;Resize=(412,232))
ಬೆಂಗಳೂರು : ‘ಔಷಧಗಳು ಮತ್ತು ಸೌಂದರ್ಯವರ್ಧಕಗಳು (ಕರ್ನಾಟಕ ತಿದ್ದುಪಡಿ) ವಿಧೇಯಕ-2025’, ‘ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2025’ ಸೇರಿ ಐದು ವಿಧೇಯಕಗಳನ್ನು ಮುಂಬರುವ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ನಕಲಿ ಅಥವಾ ಕಲಬೆರಕೆ ಔಷಧ ಹಾಗೂ ಸೌಂದರ್ಯ ವರ್ಧಕಗಳ ಮಾರಾಟವನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸುವ ಹಾಗೂ ಕೆಲ ದಂಡಗಳನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವ ಅಂಶಗಳನ್ನು ತಿದ್ದುಪಡಿ ವಿಧೇಯಕ ಒಳಗೊಂಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯದ ಸಿನಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹಾಲಿ ಇರುವ ಅಧಿನಿಯಮದಲ್ಲಿನ ಕೆಲ ಪ್ರಕರಣ ಕೈಬಿಡಲು ಹಾಗೂ ತಿದ್ದುಪಡಿಗಾಗಿ ತರಲಾಗಿರುವ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ(ಕ್ಷೇಮಾಭಿವೃದ್ಧಿ) ತಿದ್ದುಪಡಿ ವಿಧೇಯಕ 2025’, ನಗರಾಭಿವೃದ್ಧಿ ಪ್ರಾಧಿಕಾರಿಗಳಿಗೆ ನಗರ ಯೋಜನಾ ಅಥವಾ ಮುನಿಸಿಪಲ್ ಅಧಿಕಾರಿಗಳ ವೃಂದದ ಗ್ರೂಪ್ ಎ ಅಧಿಕಾರಿಗಳನ್ನು ಆಯುಕ್ತರಾಗಿ ನೇಮಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು ತಿದ್ದುಪಡಿ ವಿಧೇಯಕ-2025’ , ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ‘ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’ ಎಂದು ಮರು ನಾಮಕರಣ ಮಾಡಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ(2ನೇ ತಿದ್ದುಪಡಿ) ವಿಧೇಯಕ -2025ಅನ್ನು ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಿದೆ ಎಂದು ಹೇಳಿದರು.
ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ತಿದ್ದುಪಡಿ ನಿಯಮಗಳು-2025ರ ಕರಡು ಹೊರಡಿಸಲು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲು, ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆ ಬಾರದಿದ್ದರೆ/ಮಾರ್ಪಾಡು ಮಾಡದಿದ್ದರೆ ನೇರವಾಗಿ ಜಾರಿಗೊಳಿಸಲು ಸಂಪುಟ ಸಭೆ ಸಮ್ಮತಿಸಿದೆ.