ಬೆಂಗಳೂರು : ಪಾಲಿಕೆ ವಿಭಜನೆ ವರದಿ ಸಂಪುಟದಲ್ಲಿ ಮಂಡನೆ : ಡಿಸಿಎಂ

Published : Jul 08, 2025, 09:26 AM IST
Karnataka Deputy Chief Minister DK Shivakumar (Photo/ANI)

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪಾಲಿಕೆಗಳನ್ನು ಹೇಗೆ ವಿಂಗಡಿಸಬೇಕು ಹಾಗೂ ಎಷ್ಟು ಪಾಲಿಕೆ ರಚಿಸಬೇಕು ಎಂಬುದರ ಬಗ್ಗೆ ಸಮಿತಿ ಅಂತಿಮ ವರದಿ ನೀಡಿದ್ದು, ಈ ಬಗ್ಗೆ  ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

  ಬೆಂಗಳೂರು :  ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪಾಲಿಕೆಗಳನ್ನು ಹೇಗೆ ವಿಂಗಡಿಸಬೇಕು ಹಾಗೂ ಎಷ್ಟು ಪಾಲಿಕೆ ರಚಿಸಬೇಕು ಎಂಬುದರ ಬಗ್ಗೆ ಸಮಿತಿ ಅಂತಿಮ ವರದಿ ನೀಡಿದ್ದು, ಈ ಬಗ್ಗೆ ಪ್ರತಿಪಕ್ಷದ ನಾಯಕರೊಂದಿಗೆ ಚರ್ಚಿಸಿ ವಿಶ್ವಾಸಕ್ಕೆ ಪಡೆದು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕುರಿತು ಸೋಮವಾರ ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗ ಹಾಲಿ ಇರುವ ಪಾಲಿಕೆ ವ್ಯಾಪ್ತಿಯಲ್ಲೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿಗೊಳಿಸಿದ್ದೇವೆ. ಇಷ್ಟೇ ವ್ಯಾಪ್ತಿಗೆ ಈಗ ಪಾಲಿಕೆಗಳನ್ನು ವಿಂಗಡಿಸಲಾಗುವುದು. ಮುಂದೆ ಈ ವ್ಯಾಪ್ತಿ ವಿಸ್ತರಿಸಲಾಗುವುದು. ಆದಷ್ಟು ಬೇಗ ವಿಷಯವನ್ನು ಸಚಿವ ಸಂಪುಟ ಸಭೆ ಪ್ರಸ್ತಾಪಿಸಿ ನಿರ್ಣಯಿಸಲಿದ್ದು, ಬಳಿಕ ಚುನಾವಣೆ ನಡೆಸಬೇಕಿದೆ ಎಂದು ಹೇಳಿದರು.

3-5 ಪಾಲಿಕೆ ರಚನೆಗೆ ಚರ್ಚೆ:

ಇದಕ್ಕೂ ಮೊದಲು ಸಭೆಯಲ್ಲಿ 3 ರಿಂದ 5 ಪಾಲಿಕೆಗಳನ್ನು ರಚಿಸುವ ಬಗ್ಗೆ ಹಾಗೂ ಹೊಸ ಪಾಲಿಕೆಗಳನ್ನು ರಚಿಸುವುದರಿಂದ ಉಂಟಾಗುವ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಮುಂದಿನ 30- 40 ವರ್ಷಗಳ ಭವಿಷ್ಯದ ದೃಷ್ಟಿಯಿಂದ ಐದು ಪಾಲಿಕೆಗಳನ್ನು ರಚಿಸಬೇಕು. ಆಗ ಬೆಂಗಳೂರು ನಗರದ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ಚರ್ಚೆಯಾಯಿತು. ಕನಿಷ್ಠ ಒಂದು ಪಾಲಿಕೆಗೆ 80 ರಿಂದ 100 ವಾರ್ಡ್ ಮಾಡಬಹುದು. ಚುನಾವಣೆ ನಡೆಸಬೇಕಿರುವುದರಿಂದ ಆದಷ್ಟು ಬೇಗ ಪ್ರಕ್ರಿಯೆ ಶುರು ಮಾಡಬೇಕು ಎಂದು ಚರ್ಚಿಸಿರುವುದಾಗಿ ಮೂಲಗಳು ತಿಳಿಸಿವೆ.

ಸಭೆ ಬಳಿಕ ಮಾತನಾಡಿದ ಶಾಸಕ ರಿಜ್ವಾನ್‌ ಅರ್ಷದ್‌, ಪಾಲಿಕೆ ವಿಭಜನೆ ಮಾಡಿ ವಾರ್ಡ್‌ ರಚನೆ ಮಾಡಿದ ತಕ್ಷಣ ಮೀಸಲಾತಿ ಹಾಗೂ ಮತದಾರರ ಪಟ್ಟಿ ಅಂತಿಮಗೊಳಿಸಿದ ಬಳಿಕ ಚುನಾವಣೆ ನಡೆಸಬೇಕು. ಹೀಗಾಗಿ ಈ ಪ್ರಕ್ರಿಯೆಯನ್ನು ವೇಗವಾಗಿ ಮುಗಿಸಿ ಡಿಸೆಂಬರ್‌ನಲ್ಲಿ ಚುನಾವಣೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ವಿರೋಧಪಕ್ಷದ ಸದಸ್ಯರೊಂದಿಗೆ ವಿಧಾನಸೌಧದಲ್ಲಿ ಈಗಾಗಲೇ ಚರ್ಚೆಯಾಗಿದೆ. ಅವರ ಅಭಿಪ್ರಾಯಗಳನ್ನೂ ಗಮನದಲ್ಲಿಟ್ಟುಕೊಂಡು ವರದಿ ತಯಾರು ಮಾಡಿದ್ದೇವೆ. ಮತ್ತೊಮ್ಮೆ ವಿರೋಧಪಕ್ಷದ ಸದಸ್ಯರೊಂದಿಗೂ ಸಂಪರ್ಕ ಮಾಡಿ ಸರ್ಕಾರ ಅಂತಿಮ ನಿರ್ಧಾರ ಮಾಡಲಿದೆ ಎಂದರು.

ಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್, ಬ್ರಾಂಡ್ ಬೆಂಗಳೂರು ಸಮಿತಿ ಅಧ್ಯಕ್ಷ ಬಿ.ಎಸ್ ಪಾಟೀಲ್ ಸೇರಿದಂತೆ ಹಲವರು ಹಾಜರಿದ್ದರು.

PREV
Read more Articles on