ನಗರದಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ.
ಬೆಂಗಳೂರು : ನಗರದಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಬೆಂಗಳೂರು ವಿಶ್ವದ ಗಮನ ಸೆಳೆಯುವ ನಗರವಾಗಿರುವುದರಿಂದ ಯಾವುದನ್ನು ನಿರ್ಲಕ್ಷಿಸದೇ ಅತ್ಯಂತ ಜವಾಬ್ಧಾರಿಯುತವಾಗಿ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಿಡಿಗೇಡಿಗಳ ಮೇಲೆ ನಿಗಾ ಇರಿಸಿ:
ಗುಪ್ತದಳ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣ ಪುಟ್ಟ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಹೊಸ ವರ್ಷ ಆಚರಿಸುವವರಿಗೆ ಆಡಚಣೆ ಮಾಡುವುದು ಬೇಡ. ಅವರಿಗೆ ಸುರಕ್ಷತೆ ನೀಡಬೇಕು. ತೊಂದರೆ ಉಂಟು ಮಾಡುವ ಕಿಡಿಗೇಡಿಗಳ ಮೇಲೆ ನಿಗಾ ವಹಿಸಿ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಡಿಸಿಪಿಗಳೇ ಹೊಣೆಗಾರರು:
ಅಗತ್ಯ ಬಂದೋಬಸ್ತ್ ಹಿನ್ನಲೆಯಲ್ಲಿ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಜೆ ನೀಡುವುದು ಬೇಡ. ತೀರ ಅಗತ್ಯತೆ ಮತ್ತು ಅನಿವಾರ್ಯತೆ ಇದ್ದವರಿಗೆ ರಜೆ ನೀಡಿ. ಕ್ರಿಸ್‌ಮಸ್ ಮತ್ತು ಹೊಸ ವರ್ಷ ಆಚರಣೆ ವೇಳೆ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದರೆ ಸಂಬಂಧಪಟ್ಟ ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್‌ಗಳನ್ನೇ ಹೊಣೆ ಮಾಡಲಾಗುವುದು. ಈ ವಿಚಾರದಲ್ಲಿ ಯಾರು ಏನೇ ಹೇಳಿದರು ಕೇಳುವುದಿಲ್ಲ ಎಂದು ಎಚ್ಚರಿಸಿದರು.
ಬಿಬಿಎಂಪಿ, ಬಿಎಂಟಿಸಿ ಬಿಎಂಆರ್‌ಸಿಎಲ್, ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆಯ ನೆರವು ಪಡೆದುಕೊಳ್ಳಬೇಕು. ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಬೇಕು. ಡ್ರಂಕ್ ಆ್ಯಂಡ್ ಡ್ರೈವ್, ಬೈಕ್ ವ್ಹೀಲಿಂಗ್ ಮಾಡುವ ಕಿಡಿಗೇಡಿಗಳು ಹಾಗೂ ಹಳೇ ಪ್ರಕರಣಗಳ ಆರೋಪಿಗಳ ಮೇಲೆ ನಿಗಾ ಇರಿಸಬೇಕು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಪ್ರತಿ ವರ್ಷದ ದೇಶದಲ್ಲಿ ಕ್ರಿಸ್‌ಮಸ್ ಮತ್ತು ಹೊಸವರ್ಷಾಚರಣೆ ಬಹಳ ಸಂಭ್ರಮದಿಂದ ಮಾಡಲಾಗುತ್ತದೆ. ಬೆಂಗಳೂರಿನಲ್ಲೂ ಸಂಭ್ರಮ ಜೋರಾಗಿರುತ್ತದೆ. ಈ ಹಿಂದೆ ಕೆಲವು ಅಹಿತಕರ ಘಟನೆಗಳು ನಡೆದಿವೆ. ಹೀಗಾಗಿ ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಈಗಾಗಲೇ ಮಾಡಿಕೊಂಡಿರುವ ತಯಾರಿ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.
ಮಹಿಳೆಯರ ಸುರಕ್ಷತೆಗೆ ಹೆಚ್ಚು ಗಮನ:
ಸಂಭ್ರಮಾಚರಣೆ ವೇಳೆ ಸಾರ್ವಜನಿಕ ಸಂತೋಷಕ್ಕೆ ಅಡಚಣೆಯಾಗಬಾರದು. ವಿಶೇಷವಾಗಿ ಮಹಿಳೆಯರ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧ ಇಲ್ಲ. ಗೊಂದಲ ಆಗದಂತೆ ಕೆಲವೊಂದು ನಿಯಮಗಳು ಇರುತ್ತವೆ. ಮೆಟ್ರೋ ವ್ಯವಸ್ಥೆ, ಓಲಾ, ಊಬರ್ ಮುಂತಾದ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗಿದೆ ಎಂದು ಹೇಳಿದರು.
7 ಲಕ್ಷ ಮಂದಿ ಸೇರುವ ಸಾಧ್ಯತೆ:
ಈ ಬಾರಿ ಬೆಂಗಳೂರಿನಲ್ಲಿ ಸುಮಾರು 7 ಲಕ್ಷ ಮಂದಿ ಹೊಸ ವರ್ಷಾಚರಣೆಗೆ ಸೇರುವ ನಿರೀಕ್ಷೆ ಇದೆ. ಹೀಗಾಗಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಅಹಿತಕರ ಘಟನೆಗಳು ನಡೆದರೆ, ಆಯಾಯ ಡಿಸಿಪಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದರು. ಈ ವೇಳೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತಾ ಹಾಗೂ ಎಲ್ಲಾ ವಿಭಾಗಗಳ ಡಿಸಿಪಿಗಳು ಹಾಗೂ ಎಸಿಪಿಗಳು ಉಪಸ್ಥಿತರಿದ್ದರು.