;Resize=(412,232))
ಬೆಂಗಳೂರು : ನಗರದಲ್ಲಿ ಪಾದಚಾರಿಗಳಿಗಾಗಿ ಸುರಕ್ಷಿತ ರಸ್ತೆ, ಸುಗಮ ಸಂಚಾರಕ್ಕಾಗಿ ಜುಲೈ 1ರಿಂದ ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ ಆರಂಭಿಸುತ್ತಿದ್ದು, ಪಾದಚಾರಿ ಒತ್ತುವರಿ ತೆರವುಗೊಳಿಸಲು ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಬುಧವಾರ ಜಿಬಿಎಯ 5 ಪಾಲಿಕೆಗಳ ಆಯುಕ್ತರ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದಲ್ಲಿ ಸುಮಾರು 14 ರಿಂದ 16 ಸಾವಿರ ಕಿಲೋ ಮೀಟರ್ ರಸ್ತೆಗಳಿವೆ. ಈ ರಸ್ತೆಗಳಲ್ಲೆಲ್ಲಾ ಪಾದಚಾರಿ ರಸ್ತೆಗಳನ್ನು ಸುರಕ್ಷಿತವಾಗಿ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೆ, ಆದ್ಯತೆಯ ಮೇರೆಗೆ ನಗರದ ಪ್ರಮುಖವಾದ 2000 ಕಿಲೋ ಮೀಟರ್ ರಸ್ತೆಗಳಲ್ಲಿ ಪಾದಚಾರಿ ರಸ್ತೆಗಳಿಗಾಗಿ ಅಭಿಯಾನ ಆರಂಭಿಸಲಾಗಿದೆ ಎಂದರು.
ಇಂದಿನಿಂದ ಜುಲೈ 1ರವರೆಗೆ ಈ ರಸ್ತೆಗಳಲ್ಲಿ ಎಲ್ಲಾ ವ್ಯಾಪಾರಿಗಳು, ಸಾರ್ವಜನಿಕರು ಪಾದಚಾರಿ ರಸ್ತೆಗಳನ್ನು ತಾವೇ ತಾವಾಗಿ ಒತ್ತುವರಿ ತೆರವು ಮಾಡಬೇಕು. ಇಲ್ಲದಿದ್ದರೆ, ಜುಲೈ 1ರಿಂದ ನೋಟಿಸ್ ನೀಡಲಾಗುವುದು. ಜು.10ರಿಂದ ದಂಡಶುಲ್ಕ ವಿಧಿಸಲಾಗುವುದು. 250 ರುಪಾಯಿಯಿಂದ ಆರಂಭವಾಗುವ ದಂಡ ₹10 ಸಾವಿರದವರೆಗೆ ದಂಡ ವಿಧಿಸಿ ಪಾದಚಾರಿ ರಸ್ತೆ ತೆರವು ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನೋಟಿಸ್‌ಗೂ ಬಗ್ಗದಿದ್ದರೆ ಅಲ್ಲಿ ಜೆಸಿಬಿ ಕಾರ್ಯಾಚರಣೆಗೆ ಅನಿವಾರ್ಯವಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡದೆ, ನೀವೇ ತೆರವು ಮಾಡಿ ಸುಪ್ರೀಂ ಕೋರ್ಟ್ ಆದೇಶಕ್ಕೆ ಗೌರವ ನೀಡಿ ಎಂದು ತಿಳಿಸಿದರು.
ಪಾದಚಾರಿ ರಸ್ತೆಗಳಲ್ಲಿ ಅಲ್ಲಲ್ಲಿ ಸ್ಲ್ಯಾಬ್ ಬಿದಿದ್ದರೆ ಅಥವಾ ಗಾರೆ ಕಲ್ಲು ಬಿದ್ದಿದ್ದರೆ ಅಂತಹ ದುಸ್ಥಿತಿ ಪಾದಚಾರಿ ರಸ್ತೆ ಸುಸ್ಥಿತಿಗೆ ತರಲು ಐದು ಪಾಲಿಕೆಗಳು ಸೇರಿ ₹70 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ನಗರದ ಜನಸಂದಣಿ ಹಾಗೂ ವಾಹನ ಸಂಚಾರ ಹೆಚ್ಚಿರುವ ರಸ್ತೆಗಳಲ್ಲಿ ತಳ್ಳು ಗಾಡಿಗಳನ್ನು ಫುಟ್‌ಪಾತ್ ಮೇಲೆ ನಿಲ್ಲಿಸಿ ವ್ಯಾಪಾರ ಮಾಡುವುದನ್ನೂ ನಿಷೇಧಿಸಲಾಗುವುದು. ತಳ್ಳು ಗಾಡಿಗಳಿಗೆ 10 ಸಾವಿರ ಕಿಲೋ ಮೀಟರ್ ರಸ್ತೆಗಳು ಅಗಲವಾಗಿವೆ. ಅಲ್ಲಿ ಹೋಗಿ ಅವರು ತಮ್ಮ ವ್ಯಾಪಾರ ಮಾಡಬಹುದು. ಈ ಪಾದಚಾರಿ ರಸ್ತೆಗಳಲ್ಲಿ ತಳ್ಳು ಗಾಡಿ ನಿಲ್ಲಿಸುವಂತಿಲ್ಲ ಎಂದರು.
ಬಿಡಾಡಿ ವಾಹನಗಳ ಹರಾಜು
ಪಾದಚಾರಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದರೆ ಜುಲೈ 1ರಿಂದ ಟೋಯಿಂಗ್ ಮಾಡಲಾಗುವುದು. ಅಲ್ಲದೆ, ದೀರ್ಘಕಾಲದಿಂದ ರಸ್ತೆಯಲ್ಲಿ ನಿಲ್ಲಿಸಿರುವ ಹಳೆಯ ವಾಹನಗಳ ಮೇಲೆ ನೋಟಿಸ್ ಅಂಟಿಸಲಾಗುವುದು. ಜುಲೈ 10ರಿಂದ ಬಿಡಾಡಿ ವಾಹನಗಳನ್ನು ಟೋಯಿಂಗ್ ಮಾಡಿ ಹರಾಜು ಹಾಕಲಾಗುವುದು ಎಂದರು.
ಸಿಗ್ನಲ್‌ನಿಂದ 75 ಮೀಟರ್ ಅಂತರದಲ್ಲಿ ಬಸ್ ನಿಲ್ಲಲ್ಲ
ಟ್ರಾಫಿಕ್ ಸಿಗ್ನಲ್‌ನಿಂದ 75 ಮೀಟರ್ ಅಂತರದ ಒಳಗೆ ಯಾವುದೇ ಬಸ್ಸು ಸೇರಿದಂತೆ ಯಾವುದೇ ವಾಹನ ನಿಲುಗಡೆ ನಿಷೇಧಿಸಬೇಕೆಂದು ತೀರ್ಮಾನಿಸಲಾಗಿದೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಸಿರು ದೀಪ (ಗ್ರೀನ್ ಸಿಗ್ನಲ್ ) ಬಿದ್ದರೂ ಬಸ್ಸು ನಿಲುಗಡೆ ಮಾಡಿದರೆ, ಆ ಬಸ್ ಹಿಂದಿರುವ ವಾಹನಗಳು ಮುಂದೆ ಹೋಗಲು ಆಗದೆ ಟ್ರಾಫಿಕ್ ಜಾಂ ಆಗುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದನ್ನು ಕೂಡಲೆ ಜಾರಿಗೆ ತರಲು ಸಂಚಾರ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಸ್ತೆ ಗುಂಡಿ ಮುಚ್ಚಲು ₹77 ಕೋಟಿ ಬಿಡುಗಡೆ
ರಸ್ತೆಗಳಲ್ಲಿ ಗುಂಡಿ ಮುಚ್ಚಲು ನೂತನ ತಂತ್ರಜ್ಞಾನ ಬಳಸಲು ತಿಳಿಸಲಾಗಿದೆ. ಅಲ್ಲದೆ, ವೃತ್ತಾಕಾರದಲ್ಲಿ ಅಥವಾ ರಸ್ತೆಗುಂಡಿಗಳು ಹೇಗಿವೆಯೋ ಅದೇ ರೀತಿಯಲ್ಲಿ ಗುಂಡಿ ಮುಚ್ಚಬಾರದು, ಆ ಗುಂಡಿಯನ್ನು ಚೌಕಾಕಾರದಲ್ಲಿ ಮಾಡಿ ಕೆಳಗೆ ಜಲ್ಲಿ ಹಾಕಿ ನಂತರ ಟಾರ್ ಹಾಕಿ ಮುಚ್ಚಬೇಕು. ಅಲ್ಲದೆ, ರಸ್ತೆಗೆ ಸಮನಾಗಿ ನಿರ್ಮಿಸಲು ಸೂಚಿಸಲಾಗಿದೆ. ಇದಕ್ಕಾಗಿ ₹77 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗುಂಡಿ ಮುಚ್ಚಲು ನೂತನ ಯಂತ್ರಗಳನ್ನು ಬಳಸಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಸಮಯಾವಕಾಶ ಕೇಳಿದ್ದಾರೆ. ಜುಲೈ ತಿಂಗಳಲ್ಲಿ ಗುಂಡಿ ಮುಚ್ಚಲು ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬೈದರೂ ಬೈಸಿಕೊಳ್ಳಲು ಸಿದ್ಧ: ಕೃಷ್ಣ ಬೈರೇಗೌಡ
ಪಾದಚಾರಿ ರಸ್ತೆ ಒತ್ತುವರಿ ಕಾರ್ಯಾಚರಣೆ ನಡೆಸಲು ಆರಂಭಿಸಿದರೆ ಜನರು ನನ್ನನ್ನು ಬೈಯ್ಯುತ್ತಾರೆಂದು ನನಗೆ ಗೊತ್ತಿದೆ. ಸುಮ್ಮನೆ ನಗುತ್ತಾ ತೆರವು ಮಾಡಿ ಎಂದರೆ ಸಮಸ್ಯೆ ಬಗೆಹರಿಯುವುದಿಲ್ಲ. ಯಾರು ಏನೇ ಬೈದರೂ ನಾನೇ ಬೈಸಿಕೊಳ್ಳುತ್ತೇನೆ. ಎಲ್ಲದಕ್ಕೂ ನಾನೇ ಹೊಣೆ, ನಾನೆ ಜವಾಬ್ದಾರಿ ಹೊರುತ್ತೇನೆ. ನನಗೆ ಮುಖ್ಯಮಂತ್ರಿ ಅವರು ಹೇಳಿದ್ದು, ಈ ಕೆಲಸ ಮಾಡುತ್ತೇನೆ ಎಂದು ಕೃಷ್ಣಬೈರೇಗೌಡ ತಿಳಿಸಿದರು. ನಗರದಲ್ಲಿ ವರ್ಷಕ್ಕೆ 1 ಸಾವಿರ ಮಂದಿ ಅಪಘಾತಗಳಲ್ಲಿ ಮೃತರಾಗುತ್ತಿದ್ದಾರೆ. ಅವರಲ್ಲಿ 300 ಮಂದಿ ಪಾದಚಾರಿಗಳೇ ಮೃತರಾಗುತ್ತಿದ್ದಾರೆ. ಇದು ನಗರದ 1.5 ಕೋಟಿ ಜನರ ಜೀವನದ ಪ್ರಶ್ನೆ. ಇವರಿಗಾಗಿ ಯಾವುದೇ ಸಮಸ್ಯೆ ಎದುರಾದರೂ ಎದುರಿಸಲು ಸಿದ್ಧ ಎಂದರು.