ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹60.48 ಕೋಟಿ ಮೌಲ್ಯದ 9.16 ಎಕರೆ ಸರ್ಕಾರಿ ಜಮೀನುಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹60.48 ಕೋಟಿ ಮೌಲ್ಯದ 9.16 ಎಕರೆ ಸರ್ಕಾರಿ ಜಮೀನುಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ.
ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ಶುಕ್ರವಾರ ವಿವಿಧ ತಾಲೂಕುಗಳ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಗೋಮಾಳ, ಸರ್ಕಾರಿ ಕುಂಟೆ, ಕುಂಡ್ಲು ಕೆರೆ, ಸರ್ಕಾರಿ ಕರೆ, ಕುಂಟೆ, ರಾಜಕಾಲುವೆ, ಸ್ಮಶಾನ, ಬಂಡಿದಾರಿ, ಗುಂಡುತೋಪು, ಸರ್ಕಾರಿ ಖರಾಬು, ಸರ್ಕಾರಿ ವನಗಳನ್ನು ವಶಕ್ಕೆ ಪಡೆದರು. ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ₹24 ಕೋಟಿ ಮೌಲ್ಯದ 4 ಎಕರೆ ಸರ್ಕಾರಿ ಸೇಂದಿವನ, ಕುದುರೆಗೆರೆ ಗ್ರಾಮದಲ್ಲಿ ₹7.50 ಕೋಟಿ ಮೌಲ್ಯದ 1.20 ಎಕರೆ ಗೋಮಾಳ, ಯಲಹಂಕ ತಾಲೂಕಿನ ಬೆಟ್ಟಹಲಸೂರು ಗ್ರಾಮದಲ್ಲಿ ₹14 ಕೋಟಿ ಮೌಲ್ಯದ 28 ಗುಂಟೆ ಗೋಮಾಳ ಒತ್ತುವರಿ ತೆರವು ಮಾಡಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಯಲಚೇನಹಳ್ಳಿ ಗ್ರಾಮದಲ್ಲಿ ₹6 ಕೋಟಿಯ ಗುಂಡುತೋಪು, ಪುರದಪಾಳ್ಯ ಗ್ರಾಮದಲ್ಲಿ ₹35 ಲಕ್ಷ ಮೌಲ್ಯದ ಬಂಡಿದಾರಿ, ಪೂರ್ವ ತಾಲೂಕಿನ ಕೊಡಿಗೆಹಳ್ಳಿ ಗ್ರಾಮದಲ್ಲಿ ₹2 ಕೋಟಿ ಮೌಲ್ಯದ 20 ಗುಂಟೆ ಸರ್ಕಾರಿ ಕುಂಟೆ, ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗ್ರಾಮದಲ್ಲಿ ₹1.70 ಕೋಟಿ ಮೌಲ್ಯದ 17 ಗುಂಟೆ ಕೆರೆ, ಕೆಂಚನಪುರ ಗ್ರಾಮದಲ್ಲಿ ₹1.75 ಕೋಟಿ ಮೌಲ್ಯದ 12 ಗುಂಟೆ ಸರ್ಕಾರಿ ಖರಾಬು ಜಮೀನು ಒತ್ತುವರಿಯನ್ನು ತೆರವು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.