;Resize=(412,232))
ಮುಂಬೈ: ಬೆಂಗಳೂರು ಮತ್ತು ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಸೇವೆ ಆರಂಭಕ್ಕೆ ಅಣಿಯಾಗುತ್ತಿದ್ದು, ಈ ರೈಲಿನ ವಿಡಿಯೋ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಹಂಚಿಕೊಂಡಿದೆ. ರೈಲು ಅತ್ಯಂತ ಸುಖಾಸೀನ ವ್ಯವಸ್ಥೆಗಳಿಂದ ಕೂಡಿದ್ದು ಗಮನ ಸೆಳೆಯುತ್ತಿದೆ. ಈವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದರೆ ಸಾಮಾನ್ಯವಾಗಿ ಆಸನ (ಸಿಟ್ಟಿಂಗ್) ವ್ಯವಸ್ಥೆಯನ್ನು ಒಳಗೊಂಡಿದ್ದು, ಹಗಲು ಪ್ರಯಾಣಕ್ಕೆ ರೂಪಿಸಲಾಗಿತ್ತು. ಆದರೆ ಸ್ಲೀಪರ್ ಆವೃತ್ತಿಯಲ್ಲಿ ಸಂಪೂರ್ಣ ಹಾಸಿಗೆ ವ್ಯವಸ್ಥೆ ಇರಲಿದೆ. 3 ಎಸಿ, 2 ಎಸಿ ಮತ್ತು 1 ಎಸಿ ಸೇರಿ ಒಟ್ಟು 16 ಬೋಗಿಗಳು ಇದರಲ್ಲಿರಲಿವೆ. ಜೊತೆಗೆ ರೈಲಿನಲ್ಲಿಯೇ ಆಹಾರ ತಯಾರಿಸುವಂತ ಪ್ಯಾಂಟ್ರಿ ಕಾರ್ ಸಹ ಇದರಲ್ಲಿರಲಿದೆ. ಒಟ್ಟು 823 ಪ್ರಯಾಣಿಕರನ್ನು ಕರೆದೊಯ್ಯಲಿದೆ.
ಈ ರೈಲಿನಲ್ಲಿ ವಿಶೇಷವೆಂದರೆ ಅದುವೇ ಎಸಿ ಫಸ್ಟ್ ಕ್ಲಾಸ್. ಈ ಬೋಗಿಯು ಸಾಮಾನ್ಯ ರೈಲಿನ 1 ಎಸಿಗಿಂತ ವಿಭಿನ್ನವಾಗಿದ್ದು, ವಿಸ್ತಾರವಾದ ಕ್ಯಾಬಿನ್, ಅಗಲವಾದ ಹಾಸಿಗೆ, ರೀಡಿಂಗ್ ಲೈಟ್, ಸುಧಾರಿತ ಬಾಗಿಲು, ಮುಸುಕುಗನ್ನಡಿ, ಅಲಾರ್ಮ್ ಸೇರಿ ವಿವಿಧ ಸೌಲಭ್ಯ ಒಳಗೊಂಡಿದೆ. ಜೊತೆಗೆ ಇಲ್ಲಿನ ಶೌಚಾಲಯ ವ್ಯವಸ್ಥೆಯು ಸಾಮಾನ್ಯ ರೈಲಿಗಿಂತ ಉನ್ನತ ಮಟ್ಟದಲ್ಲಿದೆ. ಈ ಎಲ್ಲ ಸೇವೆಗಳನ್ನು ಕಂಡು ಇದನ್ನು ‘ಹೋಟೆಲ್ ಆನ್ ವೀಲ್ಸ್’ ಎಂದು ಬಣ್ಣಿಸಲಾಗಿದೆ.
ಈ ರೈಲು ಬೆಂಗಳೂರಿನಿಂದ ಕಲಬುರಗಿ ಮಾರ್ಗವಾಗಿ ಮುಂಬೈಗೆ 14-16 ತಾಸುಗಳಲ್ಲಿ ಪ್ರಯಾಣಿಸಲಿದೆ. ಯಾನದ ಆರಂಭ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.