‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿ ಬೇಡ ಎಂದ ಕಿಚ್ಚ - ಹಲವು ವರ್ಷಗಳಿಂದ ಪ್ರಶಸ್ತಿ ಪಡೆಯುತ್ತಿಲ್ಲ: ನಟ

Published : Jan 24, 2025, 11:14 AM ISTUpdated : Jan 24, 2025, 11:15 AM IST
Kiccha Sudeep about bigg boss kannada season 11

ಸಾರಾಂಶ

ಪೈಲ್ವಾನ್’ ಚಿತ್ರಕ್ಕೆ ದೊರೆತಿದ್ದ 2019ನೇ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಕಿಚ್ಚ ಸುದೀಪ್‌ ನಿರಾಕರಿಸಿದ್ದಾರೆ. ‘ಬೇರೆ ಅರ್ಹ ಕಲಾವಿದರಿಗೆ ಕೊಡಿ. ಅರ್ಹರಲ್ಲೊಬ್ಬರಿಗೆ ಪ್ರಶಸ್ತಿ ಸಿಕ್ಕರೆ ನನಗೆ ಅದೇ ಸಂತೋಷ’ ಎಂದು ಅವರು ಹೇಳಿದ್ದಾರೆ.

ಬೆಂಗಳೂರು : ‘ಪೈಲ್ವಾನ್’ ಚಿತ್ರಕ್ಕೆ ದೊರೆತಿದ್ದ 2019ನೇ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ಕಿಚ್ಚ ಸುದೀಪ್‌ ನಿರಾಕರಿಸಿದ್ದಾರೆ. ‘ಬೇರೆ ಅರ್ಹ ಕಲಾವಿದರಿಗೆ ಕೊಡಿ. ಅರ್ಹರಲ್ಲೊಬ್ಬರಿಗೆ ಪ್ರಶಸ್ತಿ ಸಿಕ್ಕರೆ ನನಗೆ ಅದೇ ಸಂತೋಷ’ ಎಂದು ಅವರು ಹೇಳಿದ್ದಾರೆ.

ಪ್ರಶಸ್ತಿ ನಿರಾಕರಣೆ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆದಿರುವ ಅವರು, ‘ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿ ಪಡೆಯುವುದು ಹೆಮ್ಮೆಯ ವಿಚಾರವೇ ಹೌದು. ಅದಕ್ಕಾಗಿ ನನ್ನನ್ನು ಆಯ್ಕೆ ಮಾಡಿದ ತೀರ್ಪುಗಾರರ ಸಮಿತಿಗೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ ವೈಯಕ್ತಿಕ ಕಾರಣಗಳಿಂದ ಹಲವು ವರ್ಷಗಳಿಂದ ನಾನು ಪ್ರಶಸ್ತಿ ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ಹಾಗಾಗಿ ಈ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ತೀರ್ಪುಗಾರರಿಗೆ ಧನ್ಯವಾದ ಸಲ್ಲಿಸಿರುವ ಅವರು, ‘ನನ್ನನ್ನು ಆಯ್ಕೆ ಮಾಡಿದ್ದಕ್ಕೆ ತೀರ್ಪುಗಾರರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನನ್ನು ಅತ್ಯುತ್ತಮ ನಟ ಪ್ರಶಸ್ತಿಗೆ ಗುರುತಿಸಿರುವುದೇ ನನಗೆ ದೊರೆತಿರುವ ಪುರಸ್ಕಾರವೆಂದು ಭಾವಿಸಿದ್ದೇನೆ. ಈ ನನ್ನ ನಿರ್ಧಾರದಿಂದ ಉಂಟಾಗಬಹುದಾದ ತೊಂದರೆಗಾಗಿ ನಾನು ರಾಜ್ಯ ಸರ್ಕಾರ ಮತ್ತು ತೀರ್ಪುಗಾರರ ಸಮಿತಿಗೆ ಕ್ಷಮೆ ಯಾಚಿಸುತ್ತಿದ್ದೇನೆ. ಆದರೆ ಅವರು ನನ್ನ ಆಯ್ಕೆಯನ್ನು ಗೌರವಿಸುತ್ತಾರೆ ಮತ್ತು ನಾನು ಆರಿಸಿಕೊಂಡಿರುವ ಹಾದಿಗೆ ಬೆಂಬಲ ಸೂಚಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಹೇಳಿದ್ದಾರೆ.

‘ಜನರಿಗೆ ಮನರಂಜನೆ ಒದಗಿಸಲು ನಾನು ಬದ್ಧನಾಗಿದ್ದೇನೆ. ಆದರೆ ಯಾವುದೇ ಪ್ರಶಸ್ತಿಯ ನಿರೀಕ್ಷೆ ನನಗಿಲ್ಲ. ಮುಂದೆಯೂ ಉತ್ತಮ ಮನರಂಜನೆ ನೀಡಲು ಶ್ರಮಿಸುತ್ತೇನೆ. ಈಗ ನನ್ನನ್ನು ಪ್ರಶಸ್ತಿಗೆ ಗುರುತಿಸಿರುವುದರಿಂದ ದೊರೆತಿರುವ ಹುಮ್ಮಸ್ಸು ಮತ್ತಷ್ಟು ಉತ್ತಮ ಕೆಲಸ ಮಾಡಲು ನನಗೆ ಪ್ರೇರಣೆಯಾಗಲಿದೆ’ ಎಂದು ತಿಳಿಸಿದ್ದಾರೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ