2.5 ಲಕ್ಷ ಹೆಣ್ಮಕ್ಕಳಿಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಿಂದ ವಿದ್ಯಾರ್ಥಿವೇತನ

Published : May 16, 2025, 09:39 AM IST
Wipro Azim Premji

ಸಾರಾಂಶ

ಉನ್ನತ ಶಿಕ್ಷಣಕ್ಕೆ ದೇಶದ ಹೆಣ್ಣು ಮಕ್ಕಳನ್ನು ಉತ್ತೇಜಿಸಲು 2.5 ಲಕ್ಷ ವಿದ್ಯಾರ್ಥಿನಿಯರಿಗೆ ವ್ಯಾಸಂಗದ ಅವಧಿಯಲ್ಲಿ ಪ್ರತಿ ವರ್ಷ ತಲಾ 30 ಸಾವಿರ ರು. ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಿಸಿದೆ.

  ಬೆಂಗಳೂರು : ಉನ್ನತ ಶಿಕ್ಷಣಕ್ಕೆ ದೇಶದ ಹೆಣ್ಣು ಮಕ್ಕಳನ್ನು ಉತ್ತೇಜಿಸಲು ‘ಅಜೀಂ ಪ್ರೇಮ್‌ಜಿ ಫೌಂಡೇಷನ್‌’ ಕರ್ನಾಟಕ ಸೇರಿ 18 ರಾಜ್ಯಗಳಲ್ಲಿ 2025-26ನೇ ಸಾಲಿನಲ್ಲಿ ಪದವಿ/ಡಿಪ್ಲೊಮಾಗೆ ಪ್ರವೇಶ ಪಡೆಯುವ 2.5 ಲಕ್ಷ ವಿದ್ಯಾರ್ಥಿನಿಯರಿಗೆ ವ್ಯಾಸಂಗದ ಅವಧಿಯಲ್ಲಿ ಪ್ರತಿ ವರ್ಷ ತಲಾ 30 ಸಾವಿರ ರು. ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್ ಬೆಹರ್, ವಿದ್ಯಾರ್ಥಿ ವೇತನಕ್ಕೆ ಸರ್ಕಾರಿ ಶಾಲೆಗಳಲ್ಲಿ 10 ಮತ್ತು 12ನೇ ತರಗತಿ ಓದಿ ಉತ್ತೀರ್ಣರಾಗಿ ಪ್ರಸ್ತುತ ಸರ್ಕಾರಿ/ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ/ಡಿಪ್ಲೊಮಾ ವ್ಯಾಸಂಗಕ್ಕೆ ಪ್ರವೇಶ ಪಡೆದ ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸಬಹುದು. ಬರುವ ಸೆಪ್ಟೆಂಬರ್‌ 25ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು.

2024-25ನೇ ಸಾಲಿನಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಜಾರ್ಖಂಡ್‌ನ ವಿವಿಧ ಜಿಲ್ಲೆಗಳಲ್ಲಿ 25 ಸಾವಿರಕ್ಕೂ ಹೆಚ್ಚಿನ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡಲಾಗಿದೆ. ಈ ಬಾರಿ 18 ಜಿಲ್ಲೆಗಳಲ್ಲಿ 2.5 ಲಕ್ಷ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡುವ ಗುರಿ ಹೊಂದಲಾಗಿದೆ. ಕರ್ನಾಟಕ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಡಿಪ್ಲೊಮಾ/ಪದವಿ ವ್ಯಾಸಂಗಕ್ಕೆ ಸೇರಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು.

ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಿದವರಲ್ಲಿ ಫೌಂಡೇಷನ್‌ನ ಮಾನದಂಡಗಳನ್ನು ಅನುಸರಿಸಿ 2.5 ಲಕ್ಷ ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಮಾನದಂಡಗಳು ಹಾಗೂ ಯೋಜನೆಯ ಸಂಪೂರ್ಣ ವಿವರಗಳನ್ನು ಪ್ರಕ್ರಿಯೆ ಆರಂಭವಾಗುವ ವೇಳೆಗೆ ತಿಳಿಸಲಾಗುವುದು. ಆಯ್ಕೆಯಾದ ಪ್ರತಿ ವಿದ್ಯಾರ್ಥಿನಿಗೆ ಉನ್ನತ ಶಿಕ್ಷಣ ವ್ಯಾಸಂಗ ಪೂರ್ಣಗೊಳ್ಳುವವರೆಗೆ ಪ್ರತೀ ವರ್ಷ 30 ಸಾವಿರ ರು. ವಿದ್ಯಾರ್ಥಿವೇತನ ದೊರೆಯುತ್ತದೆ. ಉದಾಹರಣೆಗೆ ನಾಲ್ಕು ವರ್ಷದ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗದಲ್ಲಿ ಪ್ರತಿ ವರ್ಷ 30 ಸಾವಿರ ರು.ಗಳಂತೆ, 4 ವರ್ಷಕ್ಕೆ 1.20 ಲಕ್ಷ ರು. ವಾರ್ಷಿಕ ಎರಡು ಕಂತಿನಲ್ಲಿ ನೇರವಾಗಿ ವಿದ್ಯಾರ್ಥಿನಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಾಸರಗೋಡು ಕನ್ನಡಿಗರ ಮೇಲೆ ನಾವು ಮಲಯಾಳಂ ಹೇರುತ್ತಿಲ್ಲ : ಕೇರಳ ಸಿಎಂ
2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ