ರಾಜ್ಯ ಕಾಂಗ್ರೆಸ್‌ ಸರ್ಕಾರದ 2ನೇ ವರ್ಷಾಚರಣೆ ಮುಂದಕ್ಕೆ - ಭಾರತ- ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ

Published : May 10, 2025, 05:40 AM IST
Karnataka Congress

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮೇ 20ರಂದು ಕಲ್ಯಾಣ ಕರ್ನಾಟಕದ ಹೊಸಪೇಟೆಯಲ್ಲಿ ನಡೆಸಲುದ್ದೇಶಿಸಿದ್ದ ಸಾಧನಾ ಸಮಾವೇಶ ಮುಂದೂಡಲಾಗಿದೆ.

 ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮೇ 20ರಂದು ಕಲ್ಯಾಣ ಕರ್ನಾಟಕದ ಹೊಸಪೇಟೆಯಲ್ಲಿ ನಡೆಸಲುದ್ದೇಶಿಸಿದ್ದ ಸಾಧನಾ ಸಮಾವೇಶ ಮುಂದೂಡಲಾಗಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಮುಂದೂಡಿರುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ ಶುಕ್ರವಾರ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ತನ್ನ ಎರಡು ವರ್ಷಗಳ ಸಾಧನೆ ಬಿಂಬಿಸುವ ಸಲುವಾಗಿ ವಿವಿಧ ಯೋಜನೆ ಫಲಾನುಭವಿಗಳು ಹಾಗೂ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರನ್ನು ಸೇರಿಸಿ ಬೃಹತ್‌ ಸಮಾವೇಶ ನಡೆಸಲು ಸಿದ್ಧತೆ ನಡೆಸಿತ್ತು. ವಿಶೇಷವಾಗಿ ಕಂದಾಯ ಇಲಾಖೆ ಮೂಲಕ 1 ಲಕ್ಷ ಕುಟುಂಬಗಳಿಗೆ ಡಿಜಿಟಲ್‌ ಹಕ್ಕುಪತ್ರ ವಿತರಣೆ ಮೂಲಕ ಸಾಧನಾ ಸಮಾವೇಶದ ಹಿರಿಮೆ ಹೆಚ್ಚಿಸಲು ನಿರ್ಧರಿಸಲಾಗಿತ್ತು.

ಹಟ್ಟಿ, ತಾಂಡಾ, ಹಾಡಿ ಮತ್ತಿತರ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ, ಅಲ್ಲಿನ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ‘ಸಿದ್ದರಾಮಯ್ಯ -2’ ಸರ್ಕಾರಕ್ಕೆ ಜನಪರ ಸರ್ಕಾರ ಎಂಬ ಸಂದೇಶ ಕೊಡಲು ಉದ್ದೇಶಿಸಲಾಗಿತ್ತು. ಅದಕ್ಕಾಗಿ ವಿಶೇಷವಾಗಿ, ಕಂದಾಯ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿತ್ತು.

ಆದರೆ ಇದೀಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಆಪರೇಷನ್‌ ಸಿಂದೂರ ಕಾರ್ಯಾಚರಣೆ ಮುಂದುವರೆದಿದೆ. ಈ ಹಂತದಲ್ಲಿ ಸೈನಿಕರಿಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ ಸಾಧನಾ ಸಮಾವೇಶ ಮುಂದೂಡಿರುವುದಾಗಿ ಮೂಲಗಳು ತಿಳಿಸಿವೆ.

PREV

Recommended Stories

ಟಿಎಪಿಸಿಎಂಎಸ್‌ನಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳು ಲಭ್ಯ
ಸಮಗ್ರ ಅರಿವಿನಿಂದ ಸ್ವಾತಂತ್ರ್ಯದ ಸಾಕಾರ: ಅರವಿಂದ್‌