ಬಿಬಿಎಂಪಿಯ 33 ಪ್ರೌಢ ಶಾಲೆಯ 2,257 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿ 1,759 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಬೆಂಗಳೂರು : ಬಿಬಿಎಂಪಿಯ 33 ಪ್ರೌಢ ಶಾಲೆಯ 2,257 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿ 1,759 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ.55.78 ರಷ್ಟು ಫಲಿತಾಂಶ ಬಂದಿದೆ.
ಈ ಪೈಕಿ ಬಿಬಿಎಂಪಿಯ ಶಾಲೆಯ ಮೂವರು ವಿದ್ಯಾರ್ಥಿನಿಯರು ಶೇ.95ಕ್ಕಿಂತ ಹೆಚ್ಚಿನ ಅಂಕ ಪಡೆದುಕೊಂಡಿದ್ದು, ಒಟ್ಟಾರೆ 78 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಬಿಬಿಎಂಪಿ ಬಸವನಗುಡಿ ಪ್ರೌಢಶಾಲೆ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಶಾಂತಿ ನಗರ ಪ್ರೌಢಶಾಲೆಯು ಶೇ.88.89ರಷ್ಟು, ಶ್ರೀರಾಮಪುರ ಪ್ರೌಢಶಾಲೆಯು ಶೇ.86.21ರಷ್ಟು ಫಲಿತಾಂಶ ಪಡೆದಿದೆ. ಆದರೆ, ಪರೀಕ್ಷೆಗೆ ಹಾಜರಾಗಿದ್ದ ಕಾಕ್ಸ್‌ಟೌನ್ ಪ್ರೌಢ ಶಾಲೆಯ 10 ವಿದ್ಯಾರ್ಥಿಗಳೂ ಅನುತ್ತೀರ್ಣಗೊಂಡಿದ್ದಾರೆ.
ಬಿಬಿಎಂಪಿ 33 ಪ್ರೌಢ ಶಾಲೆಗಳ ಪೈಕಿ 14 ಶಾಲೆಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದಿವೆ. 19 ಶಾಲೆಗಳು ಶೇ.50ಕ್ಕಿಂತ ಕಡಿಮೆ ಫಲಿತಾಂಶ ಪಡೆದುಕೊಂಡಿವೆ. ಹೇರೋಹಳ್ಳಿ ಪ್ರೌಢಶಾಲೆಯ ಬಿ.ಆರ್.ಶಾಲಿನಿ 614 (ಶೇ.98.24), ಶ್ರೀರಾಮಪುರ ಪ್ರೌಢಶಾಲೆಯ ಡಿ.ರಾಜೇಶ್ವರಿ 610 (ಶೇ 97.60) ಅಂಕ ಪಡೆದಿದ್ದಾರೆ.
78 ವಿದ್ಯಾರ್ಥಿಗಳಿಗೆ ತಲಾ ₹25 ಸಾವಿರ:
ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 78 ವಿದ್ಯಾರ್ಥಿಗಳಿಗೆ ಬಿಬಿಎಂಪಿಯಿಂದ ತಲಾ ₹25 ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.