ಳಾರಿಯಲ್ಲಿ 7 ಸಾವಿರ ಆಟೋಗಳು ಮೂಲೆ ಸೇರಿದ್ದು, ಚಾಲಕರು ಇತರ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರ ಗೋಳಾಟ ಮುಂದುವರಿದಿದೆ. ಮಾಗಡಿ ರೋಡ್ ಟೋಲ್‌ಗೇಟ್, ಎಚ್ಎಂಟಿ ರೋಡ್ ಸುಬೇಧಾರ್ ಪಾಳ್ಯದಲ್ಲಿರುವ ಏಜೀಸ್ ಗ್ಯಾಸ್ ಸ್ಟೇಷನ್, ಶೇಷಾದ್ರಿಪುರಂ ಲಿಂಕ್ ರಸ್ತೆ, ಮೂಡಲಪಾಳ್ಯ ಮೇನ್ ರೋಡ್, ವಿಜಯನಗರ, ನಾಗರಬಾವಿ ಸರ್ಕಲ್ ಸೇರಿ ಹಲವೆಡೆಯ ಬಂಕ್‌ಗಳ ಮುಂದೆ 2-3 ಕಿಲೋಮೀಟರ್ ಉದ್ದಕ್ಕೂ ಆಟೋಗಳು ‘ಕ್ಯೂ’ ನಿಂತಿದ್ದವು.
ಮಧ್ಯರಾತ್ರಿ 1 ಗಂಟೆ ವೇಳೆಗೆ ‘ಸದ್ಯ ಗ್ಯಾಸ್ ಸ್ಟಾಕ್ ಇಲ್ಲ’ ಎಂದು ಮಾಲೀಕರು ಬೋರ್ಡ್ ಹಾಕಿದರೂ ಕದಲದೆ ಬಂಕ್ ಮುಂದೆ ಸರದಿ ಸಾಲಿನಲ್ಲಿ ಕಾಯುತ್ತಾ ನಿಂತಿದ್ದರು. ‘ಲೀಟರ್‌ಗೆ 300 ರು. ಕೊಟ್ಟರೆ ಈಗಲೇ ಗ್ಯಾಸ್ ಹಾಕ್ತಾರೆ, ನಾಳೆ ಬಂದರೆ ಮತ್ತೆ ಐದಾರು ಗಂಟೆ ಕಾಯಬೇಕು, ಹೀಗಾಗಿ, ರಾತ್ರಿಯಾದರೂ ಕಾಯುತ್ತಾ ನಿಂತಿದ್ದೇವೆ’ ಎಂದು ಚಾಲಕರು ಕಣ್ಣೀರು ಹಾಕಿದರು. ಇನ್ನು ಕೆಲವೆಡೆ, ಗ್ಯಾಸ್ ಇಲ್ಲದೆ ನಡುರಸ್ತೆಯಲ್ಲೇ ಆಟೋಗಳು ನಿಲ್ಲುತ್ತಿದ್ದು, ಚಾಲಕರು ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು.
ಧಾರವಾಡದಲ್ಲಿ ಐದು ಎಲ್‌ಪಿಜಿ ಪಂಪ್‌ಗಳಿದ್ದು ಎಲ್ಲೂ ಎಲ್‌ಪಿಜಿ ಸಿಗುತ್ತಿಲ್ಲ. ಕಾರವಾರದಲ್ಲಿರುವ ಏಕೈಕ ಗೋ ಗ್ಯಾಸ್ ಪಂಪ್‌ನಲ್ಲಿ ಕಳೆದ ಆರು ದಿನಗಳಿಂದ ಎಲ್‌ಪಿಜಿ ಸಿಗುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಆಟೋ ರಿಕ್ಷಾ ಚಾಲಕರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿ ಲೀಟರ್ ಗ್ಯಾಸ್‌ಗೆ ₹130 ನೀಡಿದರೆ ಮಾತ್ರ ಗ್ಯಾಸ್ ತರಿಸಿಕೊಡುವುದಾಗಿ ಪಂಪ್ ಮಾಲೀಕರು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ 7 ಬಂಕ್‌ಗಳ ಪೈಕಿ 5 ಬಂಕ್‌ಗಳು ಬಂದ್ ಆಗಿದ್ದು, ಎಲ್‌ಪಿಜಿ ಗ್ಯಾಸ್ ಸಿಗದೆ 13 ಸಾವಿರ ಆಟೋಗಳ ಪೈಕಿ 7 ಸಾವಿರಕ್ಕೂ ಅಧಿಕ ಆಟೋಗಳು ರಸ್ತೆಗಿಳಿಯದೇ ಮೂಲೆ ಸೇರಿವೆ. ಹೀಗಾಗಿ, ಆಟೋ ಚಾಲಕರು ತಾತ್ಕಾಲಿಕವಾಗಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ‘ಶಾಲಾ ಟ್ರಿಪ್‌ಗಳನ್ನು ಹೊಂದಿರುವ ಆಟೋಗಳು ಮಾತ್ರ ನಿರಂತರವಾಗಿ ಆಟೋಗಳನ್ನು ಓಡಿಸುತ್ತಿದ್ದಾರೆ. ಉಳಿದವರು ಆಟೋ ವೃತ್ತಿಯಿಂದ ದೂರ ಸರಿಯುತ್ತಿದ್ದಾರೆ’ ಎಂದು ಬಳ್ಳಾರಿಯ ಆಟೋ ಚಾಲಕ ಪ್ರದೀಪ್ ಎಂಬುವರು ಕಣ್ಣೀರು ಹಾಕಿದರು.
ಹಾವೇರಿ ನಗರದಲ್ಲಿರುವ ಏಕೈಕ ಆಟೋ ಗ್ಯಾಸ್ ಬಂಕ್‌ನಲ್ಲಿ ‘ನೋ ಸ್ಟಾಕ್ ಬೋರ್ಡ್’ ಹಾಕಲಾಗಿದೆ. ಜಿಲ್ಲೆಯ ಬ್ಯಾಡಗಿ, ಮೋಟೆಬೆನ್ನೂರು, ಕಬ್ಬೂರು, ಸಂಗೂರ, ಆಡೂರು ಕಡೆಯಿಂದಲೂ ಎಲ್‌ಪಿಜಿಗಾಗಿ ಆಟೋಗಳು ಹಾವೇರಿಯನ್ನೇ ಅವಲಂಬಿಸಿದ್ದು, ಕಳೆದ ಎರಡ್ಮೂರು ದಿನಗಳಿಂದಲೂ ಆಟೋದವರು ಬಂದು ವಾಪಸ್ ಹೋಗುತ್ತಿದ್ದಾರೆ. ಕೆಲವರು ತಮ್ಮ ಆಟೋಗಳನ್ನು ಇಲ್ಲಿಯೇ ಬಿಟ್ಟು ತೆರಳುತ್ತಿದ್ದಾರೆ. ಗದಗ ಜಿಲ್ಲೆಯ ನರಗುಂದದಲ್ಲಿ ಬಂಕ್ ಮುಂದೆ ಚಾಲಕರು ಬೆಳಗ್ಗೆ 4 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದರು.
(ಫೋಟೊ: ಬೆಳಗಾವಿಯ ಶಿಲ್ಪಾ ಗೋ ಗ್ಯಾಸ್ ಬಂದ್ - ಸ್ಟೇಟ್ ಫೋಟೊ).
--
₹59
ಯುದ್ಧ ಆರಂಭವಾದಾಗ ಇದ್ದ ದರ
₹89.52
ಸರ್ಕಾರಿ ಬಂಕ್‌ಗಳಲ್ಲಿ ಈಗಿನ ದರ
₹106
ಖಾಸಗಿ ಬಂಕ್‌ಗಳಲ್ಲಿ ಆಗಿರುವ ದರ
₹300
ಕೆಲವೆಡೆ ಚಾಲಕರಿಂದ ಸುಲಿಗೆ