ಕಾಲ್ತುಳಿತ ಸಂತ್ರಸ್ತರ ಜತೆ ಬಿಜೆಪಿ ಹೋರಾಟ - ನಾಡಿದ್ದು ಬೆಂಗಳೂರಲ್ಲಿ ಪ್ರತಿಭಟನೆ

Published : Jun 11, 2025, 04:28 AM IST
BY Vijayendra

ಸಾರಾಂಶ

ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಜೂ.13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜೂ.16ರಂದು 2ನೇ ಹಂತದ ಹೋರಾಟ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ : ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಯುವಕರು ಸಾವಿಗೀಡಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಜೂ.13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜೂ.16ರಂದು 2ನೇ ಹಂತದ ಹೋರಾಟ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರು, ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬದವರು, ಪಕ್ಷದ ಪ್ರಮುಖ ನಾಯಕರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಸಿಎಂ ಮನೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದರು.

ಈ ಕಾಲ್ತುಳಿತ ಪ್ರಕರಣವನ್ನು ಖಂಡಿಸಿ ಜೂ.16ರಂದು ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಎರಡನೇ ಹಂತದ ಹೋರಾಟ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

ಸಿಎಂ, ಡಿಸಿಎಂ ಹಟಕ್ಕೆ ಕಾಲ್ತುಳಿತ:

ಆರ್‌ಸಿಬಿ ಗೆಲುವಿನಲ್ಲಿ ಪಾಲು ಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹಟ ಮತ್ತು ಚಟದಿಂದಾಗಿ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿದ್ದಾರೆ. ಇದು ರಾಜ್ಯ ಸರ್ಕಾರದಿಂದ ನಡೆದ ಕೊಲೆ. ಜೂ.4ರಂದು ರಾಜ್ಯದ ಇತಿಹಾಸದಲ್ಲಿ ಕರಾಳ‌ದಿನವಾಗಿ‌ ದಾಖಲಾಗಿದೆ. ಆರ್‌ಸಿಬಿ ಕಪ್‌ ಗೆದ್ದ ಲಾಭ ಪಡೆಯಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪೈಪೋಟಿಗೆ ಬಿದ್ದಿದ್ದರು. ಹೀಗಾಗಿ ಸಿಎಂ ವಿಧಾನಸೌಧದ ಮುಂದೆ ವಿಜಯೋತ್ಸವ ಆಚರಿಸಿದರೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಾವೇನೂ ಕಮ್ಮಿ ಇಲ್ಲ ಎಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸಕ್ಕೆ ಮುಂದಾಗಿದ್ದರು. ಈಗ ದುರ್ಘಟನೆ ನಡೆಯುತ್ತಿದ್ದಂತೆ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಆರ್‌ಸಿಬಿ ವಿಜಯೋತ್ಸವ ಬಗ್ಗೆ ಸ್ವತಃ ಸಿಎಂ ಅವರೇ ಟ್ವಿಟ್‌ ಮಾಡಿದ್ದಾರೆ. ಇದಾದ ಬಳಿಕ ಆರ್‌ಸಿಬಿ ಅವರು ಟ್ವೀಟ್ ಮಾಡಿದ್ದಾರೆ. ಆರ್‌ಸಿಬಿ ಕಪ್‌ ಗೆಲ್ಲುತ್ತಿದ್ದಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆಗೆ ಅನುಮತಿ ಕೇಳಿದಾಗ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪೊಲೀಸರು ಅನುಮತಿ‌ ನೀಡದಿದ್ದರೂ ಡಿಸಿಎಂ ಒತ್ತಡದಿಂದ ಎರಡು ಕಡೆ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಈಗ ಸಿದ್ದರಾಮಯ್ಯ ಅವರು ವಿಧಾನಸೌಧದ ಎದುರು ನಡೆದ ಸಂಭ್ರಮಾಚರಣೆಯಲ್ಲಿ ದುರ್ಘಟನೆ ನಡೆದಿಲ್ಲ. ಇದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪ್ರಕಾರ, ಕಾಲ್ತುಳಿತಕ್ಕೆ ಸಿಎಂ ಕಾರಣ ಅಲ್ಲ ಎನ್ನುವುದಾದರೆ, ಮತ್ಯಾರು ಕಾರಣ? ಡಿ.ಕೆ.ಶಿವಕುಮಾರ್‌ ಅವರಾ? ನಿಮ್ಮ ರಾಜಕಾರಣದಿಂದ 11 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ. ತನ್ನ ಮೊಮ್ಮಗ ಸಾವನ್ನಪ್ಪಿದ್ದನ್ನು ಕಂಡು ಕೊರಗಿ ಅಜ್ಜಿಯೂ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ವಿಜಯೇಂದ್ರ ಹೇಳಿದ್ದು

- ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವ ನಡೆದ ಜೂ.4 ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕರಾಳವಾದ ದಿನ

- ಆರ್‌ಸಿಬಿ ಗೆಲುವಲ್ಲಿ ಪಾಲು ಪಡೆಯುವ ಸಿಎಂ, ಡಿಕೆಶಿ ಹಟ-ಚಟದಿಂದ ಕಾಲ್ತುಳಿತ ಸಂಭವಿಸಿದೆ. 11 ಜನ ಬಲಿಯಾಗಿದ್ದಾರೆ.

- ಸಿಎಂ ವಿಧಾನಸೌಧದ ಮುಂದೆ ವಿಜಯೋತ್ಸವ ಆಚರಿಸಿದರು. ಡಿಸಿಎಂ ಅವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಿಸಿದರು

- ಇದು ರಾಜ್ಯ ಸರ್ಕಾರದಿಂದ ನಡೆದ ಕೊಲೆ. ಆದರೆ ಈಗ ಸರ್ಕಾರ ಅಧಿಕಾರಿಗಳ ಮೇಲೆ ಹೊಣೆ ಹೊರಿಸುವ ಕೆಲಸ ಮಾಡ್ತಿದೆ

- ದುರ್ಘಟನೆಗೂ ಸರ್ಕಾರಕ್ಕೂ ಸಂಬಂಧ ಇಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಕಾಲ್ತುಳಿತಕ್ಕೆ ಸಿಎಂ ಅಲ್ಲ ಅಂದರೆ ಯಾರು ಕಾರಣ?

- ಡಿಕೆಶಿ ಅವರಾ? ಇಬ್ಬರ ರಾಜಕಾರಣದಿಂದ 11 ಮಂದಿ ಅಮಾಯಕರು ಸಾವಿಗೀಡಾಗಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ