ಗೋವು ಸಂರಕ್ಷಣೆಗೆ ರಾಜ್ಯ ಸರ್ಕಾರ ಒತ್ತು ನೀಡದೆ, ನಿರ್ಲಕ್ಷವಹಿಸಿದೆ ಎಂದು ಬಿಜೆಪಿ vs ಕಾಂಗ್ರೆಸ್‌ ಜಟಾಪಟಿ

Published : Mar 21, 2025, 09:58 AM IST
Vidhan soudha

ಸಾರಾಂಶ

ಗೋವು ಸಂರಕ್ಷಣೆಗೆ ರಾಜ್ಯ ಸರ್ಕಾರ ಒತ್ತು ನೀಡದೆ, ನಿರ್ಲಕ್ಷವಹಿಸಿದೆ ಎಂದು ಬಿಜೆಪಿ ಶಾಸಕ ಶರಣು ಸಲಗರ ಮಾತಿಗೆ, ಕಾಂಗ್ರೆಸ್‌ ಸಚಿವರು ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಸದನದಲ್ಲಿ ಗದ್ದಲ ಏರ್ಪಟ್ಟಿತು.

 ವಿಧಾನಸಭೆ : ಗೋವು ಸಂರಕ್ಷಣೆಗೆ ರಾಜ್ಯ ಸರ್ಕಾರ ಒತ್ತು ನೀಡದೆ, ನಿರ್ಲಕ್ಷವಹಿಸಿದೆ ಎಂದು ಬಿಜೆಪಿ ಶಾಸಕ ಶರಣು ಸಲಗರ ಮಾತಿಗೆ, ಕಾಂಗ್ರೆಸ್‌ ಸಚಿವರು ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಸದನದಲ್ಲಿ ಗದ್ದಲ ಏರ್ಪಟ್ಟಿತು.

ಬಜೆಟ್‌ ಮೇಲಿನ ಚರ್ಚೆ ವೇಳೆ, ರಾಜ್ಯ ಸರ್ಕಾರ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ವಿಷದ ಮೇಲೆ ಬೆಲ್ಲ ಹಚ್ಚಿದಂತಾಗಿದೆ. ಬೆಲ್ಲ ಎಂದು ನಾವು ತಿಂದರೆ ಅದು ನಮ್ಮನ್ನು ಕೊಲ್ಲುತ್ತಿದೆ. ಹಾಗೆಯೇ, ಗೋವು ಸಂರಕ್ಷಣೆಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಸು ಹಾಲು ಕೊಟ್ಟರೆ, ಸರ್ಕಾರ ಮಾತ್ರ ಅವುಗಳಿಗೆ ವಿಷ ನೀಡುತ್ತಿದೆ. ಹಾಲು ನೀಡುವ ಕೆಚ್ಚಲನ್ನೇ ಕತ್ತರಿಸಲಾಗುತ್ತಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಸಂತೋಷ್‌ ಲಾಡ್‌, ಬಜೆಟ್ ಮೇಲಿನ ಚರ್ಚೆಯಲ್ಲಿ ಬಜೆಟ್‌ ವಿಚಾರಗಳನ್ನು ಮಾತನಾಡಿ. ಅದನ್ನು ಬಿಟ್ಟು, ಭಾವನಾತ್ಮಕವಾಗಿ ಮಾತನಾಡಬೇಡಿ ಎಂದು ಆಗ್ರಹಿಸಿದರು. ಅದಾದ ನಂತರವೂ ಸಲಗರ, ಹಸುಗಳ ಸಂರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾತನ್ನಾರಂಭಿಸಿದರು.

ಅದರಿಂದ ಸಿಟ್ಟಾದ ಸಂತೋಷ್‌ ಲಾಡ್‌, ಈ ರೀತಿ ಮಾತನಾಡಿದರೆ ಸಹಿಸಲಾಗದು. ನಮ್ಮ ಸರ್ಕಾರ ಗೋವು ಸಂರಕ್ಷಣೆ ಮಾಡುತ್ತಿಲ್ಲ ಎನ್ನುವ ನೀವು, ವಿಶ್ವದಲ್ಲಿಯೇ ಭಾರತ ಗೋ ಮಾಂಸ ರಫ್ತಿನಲ್ಲಿ 2ನೇ ಸ್ಥಾನದಲ್ಲಿದೆ ಎಂಬುದರ ಬಗ್ಗೆಯೂ ಮಾತನಾಡಿ ಎಂದು ಹರಿಹಾಯ್ದರು.

ಆಗ ಮಧ್ಯಪ್ರವೇಶಿಸಿದ ಸಚವ ಪ್ರಿಯಾಂಕ್‌ ಖರ್ಗೆ, ಬಿಜೆಪಿ ಸರ್ಕಾರ 1000 ಹಸುಗಳನ್ನು ದತ್ತು ಪಡೆಯುವ ಪುಣ್ಯಕೋಟಿ ದತ್ತು ಯೋಜನೆ ಜಾರಿ ಮಾಡಿತು. ಅದರಲ್ಲಿ ಆಗಿನ ಸಿಎಂ ಮತ್ತು ಪಶುಸಂಗೋಪನಾ ಸಚಿವರು ಸೇರಿ 13 ಗೋವುಗಳನ್ನು ದತ್ತು ಪಡೆದರು. ಉಳಿದ ಬಿಜೆಪಿ ಶಾಸಕರು ಗೋವುಗಳ ದತ್ತು ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಾವು ಗೋವು ರಕ್ಷಣೆಗೆ ಮುಂದಾಗಿಲ್ಲ ಎನ್ನುವುದಾದರೆ, ಬಿಜೆಪಿ ಶಾಸಕರಿಗೆ ಅವಕಾಶವಿದ್ದಾಗ ಆ ಕೆಲಸ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಕುಂಭಮೇಳ ಬಿಜೆಪಿ ಸೃಷ್ಟಿಯಲ್ಲ: ಗದ್ದಲದ ನಂತರ ಮತ್ತೆ ಮಾತನಾಡಿದ ಶರಣು ಸಲಗರ, ಮಧ್ಯಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಯಶಸ್ವಿಯಾಗಿ ನಡೆದಿದ್ದು, 65 ಕೋಟಿ ಜನ ಭಾಗವಹಿಸಿದ್ದರು ಎಂದು ಪ್ರಸ್ತಾಪಿಸಿದರು.

ಅದಕ್ಕೆ ಮತ್ತೆ ತಡೆಯೊಡ್ಡಿದ ಸಂತೋಷ್‌ ಲಾಡ್‌, ನನ್ನ ಮಾಹಿತಿಯಂತೆ ಮಹಾ ಕುಂಭಮೇಳಕ್ಕಾಗಿ 7 ಸಾವಿರ ರೈಲು, 3 ಸಾವಿರ ವಿಮಾನ ಸೇವೆ ನೀಡಲಾಗಿದೆ. ಹೀಗಿರುವಾಗ 65 ಕೋಟಿ ಜನ ಎಲ್ಲಿ ಹೋಗಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಅದನ್ನು ಲೆಕ್ಕ ಹಾಕಿದವರ್‍ಯಾರು? ಸುಳ್ಳು ಹೇಳುವುದೇ ನಿಮ್ಮ ಕಥೆಯಾಯ್ತಲ್ಲ ಎಂದರು.

ಆಗ ಸಚಿವ ರಾಮಲಿಂಗಾರೆಡ್ಡಿ, ಕುಂಭಮೇಳವೇನು ಬಿಜೆಪಿ ಕಾರ್ಯಕ್ರಮವೇ? ನೂರಾರು ವರ್ಷಗಳಿಂದ ಅದು ನಡೆದುಕೊಂಡು ಬರುತ್ತಿದೆ. ಇದರಲ್ಲಿ ನಿಮ್ಮ ಪಾತ್ರವೇನು? ಎಂದು ಹರಿಹಾಯ್ದರು.

ತಾಕತ್ತಿದ್ದರೆ ಯೋಜನೆ ಅನುಷ್ಠಾನಗೊಳಿಸಿ

2023-24 ಮತ್ತು 2024-25ರ ರಾಜ್ಯ ಬಜೆಟ್‌ನಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಗೆ 20ಕ್ಕೂ ಹೆಚ್ಚಿನ ಯೋಜನೆಗಳನ್ನು ಘೋಷಿಸಲಾಗಿದ್ದು, ಅದರಲ್ಲಿ ಕೇವಲ ಎರಡ್ಮೂರು ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದೀಗ 2025-26ನೇ ಸಾಲಿನ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಸದೆ, ಹಳೇ ಯೋಜನೆಗಳನ್ನೇ ಪುನರಾವರ್ತಿಸಿ ಕರಾವಳಿ ಪ್ರದೇಶದ ಕ್ಷೇತ್ರಗಳಿಗೆ ಚೊಂಬು ನೀಡಲಾಗಿದೆ. ಸರ್ಕಾರಕ್ಕೆ ತಾಕತ್ತಿದ್ದರೆ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌ ಸವಾಲು ಹಾಕಿದರು.

ಬಿಗುಮಾನ ಬಿಟ್ಟು ಎಚ್‌ಡಿಕೆ ಜತೆಗೆ ಮಾತನಾಡಿ

ರಾಜ್ಯದ ಕೈಗಾರಿಕಾ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಿಗುಮಾನ ಬಿಟ್ಟು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಬೇಕು. ಆಮೂಲಕ ವಿಐಎಸ್‌ಎಲ್‌, ಎಚ್‌ಎಂಟಿ ಸೇರಿ ಇನ್ನಿತರ ಕೈಗಾರಿಕೆಗಳ ಪುನಶ್ಚೇತನ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಜೆಡಿಎಸ್‌ ಸಭಾನಾಯಕ ಸುರೇಶ್‌ ಬಾಬು ಸಲಹೆ ನೀಡಿದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಕಠಿಣ ಅಭ್ಯಾಸ ಮಾಡಿದರೆ ಸಾಧನೆ ಸುಲಭ: ಎಸ್ಪಿ ರೋಹನ್‌ ಜಗದೀಶ್