3,011 ಕೋಟಿ ರು. ಟಿಡಿಆರ್‌ ಪರಿಹಾರ ವಿವಾದ : ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಡುವ ಕುರಿತು ತುರ್ತು ಸಂಪುಟ ಸಭೆ

ಸಾರಾಂಶ

  ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗ ಬಳಕೆಗೆ ಬರೋಬ್ಬರಿ 3,011 ಕೋಟಿ ರು. ಮೊತ್ತದ ಟಿಡಿಆರ್ ಪರಿಹಾರ ನೀಡಲು ನ್ಯಾಯಾಲಯ ನೀಡಿರುವ ಆದೇಶದಿಂದ ಪಾರಾಗಲು ರಸ್ತೆ ಅಗಲೀಕರಣ ಪ್ರಸ್ತಾವನೆಯನ್ನೇ ಕೈಬಿಡುವ ಕುರಿತು ನಿರ್ಧಾರ ಕೈಗೊಳ್ಳಲು ತುರ್ತು   ಸಭೆ ಕರೆಯಲಾಗಿದೆ.

ಬೆಂಗಳೂರು : ಬಳ್ಳಾರಿ ರಸ್ತೆ ಹಾಗೂ ಜಯಮಹಲ್‌ ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗ ಬಳಕೆಗೆ ಬರೋಬ್ಬರಿ 3,011 ಕೋಟಿ ರು. ಮೊತ್ತದ ಟಿಡಿಆರ್ ಪರಿಹಾರ ನೀಡಲು ನ್ಯಾಯಾಲಯ ನೀಡಿರುವ ಆದೇಶದಿಂದ ಪಾರಾಗಲು ರಸ್ತೆ ಅಗಲೀಕರಣ ಪ್ರಸ್ತಾವನೆಯನ್ನೇ ಕೈಬಿಡುವ ಕುರಿತು ನಿರ್ಧಾರ ಕೈಗೊಳ್ಳಲು ಶುಕ್ರವಾರ ತುರ್ತು ಸಚಿವ ಸಂಪುಟ ಸಭೆ ಕರೆಯಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸಚಿವ ಸಂಪುಟ ಸಭೆ ಕರೆದಿದ್ದು, ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನವನ್ನು ಸೋಮವಾರ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು ಎಂದು ತಿಳಿದುಬಂದಿದೆ.

ಸುಪ್ರೀಂ ಕೋರ್ಟ್ ಆದೇಶದ ಅನ್ವಯ 3,011 ಕೋಟಿ ರು. ಮೊತ್ತದ ಟಿಡಿಆರ್‌ ಪರಿಹಾರವನ್ನು ರಾಜಮನೆತನದ ವಾರಸುದಾರರಿಗೆ ನೀಡಬೇಕು. ಆದರೆ ಇಷ್ಟು ಪ್ರಮಾಣದ ಟಿಡಿಆರ್‌ ನೀಡುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ. ಜತೆಗೆ ಇದು ಸಾರ್ವಜನಿಕ ಹಿತಾಸಕ್ತಿ ಹಾಗೂ ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ. ಜತೆಗೆ ನಗರ ಅಭಿವೃದ್ಧಿ ಯೋಜನೆಗೂ ಕಠಿಣವಾಗುವ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಡಲು ನಿರ್ಧರಿಸಿರುವುದಾಗಿ ಜ.21ರಂದು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಅಲ್ಲದೆ, ಜಯಮಹಲ್‌ ರಸ್ತೆ ಅಂಡರ್‌ಪಾಸ್ ನಿರ್ಮಾಣಕ್ಕೆ 1,217 ಚದರ ಮೀಟರ್‌ ಜಾಗ ಹಿಂತಿರುಗಿಸಲು ಸಾಧ್ಯವಿಲ್ಲ. ಹೀಗಾಗಿ ಈ ಜಾಗಕ್ಕೆ ಮಾತ್ರ ಟಿಡಿಆರ್‌ ಪಾವತಿಸಲು ಹಾಗೂ ಬಳಕೆಯಾಗದ ಜಾಗವನ್ನು ಹಿಂತಿರುಗಿಸಲು ತೀರ್ಮಾನಿಸಿರುವುದಾಗಿ ಹೇಳಿದೆ.

ಈ ಬಗ್ಗೆ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಘಟನೋತ್ತರ ಅನುಮೋದನೆ ಪಡೆಯುವ ಸಾಧ್ಯತೆಯಿದೆ. ರಸ್ತೆ ಅಗಲೀಕರಣ ಅಂತಿಮವಾಗಿ ಕೈಬಿಟ್ಟು ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಏನಿದು ವಿವಾದ?:

ರಾಜ್ಯ ಸರ್ಕಾರವು ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ 15.7 ಎಕರೆ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಈ ಜಮೀನಿನ ಪರಿಹಾರಕ್ಕಾಗಿ ಕೋರ್ಟ್‌ ಮೊರೆ ಹೋದ ರಾಜಮನೆತನಕ್ಕೆ ಬಳ್ಳಾರಿ ರಸ್ತೆಯಲ್ಲಿ ಪ್ರತಿ ಚದರ ಮೀ.ಗೆ 2.83 ಲಕ್ಷ ರು.ಗಳಂತೆ ಹಾಗೂ ಜಯಮಹಲ್‌ ರಸ್ತೆಯಲ್ಲಿ 2.04 ಲಕ್ಷ ರು.ಗಳಂತೆ ಒಟ್ಟು 3,011 ಕೋಟಿ ರು. ಮೌಲ್ಯದ ಟಿಡಿಆರ್‌ನ್ನು ಪರಿಹಾರದ ರೂಪದಲ್ಲಿ ನೀಡಲು 2014ರಲ್ಲಿ ಹೈಕೋರ್ಟ್‌ ತೀರ್ಪು ನೀಡಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಆರ್ಥಿಕ ಹೊರೆ ಆಗುತ್ತದೆ ಎಂದು ಅಪೀಲು ಸಲ್ಲಿಸಿದ್ದರೂ ಹೈಕೋರ್ಟ್‌ ರಾಜ್ಯ ಸರ್ಕಾರದ ಅಪೀಲು ತಿರಸ್ಕರಿಸಿತ್ತು.

ಈ ಬಗ್ಗೆ ಡಿ.10 ರಂದು ನಡೆದ ವಿಚಾರಣೆಯಲ್ಲಿ ಆರು ವಾರಗಳ ಒಳಗಾಗಿ ಟಿಡಿಆರ್‌ ಹಕ್ಕು ನೀಡುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಇದೀಗ ರಾಜಮನೆತನ ಟಿಡಿಆರ್‌ ಪರಿಹಾರ ನೀಡದ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಸರ್ಕಾರದ ಅಧಿಕಾರಿಗಳಿಗೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.

ಹೀಗಾಗಿ ರಾಜ್ಯ ಸರ್ಕಾರವು ಟಿಡಿಆರ್‌ ನೀಡುವ ಅಥವಾ ರಸ್ತೆ ಅಗಲೀಕರಣ ಕೈಬಿಡುವ ಇಕ್ಕಟ್ಟಿಗೆ ಸಿಲುಕಿದ್ದು, ಅಂತಿಮವಾಗಿ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಯಾವ ನಿರ್ಧಾರ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Share this article