ಚುನಾವಣೇಲಿ ಬಿಜೆಪಿ ಅದ್ಭುತ ಸಾಧನೆ: ಬೆಂಗ್ಳೂರಲ್ಲಿ ಮೋದಿಗೆ ಅಭಿನಂದನೆ

Published : May 11, 2026, 06:41 AM IST
PM Modi

ಸಾರಾಂಶ

ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಬೆನ್ನಲ್ಲೇ ಕಾರ್ಯಕ್ರಮ ನಿಮಿತ್ತ ಭಾನುವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿ ನಾಯಕರು ಅದ್ದೂರಿ ಸ್ವಾಗತ ಕೋರಿದರು.

 ಬೆಂಗಳೂರು : ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಬೆನ್ನಲ್ಲೇ ಕಾರ್ಯಕ್ರಮ ನಿಮಿತ್ತ ಭಾನುವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿ ನಾಯಕರು ಅದ್ದೂರಿ ಸ್ವಾಗತ ಕೋರಿದರು.

ಪ್ರಧಾನಿ ಮೋದಿ ಅವರಿಗೆ ಅಭಿನಂದನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಕೇಸರಿ ಪೇಟೆ, ಕೇಸರಿ ಶಾಲು ಧರಿಸಿದ್ದ ಕಾರ್ಯಕರ್ತರು ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನವಾಗುತ್ತಿದ್ದಂತೆ ಜೈ ಮೋದಿ, ಜೈ ಬಿಜೆಪಿ, ಜೈ ಶ್ರೀರಾಮ್‌ ಘೋಷಣೆ ಕೂಗಿ ಸಂಭ್ರಮಿಸಿದರು.

ಕಾರ್ಯಕರ್ತರತ್ತ ಕೈ ಬೀಸುತ್ತಾ ವೇದಿಕೆ ಏರಿದ ಪ್ರಧಾನಿ ಮೋದಿ ಅವರು ವೇದಿಕೆ ಮೇಲಿದ್ದ ರಾಜ್ಯ ಬಿಜೆಪಿ ನಾಯಕರತ್ತ ನಗು ಬೀರಿದರು. ಈ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊದಲಾದ ನಾಯಕರನ್ನು ಆತ್ಮೀಯವಾಗಿ ಮಾತನಾಡಿಸಿದರು.

ಕೇಸರಿಮಯವಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ನಾಯಕರು, ಪ್ರಧಾನಿ ಮೋದಿ ಅವರಿಗೆ ಮೈಸೂರು ಪೇಟ, ರೇಷ್ಮೆ ಶಾಲು ಹೊದಿಸಿ, ಮೋದಿ ಅವರದೇ ಪುತ್ಥಳಿ ನೀಡಿ ಗೌರವಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ವಾಗತ ಭಾಷಣ ಮಾಡಿದರು.

ಕನ್ನಡದಲ್ಲೇ ಭಾಷಣ ಆರಂಭ:

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ನಿಮಗೆಲ್ಲ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕಾರ್ಯಕ್ರಮದಲ್ಲಿ ಸೇರಿದ್ದ ಭಾರೀ ಸಂಖ್ಯೆಯ ಕಾರ್ಯಕರ್ತರನ್ನು ಕಂಡು ಬೆಂಗಳೂರಿನಲ್ಲಿ ಕೇಸರಿ ಸೂರ್ಯ ಉದಯವಾದಂತೆ ಕಾಣುತ್ತಿದೆ ಸಂತಸಪಟ್ಟರು. ಈ ಮಾತಿನಿಂದ ಸ್ಫೂರ್ತಿ ಪಡೆದ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ, ಮೋದಿ... ಎಂದು ಕೂಗಿ ಸಂಭ್ರಮಿಸಿದರು. ಮೋದಿ ಅವರು ಭಾಷಣದ ನಡುವೆ ನಾಡಪ್ರಭು ಕೆಂಪೇಗೌಡ ಮತ್ತು ನಗರದ ದೇವತೆ ಅಣ್ಣಮ್ಮ ದೇವಿಗೆ ಪ್ರಣಾಮ ಸಲ್ಲಿಸಿದರು. ಈ ಸಂದರ್ಭಗಳಲ್ಲೂ ಕಾರ್ಯಕರ್ತರು ಘೋಷಣೆ ಕೂಗಿದರು.

ಬಾಲಕರು ಬಿಡಿಸಿದ್ದ ಚಿತ್ರ ಸ್ವೀಕಾರ:

ವೇದಿಕೆ ಮುಂಭಾಗದಲ್ಲಿ ಕೆಲ ಬಾಲಕರು ತಾವೇ ಬಿಡಿಸಿದ್ದ ಪ್ರಧಾನಿ ಮೋದಿ ಅವರ ಚಿತ್ರಗಳನ್ನು ಹಿಡಿದು ಪೋಷಕರೊಂದಿಗೆ ಕುಳಿತ್ತಿದ್ದರು. ಭಾಷಣ ಮಾಡುವಾಗ ಆ ಬಾಲಕರನ್ನು ಗಮನಿಸಿದ ಮೋದಿ ಅವರು, ಆ ಚಿತ್ರಗಳನ್ನು ನಮ್ಮ ವಿಶೇಷ ಭದ್ರತಾ ತಂಡದ(ಎಸ್‌ಪಿಜಿ) ಸಿಬ್ಬಂದಿಗೆ ಕೊಡುವಂತೆ ಸೂಚಿಸಿದರು. ಚಿತ್ರ ಕೊಡುವಾಗ ನಿಮ್ಮ ವಿಳಾಸವನ್ನು ನೀಡಿ, ನಾನು ಮರಳಿ ನಿಮಗೆ ಪತ್ರ ಬರೆಯುವೆ ಎಂದು ಭರವಸೆ ನೀಡಿದರು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೋದಿ ಕಾರ್ಯಕ್ರಮ : ಸಂಚಾರ ದಟ್ಟಣೆಯಿಂದ ಸವಾರರ ಪರದಾಟ
ಸಚಿವ ಹಿರಿಯೂರು ಸುಧಾಕರ್‌ ನಿಧನ