ಕಾಲ್ತುಳಿತ ಪ್ರಕರಣಕ್ಕೆ ಬಿಜೆಪಿಗರ ಬೀದಿ ಪ್ರಹಸನ : ಸಿದ್ದರಾಮಯ್ಯ

Published : Jun 18, 2025, 05:35 AM IST
Siddaramaiah action About Stampede Case

ಸಾರಾಂಶ

ಬಿಜೆಪಿ ನಾಯಕರು ಬೀದಿ ಪ್ರಹಸನ ಮಾಡಿ ನಮ್ಮ ರಾಜೀನಾಮೆ ಕೇಳುತ್ತಿದ್ದಾರೆ, ಅವಘಡಗಳು ನಡೆದಿದ್ದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ಬಿಜೆಪಿ ನಾಯಕರ ಪಟ್ಟಿ ಬಿಡುಗಡೆ ಮಾಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು

ಬೆಂಗಳೂರು : ‘ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಆದರೂ ಬಿಜೆಪಿ ನಾಯಕರು ಬೀದಿ ಪ್ರಹಸನ ಮಾಡಿ ನಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ನಮ್ಮ ರಾಜೀನಾಮೆ ಕೇಳುವ ಮೊದಲು ಇಂತಹದ್ದೇ ಅವಘಡಗಳು ನಡೆದಿದ್ದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ಬಿಜೆಪಿ ನಾಯಕರ ಪಟ್ಟಿ ಬಿಡುಗಡೆ ಮಾಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಲ್ತುಳಿತ ಅವಘಡದ ಹೊಣೆಯನ್ನು ನಾವು ಹೊತ್ತಿದ್ದೇವೆ. ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಸೇರಿ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ವರ್ಗಾವಣೆ ಮಾಡಿದ್ದೇವೆ. ನನ್ನ ರಾಜಕೀಯ ಕಾರ್ಯದರ್ಶಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದೇನೆ. ಸಮಗ್ರ ತನಿಖೆಗೆ ನಿವೃತ್ತ ನ್ಯಾಯಾಧೀಶರಾದ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನೂ ರಚಿಸಿದ್ದೇವೆ. ಇಷ್ಟಾದರೂ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗರ ನಡೆ ರಾಜಕೀಯ ಪ್ರೇರಿತ ಎಂದು ದೂರಿದ್ದಾರೆ.

ಹೆಣಗಳ ಮೇಲಿನ ರಾಜಕೀಯ ಬಿಜೆಪಿಗೆ ಹೊಸದಲ್ಲ. ಅಪಘಾತ, ಹತ್ಯೆ, ದೌರ್ಜನ್ಯಗಳು ನಡೆದ ತಕ್ಷಣ ಸತ್ತ ಜೀವಗಳನ್ನು ಹುಡುಕಿಕೊಂಡು ಹೋಗುವ ರಣಹದ್ದುಗಳಂತೆ ಎರಗಿ ಬೀಳುವುದು ಅವರ ರಕ್ತದಲ್ಲಿಯೇ ಇದೆ. ತಮ್ಮ ಊಟದೆಲೆಯ ಮೇಲೆ ಆನೆ ಸತ್ತುಬಿದ್ದಿದ್ದರೂ ಎದುರಿಗಿದ್ದವರ ಎಲೆ ಮೇಲೆ ಸತ್ತು ಬಿದ್ದ ನೊಣದ ಕಡೆ ಬೊಟ್ಟು ಮಾಡುವುದು ಬಿಜೆಪಿಯ ಹಳೆಯ ಚಾಳಿ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ದುರಂತಗಳಲ್ಲಿ ಅವರು ಯಾಕೆ ರಾಜೀನಾಮೆ ನೀಡಿಲ್ಲ. ಇವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದರು.

ಮೋದಿ ಯಾಕೆ ರಾಜೀನಾಮೆ ನೀಡಿಲ್ಲ?:

2002ರಲ್ಲಿ ಗುಜರಾತ್ ರಾಜ್ಯದಲ್ಲಿ ನಡೆದ ಹತ್ಯಾಕಾಂಡದಲ್ಲಿ 2,000 ಅಮಾಯಕರು ಸತ್ತರು. ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸೂಚನೆ ನೀಡಿದರೂ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ರಾಜೀನಾಮೆ ನೀಡಿಲ್ಲ, ಇಲ್ಲಿಯವರೆಗೆ ಕನಿಷ್ಠ ವಿಷಾದವನ್ನೂ ಸೂಚಿಸಿಲ್ಲ. ನಮ್ಮ ರಾಜೀನಾಮೆ ಕೇಳುವವರು ಮೊದಲು ಇದಕ್ಕೆ ಉತ್ತರಿಸಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪಹಲ್ಗಾಮ್‌ ಹತ್ಯಾಕಾಂಡದಲ್ಲಿ 26 ಭಾರತೀಯರು ಪ್ರಾಣ ಕಳೆದುಕೊಂಡರು. ಈ ಘಟನೆಯ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕೆಂದು ನಮ್ಮ ಪಕ್ಷ ಒತ್ತಾಯಿಸಿಲ್ಲ. ಈ ಘಟನೆಯ ಚರ್ಚೆಗೆ ಕನಿಷ್ಠ ಸಂಸತ್ ವಿಶೇಷ ಅಧಿವೇಶನ ಕರೆಯಲೂ ಪ್ರಧಾನಿಯವರು ಒಪ್ಪಿಕೊಂಡಿಲ್ಲ. ಇಲ್ಲಿಯವರೆಗೆ 26 ಅಮಾಯಕರ ಸಾವಿಗೆ ಕಾರಣರಾದ ನಾಲ್ಕು ಮಂದಿ ದುರುಳರು ಯಾರು ಎನ್ನುವುದನ್ನು ಪತ್ತೆ ಹಚ್ಚಲಾಗಿಲ್ಲ. ಇದು ಕೇಂದ್ರ ಸರ್ಕಾರದ ವೈಫಲ್ಯ ಅಲ್ಲವೇ? ಈ ವೈಫಲ್ಯದ ಹೊಣೆಯನ್ನು ಯಾರು ಹೊರಬೇಕು? ಪಂಡಿತ ಜವಾಹರಲಾಲ್ ನೆಹರೂ ಅವರಾ? ರಾಹುಲ್ ಗಾಂಧಿಯವರಾ? ಇಲ್ಲವೇ ಪ್ರಧಾನಿ ನರೇಂದ್ರ ಮೋದಿಯವರೇ? ಎಂದು ಪ್ರಶ್ನಿಸಿದ್ದಾರೆ.

ಈಶಾನ್ಯ ಭಾಗದ ಮಣಿಪುರ ಹಿಂಸೆಯ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ. ನೂರಾರು ಮಂದಿ ಸಾವಿಗೀಡಾಗಿದ್ದರೂ ಆ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಬಿರೇನ್ ಸಿಂಗ್ 20 ತಿಂಗಳ ಕಾಲ ಕುರ್ಚಿಗೆ ಅಂಟಿ ಕೂತಿದ್ದರು. ಕೊನೆಗೂ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ರಾಜೀನಾಮೆ ನೀಡಿದ್ದರು. ಈಗಲೂ ಅಲ್ಲಿ ಹಿಂಸಾಚಾರ ಮುಂದುವರಿದಿದೆ. ಇದರ ಹೊಣೆಯನ್ನು ಕೇಂದ್ರ ಗೃಹಸಚಿವರು ಹೊರುವುದು ಬೇಡವೇ? ಎಂದು ಕೇಳಿದ್ದಾರೆ.

ಗುಜರಾತ್‌ನ ಮೊರ್ಬಿ ಸೇತುವೆ ಕುಸಿದು ಬಿದ್ದು 140 ಮಂದಿ ಮೃತಪಟ್ಟಿದ್ದರು. ಜನವರಿ ತಿಂಗಳಲ್ಲಿ ಮಹಾಕುಂಭಮೇಳದಲ್ಲಿ 30 ಯಾತ್ರಿಕರು ಪ್ರಾಣ ಕಳೆದುಕೊಂಡರು. ಆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾಗಿರುವವರು ಬಿಜೆಪಿಗೆ ಸೇರಿದವರಲ್ಲವೇ? ಹೀಗಿರುವಾಗ ನಮ್ಮ ರಾಜೀನಾಮೆ ಕೇಳಲು ರಾಜ್ಯದ ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''