;Resize=(412,232))
ಬೆಂಗಳೂರು : ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸ್ವರಾಜ್ ದ್ವೀಪದ ಸಮುದ್ರದ ಆಳದಲ್ಲಿ ಶನಿವಾರ ನಡೆದ ಭಾರತದ ಅತಿ ದೊಡ್ಡ ತ್ರಿವರ್ಣ ಧ್ವಜ ಅನಾವರಣ ಮತ್ತು ಆ ಮೂಲಕ ಸೃಷ್ಟಿಯಾದ ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’ನಲ್ಲಿ ಕನ್ನಡಿಗ ಶರತ್ ಆರ್.ಅಶೋಕ್ ಕೂಡಾ ಭಾಗಿಯಾಗಿದ್ದರು.
ಬೆಂಗಳೂರಿನ ಪ್ರತಿಭಾವಂತ ಸಾಹಸ ಕ್ರೀಡಾ ಪರಿಣಿತ ಶರತ್ ಆರ್.ಅಶೋಕ್ ಅವರು ಪಾಲ್ಗೊಳ್ಳುವ ಮೂಲಕ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. ಶರತ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ಪುತ್ರ.
ಶನಿವಾರ ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ದೇಶದ ವಿವಿಧ ಭಾಗಗಳ ಸುಮಾರು 200ಕ್ಕೂ ಹೆಚ್ಚು ನುರಿತ ಸ್ಕೂಬಾ ಡೈವರ್‌ಗಳು ಭಾಗವಹಿಸಿದ್ದರು. ಅಂಡಮಾನ್ ಆಡಳಿತ ಮತ್ತು ಭಾರತೀಯ ರಕ್ಷಣಾ ಪಡೆಗಳ ಸಹಯೋಗದೊಂದಿಗೆ ನಡೆದ ಈ ಅಭಿಯಾನದಲ್ಲಿ, 60x40 ಮೀಟರ್ (2,400 ಚದರ ಮೀಟರ್) ವಿಸ್ತೀರ್ಣದ ಬೃಹತ್ ರಾಷ್ಟ್ರಧ್ವಜವನ್ನು ಅಲೆಗಳ ಅಬ್ಬರ ಮತ್ತು ನೀರಿನ ತೀವ್ರ ಒತ್ತಡದ ನಡುವೆ ಸಮುದ್ರದಾಳದಲ್ಲಿ ಅನಾವರಣಗೊಳಿಸಲಾಯಿತು. ಈ ಅಪ್ರತಿಮ ಸಾಧನೆಯನ್ನು ಗುರುತಿಸಿ ಅಂಡಮಾನ್ ಮತ್ತು ನಿಕೋಬಾರ್‌ನ ಲೆಫ್ಟಿನೆಂಟ್ ಗವರ್ನರ್ ಡಿ.ಕೆ.ಜೋಶಿ ಅವರು ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣಪತ್ರ ನೀಡಿ ಗೌರವಿಸಿದ್ದಾರೆ.
ನಮ್ಮ ತ್ರಿವರ್ಣ ಧ್ವಜವು 140 ಕೋಟಿ ಭಾರತೀಯರ ಶಕ್ತಿ ಮತ್ತು ಏಕತೆಯ ಪ್ರತೀಕ. ಸಾಹಸವು ನನ್ನ ಆಸಕ್ತಿಯಾಗಿದ್ದು, ಅಲೆಗಳ ಅಂತರಾಳದಲ್ಲಿ ರಾಷ್ಟ್ರಧ್ವಜ ಅರಳಿಸಿದ ಆ ಕ್ಷಣ ನನ್ನ ಬದುಕಿನ ಅತ್ಯಂತ ಗೌರವದ ಸಂದರ್ಭ. ವನ್ಯಜೀವಿ ಸಂರಕ್ಷಣೆ ಮತ್ತು ಸಾಹಸ ಕ್ರೀಡೆಗಳಲ್ಲಿನ ನನ್ನ ಅನುಭವ ಇಂತಹ ರಾಷ್ಟ್ರಮಟ್ಟದ ಸಾಧನೆಯಲ್ಲಿ ಭಾಗಿಯಾಗಲು ನನಗೆ ಸ್ಫೂರ್ತಿ ನೀಡಿದೆ.
-ಶರತ್ ಆರ್. ಅಶೋಕ್, ಸಾಹಸ ಕ್ರೀಡಾಪಟು
ಶರತ್ ಆರ್.ಅಶೋಕ್ ಅವರು ಸಾಹಸ ಕ್ರೀಡಾ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ನಿರಂತರವಾಗಿ ತೊಡಗಿಸಿಕೊಂಡಿದ್ದು, ಅಪಾರ ಅನುಭವ ಹೊಂದಿದ್ದಾರೆ. ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಇವರು, ಪ್ರಮಾಣೀಕೃತ ‘ಡೈವ್ ಮಾಸ್ಟರ್’ ಮತ್ತು ಸ್ಕೂಬಾ ಇನ್ಸ್ಟ್ರಕ್ಟರ್ ಆಗಿ ಅಂತಾರಾಷ್ಟ್ರೀಯ ಮಟ್ಟದ ಪರಿಣತಿ ಪಡೆದಿದ್ದಾರೆ. ಜಲಸಾಹಸ ಮಾತ್ರವಲ್ಲದೆ, ಪ್ಯಾರಾಗ್ಲೈಡಿಂಗ್, ಪ್ಯಾರಾಮೋಟರ್, ಮೊಟೋಕ್ರಾಸ್ ಮತ್ತು ಪರ್ವತಾರೋಹಣದಲ್ಲೂ ಶರತ್ ಪರಿಣಿತಿ ಹೊಂದಿದ್ದಾರೆ.