ಸಚಿವ ಹಿರಿಯೂರು ಸುಧಾಕರ್‌ ನಿಧನ

Published : May 11, 2026, 06:18 AM IST
minister d sudhakar

ಸಾರಾಂಶ

ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಡಿ.ಸುಧಾಕರ್ (66) ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

 ಬೆಂಗಳೂರು :  ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಡಿ.ಸುಧಾಕರ್ (66) ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಮೂರು ವಾರಗಳ ಹಿಂದೆ ಮಂಡಿ ಚಿಪ್ಪು ಶಸ್ತ್ರಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ ಆಸ್ಪತ್ರೆಗೆ ಡಿ.ಸುಧಾಕರ್‌ ಅವರು ದಾಖಲಾಗಿದ್ದರು. ಬಳಿಕ ಶ್ವಾಸಕೋಶದ ಸೋಂಕಿಗೆ ತುತ್ತಾಘಿದ್ದ ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಆರೋಗ್ಯದಲ್ಲಿ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಬಳಿಯಿರುವ ಕೃಷ್ಣ ಇನ್ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್ (ಕಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ದೇಶದ ಪ್ರಮುಖ ತಜ್ಞರು ಹಾಗೂ ವಿದೇಶಿ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅವರು ಅಂತಿಮವಾಗಿ ಭಾನುವಾರ ಬೆಳಗಿನ ಜಾವ ಅವರು ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಆರ್‌. ಚಿನ್ನದುರೈ, ಸಚಿವ ಡಿ.ಸುಧಾಕರ್‌ ಅವರು ಭಾನುವಾರ ಬೆಳಗಿನ ಜಾವ 3.15ಕ್ಕೆ ಎಲೆಕ್ಟ್ರಾನಿಕ್‌ ಸಿಟಿಯ ಕೃಷ್ಣ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪ್ರಕಟಿಸಿದರು. ಸುಧಾಕರ್ ಅವರು ಪತ್ನಿ ಹರ್ಷಿಣಿ, ಒಬ್ಬ ಪುತ್ರ ಹಾಗೂ ಪುತ್ರಿ, ಅಪಾರ ಬೆಂಬಲಿಗರನ್ನು ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರ ಸೋಮವಾರ ಚಳ್ಳಕೆರೆಯಲ್ಲಿ ನಡೆಯಲಿದೆ. ಹಿರಿಯ ನಾಯಕನ ಅಗಲಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 3 ದಿನಗಳ ಶೋಕಾಚರಣೆ ಘೋಷಿಸಿದೆ.

ಚಿಕ್ಕಪ್ಪನೇ ರಾಜಕೀಯಕ್ಕೆ ಪ್ರೇರಣೆ:

1961ರ ಮಾರ್ಚ್ 28ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಜನಿಸಿದ ಸುಧಾಕರ್ ಅವರು ತಮ್ಮ ಶಿಕ್ಷಣದ ನಂತರ ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಅವರ ಚಿಕ್ಕಪ್ಪ ಎನ್.ಜಯಣ್ಣ ಅವರು ಚಳ್ಳಕೆರೆ ಕ್ಷೇತ್ರದ ಶಾಸಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸುಧಾಕರ್ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಚಿಕ್ಕಪ್ಪನ ರಾಜಕೀಯ ಉಸ್ತುವಾರಿಯನ್ನು ಡಿ.ಸುಧಾಕರ್ ವಹಿಸಿಕೊಂಡಿದ್ದರು.

2004ರಲ್ಲಿ ಮೊದಲ ಬಾರಿಗೆ ಶಾಸಕ:

ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಚಿವರಾಗಿದ್ದ ಡಿ.ಸುಧಾಕರ್ ಅವರು 2004ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚಳ್ಳಕೆರೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಅವರು 2013ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾದರು. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡರು. ಆದರೆ 2023ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಾಂಖ್ಯಿಕ ಮತ್ತು ಯೋಜನಾ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.

ಬಿಎಸ್‌ವೈ ಸರ್ಕಾರದಲ್ಲಿ ಸಚಿವ:

2008ರಲ್ಲಿ ಚಳ್ಳಕೆರೆ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುತ್ತಿದ್ದಂತೆ ಅವರು ಸಾಮಾನ್ಯ ಕ್ಷೇತ್ರವಾದ ಹಿರಿಯೂರಿನಲ್ಲಿ ಸ್ಪರ್ಧಿಸಿದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ನಂತರ ಬಿ.ಎಸ್‌.ಯಡಿಯೂರಪ್ಪ ಅವರ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಹಕಾರ ಕ್ಷೇತ್ರವೇ ಆಧಾರ:

ರಾಜಕೀಯದ ಜೊತೆ ಸಹಕಾರ ಕ್ಷೇತ್ರದಲ್ಲೂ ಅವರು ಮಹತ್ವದ ಪಾತ್ರ ವಹಿಸಿದ್ದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಅಧ್ಯಕ್ಷರಾಗಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಸಹಕಾರ ಸಂಘಗಳ ಮೂಲಕ ಸಾವಿರಾರು ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸಹಕಾರ ಕ್ಷೇತ್ರದ ಸಾಧನೆಯೇ ಅವರ ರಾಜಕೀಯ ಜೀವನಕ್ಕೆ ಮೆಟ್ಟಿಲಾಯಿತು ಎಂದು ಹೇಳಲಾಗುತ್ತದೆ.

ಸಮುದಾಯ ಇಲ್ಲದ ಕಡೆ ಗೆಲುವು:

ಜೈನ ಸಮುದಾಯಕ್ಕೆ ಸೇರಿದ ಡಿ.ಸುಧಾಕರ್‌ ಅವರು ಪ್ರತಿನಿಧಿಸಿದ್ದ ಚಳ್ಳಕೆರೆ ಹಾಗೂ ಹಿರಿಯೂರು ಎರಡೂ ಕ್ಷೇತ್ರಗಳಲ್ಲೂ ಜೈನ ಸಮುದಾಯದ ಮತದಾರರ ಸಂಖ್ಯೆ ಅತಿ ಕಡಿಮೆ. ಹೀಗಿದ್ದರೂ ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸುವ ಮೂಲಕ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

 ನನ್ನ ಆಪ್ತಮಿತ್ರ ಅಗಲಿದ್ದಾರೆ

ಇಂದು ನಮ್ಮ ಪಾಲಿಗೆ ದುಃಖದ ದಿನ. ನನ್ನ ಆಪ್ತಮಿತ್ರ, ಸಚಿವರಾದ ಡಿ.ಸುಧಾಕರ್ ನಮ್ಮನ್ನಗಲಿದ್ದಾರೆ. ಒಂದು ತಿಂಗಳ ಹಿಂದೆ ಮಂಡಿ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶ ಸೋಂಕಿಗೆ ತುತ್ತಾಗಿದ್ದರು. ತರುವಾಯ ಪ್ರಜ್ಞೆ ಕಳೆದುಕೊಂಡಿದ್ದರು. ಕೆಲ ದಿನಗಳ ಹಿಂದೆ ಅವರಿಗೆ ಪ್ರಜ್ಞೆ ಮರಳಿತ್ತು. ಹೀಗಾಗಿ ಗುಣಮುಖರಾಗಿ ಮರಳುತ್ತಾರೆಂಬ ವಿಶ್ವಾಸವಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ ಹೋರಾಟ ನಡೆಸಿದ್ದ ಸ್ಮರಣಾರ್ಥ ನೀರಾವರಿ ಯೋಜನೆಗೆ ಸುಧಾಕರ್‌ ಹೆಸರಿಡಲು ಚಿಂತನೆ ಮಾಡಲಾಗುವುದು.

- ಡಿ.ಕೆ.ಶಿವಕುಮಾರ್‌, ಡಿಸಿಎಂ

ರಾಜಕೀಯಕ್ಕೆ ನಷ್ಟ

ಸಚಿವ ಸುಧಾಕರ್ ಅವರ ಅಗಲಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟವುಂಟಾಗಿದೆ. ಎರಡನೇ ಬಾರಿಗೆ ಮಂತ್ರಿಯಾಗಿದ್ದ ಅವರು ಅತ್ಯಂತ ಜನಪ್ರಿಯ ವ್ಯಕ್ತಿ. ಸಮಾಜ ಕಲ್ಯಾಣ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ರೈತರ ಹಾಗೂ ಬಡವರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಕುಟುಂಬದವರಿಗೆ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.

- ಸಿದ್ದರಾಮಯ್ಯ, ಸಿಎಂ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ವರದಕ್ಷಿಣೆ ಕಿರುಕುಳ ಗಂಭೀರ ಅಪರಾಧ
ಬೆಳೆ ನಷ್ಟದ ರೈತನ ಮನೆಗೆ ಶಾಸಕ ಶ್ರೀನಿವಾಸ್ ಭೇಟಿ, ನೆರವು