ಬೆಂಗಳೂರು ಮೆಟ್ರೋ ರೈಲು ನಿಗಮವು ಮೆಟ್ರೋ ರೈಲು ಪ್ರಯಾಣ ದರವನ್ನು ಶೇ.40ರಷ್ಟು ಏರಿಕೆ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ನೌಕರರ ಸಂಘಟನೆಗಳು ಹಾಗೂ ಸಾರ್ವಜನಿಕರು
ಬೆಂಗಳೂರು : ಬೆಂಗಳೂರು ಮೆಟ್ರೋ ರೈಲು ನಿಗಮವು ಮೆಟ್ರೋ ರೈಲು ಪ್ರಯಾಣ ದರವನ್ನು ಶೇ.40ರಷ್ಟು ಏರಿಕೆ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ನೌಕರರ ಸಂಘಟನೆಗಳು ಹಾಗೂ ಸಾರ್ವಜನಿಕರು ದರ ಹೆಚ್ಚಳ ಮಧ್ಯಮ, ಕಾರ್ಮಿಕ ವರ್ಗಕ್ಕೆ ಹೊರೆಯಾಗಲಿದ್ದು, ದುಬಾರಿ ಪರಿಷ್ಕರಣೆಗೆ ಮುನ್ನ ಮರು ಚಿಂತನೆ ಮಾಡುವಂತೆ ಒತ್ತಾಯಿಸಿದ್ದಾರೆ.
ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಮೆಟ್ರೋ ಟಿಕೆಟ್ ಬೆಲೆಯನ್ನೂ ಏರಿಸಲು ಮುಂದಾಗಿರುವುದಕ್ಕೆ ಜನತೆ ಅಸಮಾಧಾನ ತೋಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಗರಿಷ್ಠ ದರ ₹90 ಆದಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಹೊರೆಯಾಗಲಿದೆ. ಆರ್.ವಿ.ರಸ್ತೆ - ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗ ಆರಂಭವಾಗುವವರೆಗೆ ದರ ಹೆಚ್ಚಿಸಬಾರದು ಎಂದು ಜನತೆ ಆಗ್ರಹಿಸಿದ್ದಾರೆ.
ಸಂಸದ ಪಿ.ಸಿ.ಮೋಹನ್ ಕೂಡ ತಮ್ಮ ‘ಎಕ್ಸ್’ ಖಾತೆಯಲ್ಲಿ, ಮನವಿ ಬಳಿಕವೂ ಬಿಎಂಆರ್‌ಸಿಎಲ್ ದುಬಾರಿ ದರ ಏರಿಕೆಗೆ ಮುಂದಾಗಿರುವುದು ನಿರಾಸೆ ಮೂಡಿಸಿದೆ. ದರ ಏರಿಕೆ ಪ್ರಸ್ತಾವವನ್ನು ಮರು ಪರಿಶೀಲಿಸಬೇಕು ಎಂಬ ನಮ್ಮ ಪ್ರಸ್ತಾಪವನ್ನು ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೆಟ್ರೋ ಎಂಪ್ಲಾಯಿಸ್ ಯೂನಿಯನ್, ಬಿಎಂಆರ್‌ಸಿಎಲ್ ಅನಗತ್ಯ ವೆಚ್ಚವನ್ನು ಕಡಿತ ಮಾಡಿಕೊಳ್ಳುವತ್ತ ಗಮನಹರಿಸಬೇಕು. ದುಬಾರಿ ಟಿಕೆಟ್ ದರದಿಂದ ಒಂದು ವರ್ಗದ ಪ್ರಯಾಣಿಕರು ಮೆಟ್ರೋದಿಂದ ದೂರವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ಬೆಂಗಳೂರು ಮೆಟ್ರೋ, ಸಬ್ ಅರ್ಬನ್ ರೈಲು ಪ್ರಯಾಣಿಕರ ಸಂಘವೂ ದುಬಾರಿ ದರ ವಿರೋಧಿಸಿದೆ. ಶೇ.40ರಷ್ಟು ಹೆಚ್ಚಳದಿಂದ ಬಿಪಿಎಲ್, ಕಾರ್ಮಿಕರಿಗೆ , ದಿನಗೂಲಿಯವರಿಗೆ ಹೊರೆಯಾಗಲಿದೆ. ಇದರ ಬದಲಾಗಿ ಜಾಹೀರಾತು, ಬಾಡಿಗೆ ದರ, ಪರ್ಯಾಯ ಆದಾಯ ಗಳಿಕೆಯತ್ತ ಬಿಎಂಆರ್‌ಸಿಎಲ್ ಗಮನಹರಿಸಬೇಕು ಎಂದು ಒತ್ತಾಯಿಸಿದೆ. ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆ ಸೇರಿ ಇತರೆ ಸಂಘಟನೆಗಳು ವಿಪರೀತ ದುಬಾರಿ ಬೇಡವೆಂದು ಒತ್ತಾಯಿಸಿವೆ.
ನಿರ್ವಹಣೆಗೆ ತಿಂಗಳೂ ₹2ಕೋಟಿ ಖರ್ಚು
ಪ್ರತಿ ತಿಂಗಳು ರಿಪೇರಿ, ನಿರ್ವಹಣೆಗೆ ಸರಿಸುಮಾರು ₹2ಕೋಟಿಯಷ್ಟು ಬಿಎಂಆರ್‌ಸಿಎಲ್ ವ್ಯಯಿಸುತ್ತಿದ್ದು, ಇದರಲ್ಲಿ ಬಿಗಿ ತಂದಲ್ಲಿ ಶೇ.50ರಷ್ಟು ಉಳಿತಾಯ ಮಾಡಬಹುದು. ಬಿಎಂಆರ್‌ಸಿಎಲ್‌ನಲ್ಲಿ 60 ವರ್ಷಕ್ಕೂ ಮೇಲ್ಪಟ್ಟ 300ಕ್ಕೂ ಅಧಿಕ ಅಧಿಕಾರಿಗಳು ಗುತ್ತಿಗೆ ಆಧಾರದಲ್ಲಿ ಅತ್ಯಧಿಕ ವೇತನ ಪಡೆಯುತ್ತಿದ್ದಾರೆ. ಮಾನವ ಸಂಪನ್ಮೂಲ, ಕಾರ್ಪೋರೆಟ್ ಸೇರಿ ಕೆಲ ವಿಭಾಗಗಳ ಹುದ್ದೆಗಳಲ್ಲಿ ಅಗತ್ಯ ಇಲ್ಲದಿದ್ದರೂ ಒಂದಕ್ಕಿಂತ ಹೆಚ್ಚಿನವರು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಿ ನಿಗಾ ತರಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಸಮರ್ಪಕ ಭೂಮಿ ಬಳಸಿದರೇ ಲಾಭ
ಮೆಟ್ರೋ ಕಟ್ಟಡಗಳ ಮೇಲೆ ಸೋಲಾರ್ ರೂಫ್‌ಟಾಪ್ ಅಳವಡಿಕೆ ಕಡ್ಡಾಯವಾಗಿ ಅಳವಡಿಸಬೇಕು. ಮೆಟ್ರೋ ಅಧೀನದ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಿಲ್ದಾಣ ಸೇರಿ ಇತರೆಡೆ ಪಾರ್ಕಿಂಗ್ ಸೇರಿ ಇತರೆ ಆದಾಯ ಗಳಿಕೆಗೆ ಒತ್ತು ಕೊಡಬೇಕು. ಇದರಿಂದ ತಿಂಗಳಿಗೆ ₹5 ರಿಂದ ₹6 ಕೋಟಿ ಸೇರಿ ವರ್ಷಕ್ಕೆ ₹ 60 ರಿಂದ 70 ಕೋಟಿವರೆಗೆ ಉಳಿತಾಯ ಮಾಡಬಹುದು ಎಂದು ಸಂಘಟನೆಗಳು ಒತ್ತಾಯಿಸಿವೆ.