;Resize=(412,232))
ಬೆಂಗಳೂರು : ಸಾರ್ವಜನಿಕ ಸ್ಥಳ, ರಸ್ತೆ ಬದಿ, ಖಾಲಿ ನಿವೇಶನ ಅಥವಾ ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಮತ್ತು ಕಟ್ಟಡ ತ್ಯಾಜ್ಯ ಸುರಿದು ಪರಾರಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಪಿಎಸ್ ಆಧಾರಿತ ಡ್ಯಾಶ್ ಕ್ಯಾಮೆರಾಗಳ ಪ್ರಹರಿ ವಾಹನಗಳು ಶನಿವಾರದಿಂದ ಕಾರ್ಯಾಚರಣೆ ಆರಂಭಿಸಿವೆ.
ಶನಿವಾರ ಪ್ರಹರಿ ತಂಡಕ್ಕೆ ನೂತನವಾಗಿ ಖರೀದಿಸಿರುವ 2 ವಾಹನಗಳ ಸೇರ್ಪಡೆ ಉದ್ಘಾಟಿಸಿ ಮಾತನಾಡಿದ ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರು, ಎಲ್ಲೆಂದರಲ್ಲಿ ಕಸ ಸುರಿದು ಪರಾರಿಯಾಗಬಹುದು ಎಂದುಕೊಂಡವರು ಪಾಲಿಕೆಯ ಕಠಿಣ ಕ್ರಮಗಳಲ್ಲಿ ಸಿಲುಕಿಕೊಳ್ಳುತ್ತಾರೆ. 4 ವಾಹನಗಳ ಮೂಲಕ ದಿನದ ಎಲ್ಲ ಸಮಯದಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದರು.
ಪ್ರಹರಿ ವಾಹನಗಳು ಎರಡು ಪಾಳಿಗಳಲ್ಲಿ ನಿರಂತರ ಗಸ್ತು ನಡೆಸಲಿವೆ. ವಿಶೇಷವಾಗಿ ಕಸ ಸುರಿಯುವುದು ಕಂಡು ಬರುವ ಪ್ರದೇಶ, ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶ, ಖಾಲಿ ನಿವೇಶನಗಳು ಹಾಗೂ ಸಾರ್ವಜನಿಕ ಸ್ಥಳಗಳ ಮೇಲೆ ವಿಶೇಷ ನಿಗಾ ವಹಿಸಲಾಗುವುದು. ಲಭ್ಯವಾಗುವ ದೃಶ್ಯಾವಳಿ ಹಾಗೂ ಸ್ಥಳದ ಮಾಹಿತಿ ಆಧಾರದ ಮೇಲೆ ಸಂಬಂಧಿಸಿದ ವ್ಯಕ್ತಿ, ಸಂಸ್ಥೆ, ವಾಹನ ಗುರುತಿಸಿ ಅನ್ವಯವಾಗುವ ನಿಯಮಗಳ ಪ್ರಕಾರ ದಂಡ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಲ್ಲಾ ಪ್ರಹರಿ ವಾಹನಗಳ ಜಿಪಿಎಸ್ ಸ್ಥಳ, ಸಂಚಾರ ಹಾಗೂ ಕಾರ್ಯಾಚರಣೆಯನ್ನು ಆ್ಯಪ್ ಆಧಾರಿತ ವ್ಯವಸ್ಥೆಯಲ್ಲಿ ನಿಯಂತ್ರಿಸಿ, ನಿಯಂತ್ರಣ ಕೊಠಡಿ ಮೂಲಕ ಹಿರಿಯ ಅಧಿಕಾರಿಗಳು ನೇರವಾಗಿ ಮೇಲ್ವಿಚಾರಣೆ ನಡೆಸಲಿದ್ದಾರೆ. ವಾಹನಗಳಿಂದ ದಾಖಲಾಗುವ ಫೋಟೋ, ವಿಡಿಯೋ ಮತ್ತು ಜಿಪಿಎಸ್ ಮಾಹಿತಿಯನ್ನು ಪಾಲಿಕೆಯ ಕಂಟ್ರೋಲ್ ರೂಂ ಹಾಗೂ ಐಟಿ ತಂಡ ಪ್ರತಿದಿನ ಪರಿಶೀಲಿಸಿ, ಗುರುತಿಸಲಾದ ಸಮಸ್ಯೆಗಳು ಹಾಗೂ ಅವುಗಳ ಮೇಲೆ ಕೈಗೊಂಡ ಕ್ರಮಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಿದೆ. ಪ್ರಹರಿ ವಾಹನದಲ್ಲಿ ಚಾಲಕ ಮತ್ತು ಮಾರ್ಷಲ್ ಕಾರ್ಯನಿರ್ವಹಿಸಲಿದ್ದಾರೆ. ಈ ವ್ಯವಸ್ಥೆ ಪರಿಣಾಮಕಾರಿ ಕಾರ್ಯಾಚರಣೆಗಾಗಿ ಒಟ್ಟು 24 ಸಿಬ್ಬಂದಿ ನಿಯೋಜಿಸಲಾಗಿದೆ.
ವಾಹನಗಳು ಕೇವಲ ದೂರುಗಳಿಗೆ ಸ್ಪಂದಿಸುವ ವಾಹನಗಳಾಗಿರದೆ, ಅನಧಿಕೃತ ತ್ಯಾಜ್ಯ ವಿಲೇವಾರಿ ಪತ್ತೆಹಚ್ಚುವ, ಬ್ಲಾಕ್ ಸ್ಪಾಟ್ ಮೇಲೆ ನಿಗಾ ವಹಿಸುವ ಹಾಗೂ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅನುಷ್ಠಾನವನ್ನು ಬಲಪಡಿಸುವ ‘ಮೊಬೈಲ್ ಕಣ್ಗಾವಲು ಮತ್ತು ಜಾರಿ ಘಟಕ’ಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದರು. ಅಪರ ಆಯುಕ್ತರು (ಕಂದಾಯ ಪ್ರಭಾರ) ಹಾಗೂ ಜಂಟಿ ಆಯುಕ್ತೆ ಪಲ್ಲವಿ, ಮೊಹಮ್ಮದ್ ನಯೀಮ್ ಮೊಮಿನ್, ಉಪ ಆಯುಕ್ತ ಸೋಮಶೇಖರ್, ಡಿಜಿಎಂ ರಶ್ಮಿ, ಉಪಸ್ಥಿತರಿದ್ದರು