ದಾಬಸ್‍ಪೇಟೆ: ದೇವರಹೊಸಹಳ್ಳಿಯ ಭದ್ರಕಾಳಮ್ಮ ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಆಚರಿಸಲಾಯಿತು.
ಶ್ರೀಭದ್ರಕಾಳಮ್ಮ ಅಮ್ಮನವರ ಸಮೇತ ಶ್ರೀ ವೀರಭದ್ರಸ್ವಾಮಿ ಉತ್ಸವಮೂರ್ತಿಯನ್ನು 40 ಅಡಿ ಎತ್ತರದ ರಥದಲ್ಲಿ ಪ್ರತಿಷ್ಠಾಪಿಸಿ ಜನರು ತೇರನ್ನೆಳೆದು ಬಾಳೆಹಣ್ಣು ದವನ ತೇರಿನ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು.40ಕ್ಕೂ ಹೆಚ್ಚುಅರವಂಟಿಗೆ ಸೇವೆ: ವೀರಭದ್ರಸ್ವಾಮಿ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರತಿ ವರ್ಷದಂತೆ 40ಕ್ಕೂ ಹೆಚ್ಚು ಅರವಂಟಿಗೆಗಳಿಂದ ಅನ್ನದಾಸೋಹದ ಜೊತೆಗೆ ಸಾವಿರಾರು ಭಕ್ತರು ಕುಡಿಯುವ ನೀರು, ಕೋಸಂಬರಿ, ಪಾನಕ, ಮಜ್ಜಿಗೆ, ಎಳ್ಳಿಕಾಯಿ ಜ್ಯೂಸ್, ಕಲ್ಲಂಗಡಿಹಣ್ಣು ನೀಡಿ ದಣಿವಾರಿಸಿದರು.
50 ಸಾವಿರಕ್ಕೂ ಹೆಚ್ಚು ಭಕ್ತರು:ರಥೋತ್ಸಕ್ಕೆ 35 ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಗೆ ಆಗಮಿಸಿ ಹರಕೆ ತೀರಿಸಿದರು. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಗ್ರಾಮಾಂತರ, ರಾಮನಗರ, ತುಮಕೂರು ಸೇರಿ ವಿವಿಧ ಜಿಲ್ಲೆಗಳ ಜನರು ಆಗಮಿಸಿದ್ದರು.
ಮೆರುಗು ನೀಡಿದ ಜಾನಪದ ಕಲಾತಂಡಗಳು: ಬ್ರಹ್ಮರಥೋತ್ಸವದಲ್ಲಿ 25ಕ್ಕೂ ಹೆಚ್ಚು ವೀರಗಾಸೆ ಕಲಾವಿದರು ಸುಡುವ ಬಿಸಿಲಿನಲ್ಲಿಯೂ ವೀರಗಾಸೆ ನೃತ್ಯ ಮಾಡಿ ಭಕ್ತರನ್ನು ರಂಜಿಸಿದರು.
ರಥೋತ್ಸವದಲ್ಲಿ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ , ಮುಜುರಾಯಿ ತಹಸೀಲ್ದಾರ್ ಹೇಮಾವತಿ, ಇಒ ಬೃಂದಾ, ಉಪ ತಹಸೀಲ್ದಾರ್ ಶಶಿಧರ್, ರಾಜಸ್ವನಿರೀಕ್ಷಕರಾದ ಮುನಿರಾಜು, ಸುಂದರ್ ರಾಜ್, ಪ್ರಧಾನ ಅರ್ಚಕರಾದ ಫಣಿಭೂಷಣ್, ಜಗಜ್ಯೋತಿ ಬಸವೇಶ್ವರ, ಸತೀಶ್, ಚನ್ನಬಸವರಾಧ್ಯ, ಅಭಿಲಾಷ್, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ವೀರಸಾಗರ ಮಂಜುನಾಥ್, ಯೋಗಾನಂದೀಶ್, ವೆಂಕಟಾಚಲಯ್ಯ, ಗಂಗರುದ್ರಯ್ಯ, ಪಾರುಪತ್ತೇದಾರ್ ಪ್ರಭುದೇವ್, ಸುಮಾ ಇತರರು ಪಾಳ್ಗೊಂಡಿದ್ದರು.
ಪೋಟೋ 1 * 2:ಸೋಂಪುರ ಹೋಬಳಿಯ ದೇವರಹೊಸಹಳ್ಳಿಯ ಭದ್ರಕಾಳಮ್ಮ ಹಾಗೂ ಶ್ರೀ ವೀರಭದ್ರಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.