ಲಾಲ್‌ಬಾಗ್‌ನಲ್ಲೂ ರೀಲ್ಸ್‌, ಪ್ರೀ, ಪೋಸ್ಟ್‌ ವೆಡ್ಡಿಂಗ್‌ ಶೂಟ್ಸ್‌ ನಿಷೇಧ : ರಾಜ್ಯ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ

Published : Jun 14, 2025, 06:16 AM IST
Bengaluru lalbagh flower show 2025

ಸಾರಾಂಶ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಪ್ರೀ, ಪೋಸ್ಟ್‌ ವೆಡ್ಡಿಂಗ್‌ ಶೂಟ್ಸ್‌, ಬೇಬಿ, ಮಾಡೆಲಿಂಗ್‌ ಶೂಟ್ಸ್‌, ರೀಲ್ಸ್‌-ವೀಡಿಯೋ, ಸಿನಿಮಾ ಚಿತ್ರೀಕರಣಕ್ಕೆ ಕಡಿವಾಣ ಹಾಕಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.

ಸಂಪತ್‌ ತರೀಕೆರೆ

ಬೆಂಗಳೂರು : ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಪ್ರೀ, ಪೋಸ್ಟ್‌ ವೆಡ್ಡಿಂಗ್‌ ಶೂಟ್ಸ್‌, ಬೇಬಿ, ಮಾಡೆಲಿಂಗ್‌ ಶೂಟ್ಸ್‌, ರೀಲ್ಸ್‌-ವೀಡಿಯೋ, ಸಿನಿಮಾ ಚಿತ್ರೀಕರಣಕ್ಕೆ ಕಡಿವಾಣ ಹಾಕಲು ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ಕಬ್ಬನ್‌ ಉದ್ಯಾನದಲ್ಲಿ ರೀಲ್ಸ್‌, ಸಿನಿಮಾ, ಕಿರುತೆರೆ, ಪ್ರೀ ಮತ್ತು ಪೋಸ್ಟ್‌ ವೆಡ್ಡಿಂಗ್‌ ಶೂಟ್ಸ್‌ ಸೇರಿದಂತೆ ಇನ್ನಿತರ ಚಿತ್ರೀಕರಣಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಬೆನ್ನಲ್ಲೇ ಸಸ್ಯಕಾಶಿ ಲಾಲ್‌ಬಾಗ್‌ನಲ್ಲೂ ಚಿತ್ರೀಕರಣಕ್ಕೆ ನಿಷೇಧ ಹೇರಲು ಮುಂದಾಗಿರುವ ತೋಟಗಾರಿಕೆ ಕೆಲ ದಿನಗಳಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಲಾಲ್‌ಬಾಗ್‌ ಸಸ್ಯಶಾಸ್ತ್ರೀಯ ತೋಟ. ಇಲ್ಲಿ ಮರ-ಗಿಡಗಳ ಸಂಪೂರ್ಣ ಸಂರಕ್ಷಣೆಗೆ ಮೊದಲ ಆದ್ಯತೆ. ಇದು ಜೀವವೈವಿಧ್ಯತೆಯ ತಾಣ ಆಗಿರುವುದರಿಂದ ಪ್ರಾಣಿ, ಪಕ್ಷಿಗಳು ಸ್ವಚ್ಛಂದವಾಗಿ ವಾಸಿಸಲು ಯಾವುದೇ ರೀತಿಯ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶ ಹೊಂದಲಾಗಿದೆ. ಉದ್ಯಾನವನ ಸರ್ವರೂ ಒಪ್ಪುವಂತಿರಬೇಕು. ಈ ಕಾರಣಕ್ಕಾಗಿ ಚಿತ್ರೀಕರಣ ನಿಷೇಧಕ್ಕೆ ನಿರ್ಧರಿಸಲಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಪಾರ್ಕ್ಸ್‌ ಆ್ಯಂಡ್‌ ಗಾರ್ಡನ್ಸ್‌ ) ಡಾ.ಎಂ.ಜಗದೀಶ್‌.

ತಜ್ಞರ ಸಮಿತಿ ಚರ್ಚೆ:

ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ವರ್ಗೀಕರಣ ತಜ್ಞರು, ಸಸ್ಯಶಾಸ್ತ್ರಜ್ಞರು, ಪರಿಸರ ತಜ್ಞರು, ತೋಟಗಾರಿಕೆ ತಜ್ಞರನ್ನು ಒಳಗೊಂಡ ಲಾಲ್‌ಬಾಗ್‌ ಮತ್ತು ಕಬ್ಬನ್‌ ಉದ್ಯಾನ ವನಗಳ ಸಲಹಾ ಸಮಿತಿ ಉದ್ಯಾನದಲ್ಲಿ ಅನುಮತಿಸಬಹುದಾದ ಚಟುವಟಿಕೆಗಳು ಹಾಗೂ ನಿಷೇಧಿಸಬೇಕಾದ ಚಟುವಟಿಕೆಗಳು ಮತ್ತು ಪಾಲಿಸಬೇಕಾದ ನಿಯಮಗಳ ಕುರಿತು ಈಗಾಗಲೇ ಸಭೆಯೊಂದನ್ನು ನಡೆಸಿದೆ. ಮತ್ತೊಂದು ಸಭೆ ವಾರದೊಳಗೆ ನಡೆಯಲಿದ್ದು, ನಿಯಮಗಳ ಪಟ್ಟಿ ಮಾಡಲಿದೆ. ಆ ನಂತರ ತೋಟಗಾರಿಕೆ ಇಲಾಖೆ ನಿರ್ದೇಶಕರು ವರದಿಯನ್ನು ಅಂತಿಮಗೊಳಿಸಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಶೀಘ್ರ ಪ್ರಸ್ತಾವನೆ ಸಲ್ಲಿಕೆ

ಕಬ್ಬನ್‌ ಉದ್ಯಾನದಂತೆ ಲಾಲ್‌ಬಾಗ್‌ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ಫೋಟೋ, ವೀಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಲು ಯಲ್ಲಪ್ಪರೆಡ್ಡಿ ಅಧ್ಯಕ್ಷತೆಯ ಸಮಿತಿ ಸಲಹೆ ಮೇರೆಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಕುರಿತು ನಿಯಮಗಳ ಪಟ್ಟಿ ಸಿದ್ಧಪಡಿಸುತ್ತಿದ್ದು ಇಲಾಖೆ ನಿರ್ದೇಶಕರು ಅಂತಿಮ ತೀರ್ಮಾನ ಕೈಗೊಂಡ ಬಳಿಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.

-ಡಾ.ಎಂ.ಜಗದೀಶ್‌, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ

ಚಿತ್ರೀಕರಣ ನಿಷೇಧಕ್ಕೆ ಕಾರಣಗಳೇನು?:

* ಲಾಲ್‌ಬಾಗ್‌ನಲ್ಲಿ ಹೆಜ್ಜೇನುಗಳು ಗೂಡುಗಳನ್ನು ಕಟ್ಟಿಕೊಂಡಿವೆ. ಫೋಟೋ ಅಥವಾ ಸಿನಿಮಾ ಚಿತ್ರೀಕರಣ ಮಾಡುವವರಿಗೆ ದೊಡ್ಡ ಮರಗಳನ್ನು ಕಂಡರೆ ಆಕರ್ಷಣೆ ಜಾಸ್ತಿ. ಚಿತ್ರೀಕರಣ ವೇಳೆ ಫೋಟೋ ಫ್ಲ್ಯಾಶ್‌ ಲೈಟ್‌ಗಳಿಂದಾಗಿ ಜೇನುಗಳಿಗೆ ಕಿರಿಕಿರಿಯಾದರೆ ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ.

* ಪ್ರೀ ಮತ್ತು ಪೋಸ್ಟ್‌ ವೆಡ್ಡಿಂಗ್ ಶೂಟ್ಸ್‌ ವೇಳೆಯಲ್ಲಿ ಸಾರ್ವಜನಿಕ ಸ್ಥಳ ಎಂಬುದನ್ನು ಮರೆತು ಅಶ್ಲೀಲವಾಗಿ ಇತರರಿಗೆ ಮುಜುಗರ ತರಿಸುವಂತೆ ಫೋಟೋ, ವೀಡಿಯೋಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಉದ್ಯಾನವನಕ್ಕೆ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು, ಪ್ರವಾಸಿಗರು ಬರುತ್ತಿರುತ್ತಾರೆ. ಅಂತವರಿಗೆ ಮುಜುಗರವಾಗುವುದನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ.

* ಮುಖ್ಯವಾಗಿ ಗಿಡ, ಮರಗಳ ಮೇಲೆ ಕುಳಿತು ಫೋಟೋ, ವೀಡಿಯೋ ತೆಗೆಸಿಕೊಳ್ಳುವುದರಿಂದ ಗಿಡ ಮರಗಳಿಗೂ ಹಾನಿಯಾಗುತ್ತದೆ. ಜೊತೆಗೆ ಮರ ಹತ್ತಿ ರೆಂಬೆ ಕೊಂಬೆಗಳು ಮುರಿದು ಬಿದ್ದರೆ ಜೀವ ಹಾನಿಯೂ ಸಂಭವಿಸುವ ಸಾಧ್ಯತೆಯೂ ಇದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ