ಲೋಕಾ ದಾಳಿಗೆ ಬೃಹತ್‌ ಗೊಲ್ಮಾಲ್‌ ಬಯಲು - ಕರ್ತವ್ಯಕ್ಕೆ ಹಾಜರಾಗದೆ ಪುಸ್ತಕದಲ್ಲಿ ಮಾತ್ರ ಸಹಿ

Published : Jan 14, 2025, 07:08 AM IST
BBMP

ಸಾರಾಂಶ

ಇತ್ತೀಚೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಗಳಿಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಭೇಟಿ ನೀಡಿದ ವೇಳೆ ಹಲವು ಲೋಪದೋಷಗಳ ಸರಮಾಲೆಯೇ ಕಂಡುಬಂದಿದ್ದು, ಅವ್ಯವಸ್ಥೆಯ ಆಗರವೇ ಗೋಚರವಾಗಿದೆ.

  ಬೆಂಗಳೂರು : ಇತ್ತೀಚೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಗಳಿಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಭೇಟಿ ನೀಡಿದ ವೇಳೆ ಹಲವು ಲೋಪದೋಷಗಳ ಸರಮಾಲೆಯೇ ಕಂಡುಬಂದಿದ್ದು, ಅವ್ಯವಸ್ಥೆಯ ಆಗರವೇ ಗೋಚರವಾಗಿದೆ.

ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌, ಉಪಲೋಕಾಯುಕ್ತರಾದ ನ್ಯಾ.ಕೆ.ಎನ್‌.ಫಣಿಂದ್ರ ಮತ್ತು ನ್ಯಾ.ಬಿ.ವೀರಪ್ಪ ಅವರು ಸೇರಿದಂತೆ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಅಧಿಕಾರಿ, ನ್ಯಾಯಾಂಗ ಅಧಿಕಾರಿಗಳು ಪಾಲಿಕೆಯ 50 ಆರ್‌ಒ ಮತ್ತು ಎಆರ್‌ಒ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಕಾಲ ಯೋಜನೆಯಡಿ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡದೆ ಅರ್ಜಿಗಳನ್ನು ಉಳಿಸಿಕೊಂಡಿರುವುದು ಗೊತ್ತಾಗಿದೆ.

ಕರ್ತವ್ಯಕ್ಕೆ ಹಾಜರಾದಾಗ ಪ್ರತಿನಿತ್ಯ ಸಹಿ ಮಾಡಲು ಹಾಜರಾತಿ ಪುಸ್ತಕವನ್ನು ನಿರ್ವಹಣೆ ಮಾಡದಿರುವುದು ಬೆಳಕಿಗೆ ಬಂದಿದೆ. ಕತ್ಯವ್ಯದ ಮೇಲೆ ಹೊರಗೆ ಹೋದರೆ ಅದರ ಮಾಹಿತಿಯನ್ನು ನಮೂದಿಸುತ್ತಿಲ್ಲ. ಪಾಲಿಕಯ ನೌಕರರು ಮತ್ತು ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಹಾಜರಾದಾಗ ತಮ್ಮ ಬಳಿ ಇರುವ ನಗದಿನ ಬಗ್ಗೆ ಯಾವುದೇ ಘೋಷಣೆ ಮಾಡುತ್ತಿಲ್ಲ. ಕೆಲವೆಡೆ ಕಚೇರಿಯಲ್ಲಿದ್ದ ಅಧಿಕಾರಿ/ಸಿಬ್ಬಂದಿ ಬಳಿ ನಗದು ಘೋಷಣಾ ಪುಸ್ತಕದಲ್ಲಿ ನಮೂದು ಮಾಡಿರುವುದಕ್ಕಿಂತ ಹೆಚ್ಚುವರಿ ಹಣ ದೊರೆತಿದೆ. ಖಾಸಗಿ ವ್ಯಕ್ತಿಗಳನ್ನು ಅನಧಿಕೃತವಾಗಿ ಕಚೇರಿ ಕರ್ತವ್ಯಕ್ಕೆ ನೇಮಿಸಿಕೊಂಡು ಅಧಿಕಾರಿಗಳೇ ಸಂಭಾವನೆ ನೀಡುತ್ತಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ.

ಅಕ್ರಮ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ನಕಾರ

ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮತ್ತು ಸ್ಥಳ ಪರಿಶೀಲನೆ ಮಾಡುವ ಯಾವುದೇ ಕ್ರಮ ಕೈಗೊಳ್ಳದಿರುವುದು ಬೆಳಕಿಗೆ ಬಂದಿದೆ. ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ಮಾಹಿತಿ ಇರುವ ನಾಮ ಫಲಕವನ್ನು ಅಳವಡಿಸಿಲ್ಲ. ಟೆಂಡರ್‌ ಅಧಿಸೂಚನೆಯನ್ನು ಹೊರಡಿಸಿ, ಕಾಮಗಾರಿಗಳನ್ನು ಪೂರ್ಣಗೊಂಡ ಬಗ್ಗೆ ಮತ್ತು ಕಾಮಗಾರಿಗಳ ಪ್ರಕ್ರಿಯೆಯ ಕುರಿತು ಪರಿಶೀಲನೆ ಮಾಡಿಲ್ಲ. ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಅರ್ಜಿಗಳಲ್ಲಿ ತಿರಸ್ಕೃತ ಮಾಡಿದ ಅರ್ಜಿಗಳ ಬಗ್ಗೆ ಅರ್ಜಿದಾರರಿಗೆ ಯಾವುದೇ ಮಾಹಿತಿ ನೀಡದಿರುವುದು ಗೊತ್ತಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ತಿಳಿಸಿದೆ.

ತಾಯಿ ಬದಲು ಮಗ ಹಾಜರಾಗಿದ್ದಕ್ಕೆ ಇಬ್ಬರು ಅಧಿಕಾರಿಗಳು ಅಮಾನತು 

ಬೆಂಗಳೂರು : ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ತಮ್ಮ ಬದಲಿಗೆ ಮಗನನ್ನು ಕೆಲಸಕ್ಕೆ ಕಳುಹಿಸಿದ್ದ ಬಿಬಿಎಂಪಿ ದಕ್ಷಿಣ ವಲಯ ಕೆಂಪೇಗೌಡ ನಗರ ಉಪವಿಭಾಗ ಕಚೇರಿಯ ಎಸ್‌ಡಿಎ ಕವಿತಾ ಸೇರಿದಂತೆ ಇಬ್ಬರನ್ನು ಅಮಾನತು ಮಾಡಿ ಬಿಬಿಎಂಪಿ ಆಡಳಿತ ವಿಭಾಗ ಅಮಾನತು ಮಾಡಿ ಆದೇಶಿಸಿದೆ.

ಬಿಬಿಎಂಪಿ ದಕ್ಷಿಣ ವಲಯದ ಕೆಂಪೇಗೌಡ ನಗರ ಉಪವಿಭಾಗದ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಸೇರಿದಂತೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಬಂದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಜ.10ರಂದು ಕಚೇರಿ ಮೇಲೆ ದಾಳಿ ಮಾಡಿದ್ದರು. ಆಗ ಎಸ್‌ಡಿಎ ಕವಿತಾ ಅವರ ಮಗ ತಮ್ಮ ತಾಯಿಯ ಲಾಗಿನ್‌ ಐಡಿ, ಪಾಸ್‌ವರ್ಡ್‌ ಬಳಸಿ ಇ-ಖಾತಾ ತಿದ್ದುಪಡಿ ಮಾಡಿ ಮುಂದಿನ ಕ್ರಮಕ್ಕೆ ಮಂಡಿಸುತ್ತಿರುವುದು ಪತ್ತೆಯಾಗಿದೆ.

ಪೊಲೀಸ್‌ ಠಾಣೆಗೆ ಲೋಕಾ ದೂರು:

ಈ ಬಗ್ಗೆ ಲೋಕಾಯುಕ್ತ ಪೊಲೀಸರು ಪ್ರಶ್ನಿಸಿದಾಗ ಕವಿತಾ ಅವರ ಮಗ, ತಮ್ಮ ಅಮ್ಮ ಮನೆಯಲ್ಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ನಾನು ಕೆಲಸಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದ. ಈ ಕುರಿತಂತೆ ಲೋಕಾಯುಕ್ತ ಪೊಲೀಸರು ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಕವಿತಾ ಹಾಗೂ ಅವರ ಮಗನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿ ಆಡಳಿತ ವಿಭಾಗ ಕವಿತಾ ಅವರನ್ನು ಅಮಾನತು ಮಾಡಿದೆ. ಅದೇ ರೀತಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಈ ರೀತಿಯ ಅವ್ಯವಸ್ಥೆ ನಡೆಯುತ್ತಿದ್ದರೂ, ಅದನ್ನು ತಡೆಯದ ಎಆರ್‌ಒ ಸುಜಾತಾ ಅವರನ್ನೂ ಅಮಾನತು ಮಾಡಿ ಆದೇಶಿಸಲಾಗಿದೆ.

PREV

Recommended Stories

ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ