;Resize=(412,232))
ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಮತ್ತು ವಿವಿಧ ನೀರಾವರಿ ಯೋಜನೆಗಳ ಈಡೇರಿಕೆಗೆ ಒತ್ತಾಯಿಸಿ ಕನ್ನಡ ಒಕ್ಕೂಟ ಕರೆ ನೀಡಿದ್ದ ಬಂದ್‌ಗೆ ರಾಜಧಾನಿ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಾರ್ವಜನಿಕ ಬಸ್, ಆಟೋ, ಟ್ಯಾಕ್ಸಿಗಳ ಸೇವೆ, ಹೊಟೇಲ್, ತರಕಾರಿ ಮಾರುಕಟ್ಟೆ ಸೇರಿದಂತೆ ಎಲ್ಲ ಬಗೆಯ ವಾಣಿಜ್ಯ ಚಟುವಟಿಕೆಗಳು,ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಈ ಮೊದಲು ಬಂದ್ ಬೆಂಬಲಿಸಿದ್ದ ಕೆಲವು ಪ್ರಮುಖ ಕನ್ನಡಪರ ಸಂಘಟನೆಗಳು ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಬಂದ್ ಅನಗತ್ಯವೆಂದು ಹೇಳಿ ಬೆಂಬಲ ಹಿಂಪಡೆದಿದ್ದವು. ಜೊತೆಗೆ ಗುರುವಾರ ಬೆಳಗ್ಗೆಯೇ ಪೊಲೀಸರು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಕಾರ್ಯದರ್ಶಿ ಗಿರೀಶ್ ಗೌಡ ಮತ್ತು ಮುಖಂಡರಾದ ಮಂಜುನಾಥ್ ದೇವ ಹಾಗೂ ಬೈಂದೂರು ರವಿಕಿರಣ್, ನಾರಾಯಣಸ್ವಾಮಿ ಸೇರಿದಂತೆ ಇತರರನ್ನು ವಶಕ್ಕೆ ಪಡೆದಿದ್ದರು. ಹೀಗಾಗಿ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆ ನಾಯಕರಿಲ್ಲದೆ ನಡೆಯಲೇ ಇಲ್ಲ.
ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಗಳು ಸೇರಿದಂತೆ ನಗರದ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ವಾಹನ ಸಂಚಾರ ಎಂದಿನಂತೆಯೇ ಇತ್ತು. ತಮಿಳುನಾಡಿಗೆ ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಆದರೆ, ಬುಧವಾರ ರಾತ್ರಿ ನಗರಕ್ಕಾಗಮಿಸಿದ್ದ ತಮಿಳುನಾಡು ಸಾರಿಗೆ ಬಸ್‌ಗಳ ಸಂಚಾರಕ್ಕೆ ಪೊಲೀಸರು ಬೆಳಗಿನ ಕೆಲ ಹೊತ್ತು ತಡೆಯೊಡ್ಡಿದ್ದರು. ಕೊನೆಗೆ ಬಂದ್ ಪರಿಣಾಮ ಗಂಭೀರವಾಗಿಲ್ಲವೆಂದು ಅಧಿಕಾರಿಗಳು, ತಮಿಳುನಾಡು ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ಸರ್ಕಾರ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕು. ತನ್ನ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಶಿಫಾರಸು, ನಿರ್ದೇಶನ ಮತ್ತು ನಡವಳಿಕೆಗಳ ಬಗ್ಗೆ ಕನ್ನಡಿಗರಲ್ಲಿ ಅನುಮಾನ ಮೂಡುತ್ತಿದೆ. ಈ ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಇತರರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಖಾಕಿ ಗೂಂಡಾಗಿರಿ ವರ್ತನೆ: ವಾಟಾಳ್
ಕರ್ನಾಟಕ ಬಂದ್ ನಡೆಯದಿರುವ ಕುರಿತು ಬಂಧನದಿಂದ ಬಿಡುಗಡೆಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಬಂದ್ ನಡೆಯದಂತೆ ಪೊಲೀಸರು ಅಡಚಣೆ ಮಾಡಿದರು. ಗೂಂಡಾಗಿರಿ ವರ್ತನೆ ತೋರಿದ ಅವರು, ಮನೆಯೊಳಗೆ ನುಗ್ಗಿ ಮಾತನಾಡಲು ಸಹ ಅವಕಾಶ ಕೊಡದೆ ಬಂಧಿಸಿ ಕರೆದೊಯ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಈ ಬಂದ್ ಕರೆದಿರಲಿಲ್ಲ. ಮಹದಾಯಿ, ಕಳಸಾ ಬಂಡೂರಿ , ಉತ್ತರ ಕರ್ನಾಟಕ ಅಭಿವೃದ್ಧಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಬೇಕು, ಮೇಕೆದಾಟು ಯೋಜನೆ ಜಾರಿ ಮಾಡಬೇಕು. ಎಂಇಎಸ್ ನಿಷೇಧಿಸಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಂದ್‌ಗೆ ಕರೆ ನೀಡಲಾಗಿತ್ತು ಎಂದರು.