;Resize=(412,232))
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರಾಗಿ ಮಾರಾಟ ಮಾಡಿದ ರಾಜ್ಯದ 14 ಜಿಲ್ಲೆಯ 25413 ರೈತರಿಗೆ ತಿಂಗಳುಗಳಾದರೂ ಇನ್ನೂ ರಾಜ್ಯ ಸರ್ಕಾರ 265 ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ‘ಬರ’ ಪರಿಸ್ಥಿತಿಯಲ್ಲೂ ಅನ್ನದಾತರು ಸಂಕಷ್ಟ ಅನುಭವಿಸುವಂತಾಗಿದೆ.
ಎಂಎಸ್‌ಪಿ ಅಡಿ 2025-26ನೇ ಸಾಲಿನಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು. 15 ಜಿಲ್ಲೆಯ 2,46,605 ರೈತರು ಪ್ರತಿ ಕ್ವಿಂಟಲ್‌ಗೆ 4886 ರುಪಾಯಿಯಂತೆ 2500 ಕೋಟಿ ರುಪಾಯಿಗೂ ಅಧಿಕ ಮೌಲ್ಯದ 5,69,331 ಮೆಟ್ರಿಕ್ ಟನ್ ರಾಗಿಯನ್ನು ನೋಡೆಲ್ ಏಜೆನ್ಸಿಗಳ ಮೂಲಕ ಮಾರಾಟ ಮಾಡಿದ್ದರು.
ಈ ಪೈಕಿ 2.21 ಲಕ್ಷ ರೈತರಿಗೆ ಹಣ ಪಾವತಿಸಿದ್ದು ಇನ್ನೂ 14 ಜಿಲ್ಲೆಯ 25,413 ರೈತರಿಗೆ 265 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ. ರಾಜ್ಯದ 190 ತಾಲ್ಲೂಕಿನಲ್ಲಿ ಮಳೆ ಕೊರತೆ ಉಂಟಾಗಿದ್ದು 101 ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಇದೆ ಎಂದು ರಾಜ್ಯ ಸರ್ಕಾರವೇ ಅಧಿಕೃತವಾಗಿ ಘೋಷಿಸಿದೆ. ರೈತರು ಇಂತಹ ವಿಷಮ ‘ಬರ’ ಪರಿಸ್ಥಿತಿಯಲ್ಲಿದ್ದು, ಜೊತೆಗೆ ಸರ್ಕಾರಕ್ಕೆ ತಾವು ಮಾರಾಟ ಮಾಡಿದ್ದ ರಾಗಿಯ ಹಣ ಪಾವತಿಯಾಗಿಲ್ಲ. ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂಬ ಆಕ್ರೋಶ ಅನ್ನದಾತರಿಂದ ವ್ಯಕ್ತವಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. ಎಂಎಸ್‌ಪಿ ಅಡಿ ಸರ್ಕಾರಕ್ಕೆ ರಾಗಿ ಮಾರಾಟ ಮಾಡಿದ್ದ ಕೆಲ ಜಿಲ್ಲೆಗಳಲ್ಲಿ ಮುಂಗಾರು ಅಭಾವದಿಂದಾಗಿ ರಾಗಿ ಬಿತ್ತನೆಯ ‘ಸಮಯ’ ಮುಗಿಯುತ್ತಾ ಬಂದಿದ್ದರೂ ಬಿತ್ತನೆ ಮಾಡಲಾಗಿಲ್ಲ. ಇದರಿಂದಾಗಿ ರೈತರು ಜೀವನ ನಡೆಸುವುದೇ ದುಸ್ತರವಾಗಿದೆ.
ಮತ್ತೊಂದೆಡೆ, ಕೆಲ ಜಿಲ್ಲೆಗಳಲ್ಲಿ ಅಲ್ಪ-ಸ್ವಲ್ಪ ಮಳೆ ಬಂದಿದ್ದು ರಾಗಿ ಬಿತ್ತನೆ ಮಾಡೋಣ ಎಂದರೆ ಭೂಮಿ ಹಸನು ಮಾಡಲು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಲು ಹಣವಿಲ್ಲದೇ ರೈತರು ಪರದಾಡುತ್ತಿದ್ದಾರೆ.
ಎಂಎಸ್‌ಪಿ ಅಡಿ ರಾಗಿ ಮಾರಾಟ ಮಾಡಿದ್ದ ರೈತರಲ್ಲಿ ತುಮಕೂರು ಜಿಲ್ಲೆಯ 10,146 ರೈತರಿಗೆ ಬರೋಬ್ಬರಿ 103 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ. ಎರಡನೇ ಸ್ಥಾನದಲ್ಲಿ ಹಾಸನ ಜಿಲ್ಲೆ ಇದ್ದು 5440 ರೈತರಿಗೆ 56 ಕೋಟಿ ರು. ಪಾವತಿಸಬೇಕಾಗಿದೆ. ಮೈಸೂರು ಜಿಲ್ಲೆಯ 2648 ರೈತರಿಗೆ 26 ಕೋಟಿ, ಚಿಕ್ಕಮಗಳೂರು ಜಿಲ್ಲೆಯ 2499 ರೈತರಿಗೆ 27 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ.
ಚಿತ್ರದುರ್ಗ, ಮಂಡ್ಯ, ಚಾಮರಾಜನಗರ, ದಾವಣಗೆರೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟಾರೆ 14 ಜಿಲ್ಲೆಯ ರೈತರಿಗೆ ರಾಗಿಯ ಹಣ ಪಾವತಿಸಬೇಕಾಗಿದೆ. ರೈತರಿಗೆ ಎಂಎಸ್‌ಪಿ ಹಣ ಬಿಡುಗಡೆ ವಿಳಂಬ ಆಗುತ್ತಿರುವ ಬಗ್ಗೆ ‘ಕನ್ನಡಪ್ರಭ’ವು ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಬಳಿಕ ಹಂತ-ಹಂತವಾಗಿ ಹಣ ಬಿಡುಗಡೆಯಾಗಿದ್ದು, ಇನ್ನೂ 265 ಕೋಟಿ ರು. ರಾಗಿಯ ಬಾಬ್ತು ಬಾಕಿ ಉಳಿಸಿಕೊಳ್ಳಲಾಗಿದೆ.
ರಾಗಿ ಹಣ ಬಾಕಿ ಇರುವ ಕೆಲ ಜಿಲ್ಲೆಗಳ ವಿವರ
ಜಿಲ್ಲೆ ರೈತರ ಸಂಖ್ಯೆ ಮೊತ್ತ (ಕೋಟಿ ರು.)
ತುಮಕೂರು 10,146 103.88
ಹಾಸನ 5440 56.39
ಮೈಸೂರು 2648 26.62
ಚಿಕ್ಕಮಗಳೂರು 2499 27.20
ಚಿತ್ರದುರ್ಗ 2109 23.98
ಮಂಡ್ಯ 2074 22.45