ಆಸ್ತಿ ತೆರಿಗೆ ವಂಚಿಸಿದ 4 ಲಕ್ಷ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ಬಿಸಿ

Published : May 26, 2025, 05:36 AM IST
BBMP latest news today photo

ಸಾರಾಂಶ

ಡ್ರೋನ್‌ ಸರ್ವೇ ಮಾಹಿತಿ ಆಧಾರಿಸಿ ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ವಂಚಿಸಿದ ನಾಲ್ಕು ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಲು ಪಾಲಿಕೆ ಮುಂದಾಗಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು  : ಡ್ರೋನ್‌ ಸರ್ವೇ ಮಾಹಿತಿ ಆಧಾರಿಸಿ ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ವಂಚಿಸಿದ ನಾಲ್ಕು ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಲು ಪಾಲಿಕೆ ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಲಕ್ಷಕ್ಕೂ ಅಧಿಕ ಆಸ್ತಿಗಳಿದ್ದರೂ ಸಂಗ್ರಹವಾಗುತ್ತಿರುವ ಆಸ್ತಿ ತೆರಿಗೆ ವಾರ್ಷಿಕ ಐದು ಸಾವಿರ ಕೋಟಿ ರು. ದಾಟುತ್ತಿಲ್ಲ. ಬಹುತೇಕ ಆಸ್ತಿ ಮಾಲೀಕರು ಬಿಬಿಎಂಪಿಯ ಸ್ವಯಂ ಘೋಷಣೆಯ (ಎಸ್‌ಎಎಸ್‌) ಪದ್ಧತಿಯಡಿ ತಪ್ಪು ಆಸ್ತಿ ವಿಸ್ತೀರ್ಣದ ಮಾಹಿತಿ ದಾಖಲಿಸಿ ತೆರಿಗೆ ವಂಚನೆ ಮಾಡುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂತಹ ಆಸ್ತಿ ಮಾಲೀಕರಿಗೆ ಬಿಸಿ ಮುಟ್ಟಿಸಲು ಪಾಲಿಕೆ ಕಂದಾಯ ವಿಭಾಗ ನಿರ್ಧರಿಸಿದೆ. ಡ್ರೋನ್‌ ಸರ್ವೇ ಮಾಹಿತಿ ಬಳಕೆ

ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 15 ಲಕ್ಷ ಆಸ್ತಿಗಳ ವಿಸ್ತೀರ್ಣವನ್ನು ನಗರ ಆಸ್ತಿ ಮಾಲೀಕತ್ವದ ದಾಖಲೆಗಳು (ಯುಪಿಒಆರ್‌) ಇಲಾಖೆಯಿಂದ ಡ್ರೋನ್‌ ಸರ್ವೇ ಮೂಲಕ ಸಂಗ್ರಹಿಸಲಾಗಿದೆ. ಬಿಬಿಎಂಪಿಯಿಂದ ಪ್ರತಿ ಆಸ್ತಿಗಳ ಜಿಪಿಎಸ್‌ ಆಧರಿಸಿ ಫೋಟೋ ಹಾಗೂ ಮಾಹಿತಿ ಸಂಗ್ರಹಿಸಲಾಗಿದೆ. ಈ ಎರಡೂ ಮಾಹಿತಿ ತಾಳೆ ಹಾಕುವುದು. ಜತೆಗೆ, ಇ ಖಾತಾ ಪಡೆಯಲು ಆಸ್ತಿ ಮಾಲೀಕರು ಸಲ್ಲಿಸಿರುವ ದಾಖಲೆ ಬಳಸಿಕೊಂಡು ತಪ್ಪು ಮಾಹಿತಿ ನೀಡಿದ ಆಸ್ತಿಗಳನ್ನು ಗುರುತಿಸಲಾಗುತ್ತಿದೆ. ಉದಾಹರಣೆಗೆ, ಡ್ರೋನ್‌ ಸರ್ವೇ ಮಾಹಿತಿ, ಬಿಬಿಎಂಪಿಯ ಅಧಿಕಾರಿಗಳು ಸಂಗ್ರಹಿಸಲಾದ ಆಸ್ತಿ ಫೋಟೋ ಅಥವಾ ಈ ಖಾತಾಕ್ಕೆ ಆ ಆಸ್ತಿ ಮಾಲೀಕ ಸಲ್ಲಿಕೆ ಮಾಡಿದ ದಾಖಲಾತಿಗಳನ್ನು ಆಧರಿಸಿ ಕಟ್ಟಡ ಎಷ್ಟು ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಎಷ್ಟು ಮಹಡಿ ಹಾಗೂ ಎತ್ತರ ಇದೆ ಎಂಬ ಮಾಹಿತಿಯನ್ನು ಆಧರಿಸಿ ಇಡೀ ಕಟ್ಟಡ ವಿಸ್ತೀರ್ಣವನ್ನು ಬಿಬಿಎಂಪಿ ಲೆಕ್ಕಾಚಾರ ಹಾಕಲಿದೆ. ಇದರಲ್ಲಿ ವ್ಯತ್ಯಾಸ ಕಂಡು ಬಂದರೆ ನೋಟಿಸ್‌ ನೀಡಲಾಗುತ್ತದೆ.

ಆಟೋಮ್ಯಾಟಿಕ್‌ ನೋಟಿಸ್‌ ತಪ್ಪು ಮಾಹಿತಿ ನೀಡಿದ ಆಸ್ತಿ ಮಾಲೀಕರು, ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿ ಪೋರ್ಟಲ್‌ಗೆ ನೀಡಿದ ಫೋನ್‌ ನಂಬರ್‌ಗೆ ಸ್ವಯಂ ಪ್ರೇರಿತವಾಗಿ ಆಗಿ ನೋಟಿಸ್‌ ರವಾನೆ ಆಗುವಂತೆ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಿಬಿಎಂಪಿಯ ಅಧಿಕಾರಿಗಳ ಪ್ರಕಾರ ಸದ್ಯ ನಾಲ್ಕು ಲಕ್ಷ ಆಸ್ತಿ ಮಾಲೀಕರು ತಪ್ಪು ಮಾಹಿತಿ ನೀಡಿರುವುದು ಪತ್ತೆಯಾಗಿದ್ದು, ಶೀಘ್ರದಲ್ಲಿ ನೋಟಿಸ್‌ ರವಾನೆ ಆಗಲಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

1 ಸಾವಿರ ಕೋಟಿ ರು, ಸಂಗ್ರಹ ನಿರೀಕ್ಷೆ ಈಗಾಗಲೇ ನಾಲ್ಕು ಲಕ್ಷ ತಪ್ಪು ಆಸ್ತಿ ಘೋಷಣೆ ಮಾಡಿಕೊಂಡಿರುವ ಆಸ್ತಿಗಳನ್ನು ಬಿಬಿಎಂಪಿಯ ಕಂದಾಯ ವಿಭಾಗ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಗುರುತಿಸುವ ಆಸ್ತಿಗಳು ಸೇರಿದಂತೆ ಒಟ್ಟಾರೆ ಹೆಚ್ಚುವರಿ ಒಂದು ಸಾವಿರ ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ. ತಪ್ಪು ಮಾಹಿತಿ ನೀಡಿದವರಿಗೆ ತಪ್ಪು ಮಾಹಿತಿ ನೀಡಿದ ಆಸ್ತಿ ವಿಸ್ತೀರ್ಣದ ಆಸ್ತಿ ತೆರಿಗೆ ಹಾಗೂ ದಂಡದೊಂದಿಗೆ ವಸೂಲಿ ಮಾಡಲಾಗುತ್ತಿದೆ.

ಬಿಬಿಎಂಪಿ ಭಾನುವಾರದ ವರೆಗೆ 2036 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸಿದೆ. ಮೇ 31ರ ವೇಳೆ ಮೂರು ಸಾವಿರ ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಜೂನ್‌ 1ರಿಂದ ಸುಸ್ತಿದಾರರಿಗೆ ನೋಟಿಸ್‌?

2025-26ನೇ ಸಾಲಿನಲ್ಲಿ ಬಿಬಿಎಂಪಿಯು ಸುಮಾರು 6 ಸಾವಿರ ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಮೇ ಅಂತ್ಯದವರೆಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಜೂನ್‌ ನಿಂದ ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಲಯವಾರು ಪಟ್ಟಿ ಸಿದ್ಧಪಡಿಸಿಕೊಂಡು ನೋಟಿಸ್‌ ನೀಡಲು ಚಾಲನೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಆಸ್ತಿ ಜಪ್ತಿ ಹಾಗೂ ಹರಾಜು ಹಾಕುವ ಕಾರ್ಯವನ್ನೂ ಮಾಡಲಾಗುವುದು ಎಂದು ಕಂದಾಯ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ