ಅಂಗವಿಕಲ ಅಧಿಕಾರಿಗಳಿಗೆ ಬಡ್ತಿಯಲ್ಲಿ 4% ಮೀಸಲಾತಿ - ಗ್ರೂಪ್‌ ಎ, ಬಿ ಕಿರಿಯ ಶ್ರೇಣಿಯವರಿಗೆ ಲಾಭ

Follow Us

ಸಾರಾಂಶ

ಸರ್ಕಾರಿ ನೌಕರಿಯಲ್ಲಿರುವ ಅಂಗವಿಕಲ ಅಧಿಕಾರಿಗಳಿಗೆ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ತೀರ್ಮಾನ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

 ಬೆಂಗಳೂರು : ಸರ್ಕಾರಿ ನೌಕರಿಯಲ್ಲಿರುವ ಅಂಗವಿಕಲ ಅಧಿಕಾರಿಗಳಿಗೆ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ತೀರ್ಮಾನ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಗ್ರೂಪ್‌-ಬಿ ಮತ್ತು ಗ್ರೂಪ್‌-ಎನಲ್ಲಿ ಕಿರಿಯ ಶ್ರೇಣಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗವಿಕಲ ಅಧಿಕಾರಿಗಳಿಗೆ ಮುಂಬಡ್ತಿಯಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ನೀಡಲಾಗುವುದು. ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ 2016ರ ಅನ್ವಯ ಸುಪ್ರೀಂಕೋರ್ಟ್‌ ಆದೇಶದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಇನ್ನು ಕರ್ನಾಟಕ ಕಾರ್ಮಿಕ ರಾಜ್ಯ ವಿಮಾ ಯೋಜನೆ (ವೈದ್ಯಕೀಯ) ಸೇವೆಗಳ ನಿಯಮದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದರೆ ಅದರಲ್ಲಿ ಸಣ್ಣಪುಟ್ಟ ವಿಚಾರಗಳನ್ನು ಸಚಿವ ಸಂಪುಟ ಸಭೆ ಮುಂದೆ ಮಂಡಿಸದೆ ಅದನ್ನು ಇಲಾಖಾ ಹಂತದಲ್ಲಿಯೇ ಅಂತಿಮಗೊಳಿಸಲು ಅವಕಾಶ ನೀಡಲಾಗಿದೆ. ನಿಯಮಗಳಿಗೆ ಯಾವುದೇ ಆಕ್ಷೇಪಣೆ/ಸಲಹೆಗಳು ಪ್ರಮುಖವಾಗಿದ್ದರೆ ಮಾತ್ರ ಸಚಿವ ಸಂಪುಟ ಸಭೆಯಲ್ಲಿ ತರಬಹುದು. 17 ವರ್ಷಗಳಾಗಿದ್ದರೂ ಇಎಸ್‌ಐಎಸ್‌ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಂಪೂರ್ಣವಾಗಿ ಮರುಪರಿಶೀಲನೆ ನಡೆಸಿಲ್ಲ. ಹೀಗಾಗಿ ಈ ಬಗ್ಗೆ ಗಮನಹರಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.