;Resize=(412,232))
ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಹುಕೋಟಿ ಮೊತ್ತದ ಬಿಟ್ ಕಾಯಿನ್ ಹಗರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿ ಮೂವರನ್ನು ಜಾರಿ ನಿರ್ದೇಶನಾಲಯದ(ಇ.ಡಿ.) ಅಧಿಕಾರಿಗಳು ಬಂಧಿಸಿದ್ದಾರೆ.
ಶುಕ್ರವಾರ ತಡರಾತ್ರಿ ಕುಖ್ಯಾತ ಹ್ಯಾಕರ್ ಶ್ರೀಕಿ, ಆತನ ಸಹಚರರಾದ ರಾಬಿನ್ ಖಂಡೇವಾಲಾ ಮತ್ತು ಸುನೀಶ್ ಹೆಗ್ಡೆಯನ್ನು ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆ ಮೂವರು ಆರೋಪಿಗಳನ್ನು ಇ.ಡಿ. ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಹಗರಣದ ಪ್ರಮುಖ ಆರೋಪಿ ಶ್ರೀಕಿ ಬಂಧನದಿಂದಾಗಿ ಈತನ ಜೊತೆಗೆ ನಿಕಟ ಸಂಪರ್ಕ ಹಾಗೂ ಹಣಕಾಸು ವ್ಯವಹಾರ ಹೊಂದಿದ್ದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರರಾದ ಮೊಹಮ್ಮದ್ ನಲಪಾಡ್ ಮತ್ತು ಒಮರ್ ನಲಪಾಡ್‌ಗೆ ತಲೆ ಬಿಸಿ ಶುರುವಾಗಿದೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಏ.20ರಂದು ಇ.ಡಿ. ಅಧಿಕಾರಿಗಳು ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್, ಪುತ್ರರಾದ ಮೊಹಮ್ಮದ್ ನಲಪಾಡ್, ಒಮರ್ ನಲಪಾಡ್, ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗ ಅಕೀಬ್ ಖಾನ್ ನಿವಾಸಗಳು ಸೇರಿ 12 ಕಡೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಮೊಬೈಲ್‌ಗಳು ಸೇರಿ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು.
ಈ ಹಿಂದೆ ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿ, ಸರ್ಕಾರದ ಹಣವನ್ನು ವಿವಿಧ ಅಕ್ರಮ ಖಾತೆಗಳಿಗೆ ವರ್ಗಾಯಿಸಿದ ಆರೋಪ ಶ್ರೀಕಿ ತಂಡದ ಮೇಲಿದೆ. ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ಎಸ್‌ಐಟಿ ತನಿಖೆಗೆ ವಹಿಸಿತ್ತು. ಎಸ್‌ಐಟಿ ತನಿಖೆ ವೇಳೆ ಹಲವು ಡಿಜಿಟಲ್ ವ್ಯಾಲೆಟ್‌ಗಳ ಕಳ್ಳತನ ಬೆಳಕಿಗೆ ಬಂದಿತ್ತು. ಮೊಹಮ್ಮದ್ ನಲಪಾಡ್‌ಗೂ ಈ ತಂಡದ ಜೊತೆಗೆ ನಿಕಟ ಸಂಪರ್ಕ ಇರುವುದು ಗೊತ್ತಾಗಿತ್ತು. ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಎರಡು ಬಾರಿ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ನಡೆಸಿದ್ದರು.
ಪ್ರಕರಣದ ಬಗ್ಗೆ ಎಸ್ಐಟಿ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದಿದ್ದ ಇ.ಡಿ. ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಕುಖ್ಯಾತ ಹ್ಯಾಕರ್ ಶ್ರೀಕಿ ಸೇರಿ ಮೂವರನ್ನು ಬಂಧಿಸಿದ್ದಾರೆ. ಇದೀಗ ವಿಚಾರಣೆ ವೇಳೆ ಆರೋಪಿಗಳು ನೀಡುವ ಹೇಳಿಕೆಗಳು ಮಹತ್ವ ಪಡೆದುಕೊಳ್ಳಲಿವೆ. ಶ್ರೀಕಿ ನೀಡುವ ಹೇಳಿಕೆಗಳು ನಲಪಾಡ್ ಪಾಲಿಗೆ ಕಂಟಕವಾಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರದ ಹಣ ಮತ್ತು ಡಿಜಿಟಲ್ ಆಸ್ತಿಗಳ ಲೂಟಿಯಲ್ಲಿ ಯಾರಿಗೆಲ್ಲಾ ಪಾಲು ಹೋಗಿದೆ ಎಂಬುದು ಇ.ಡಿ. ತನಿಖೆಯಿಂದ ಹೊರಬರಬೇಕಿದೆ. ಹ್ಯಾಕರ್ ಶ್ರೀಕಿ ಸೇರಿ ಮೂವರ ಬಂಧನದ ಬಗ್ಗೆ ಇ.ಡಿ. ಅಧಿಕಾರಿಗಳು ಈವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.