ಬೆಂಗಳೂರು : ಕೊಳಚೆ ನೀರು ಸಂಸ್ಕರಿಸದೆ ಮೋರಿಗೆ ಹರಿಬಿಟ್ಟ ಆರೋಪದಲ್ಲಿ ಜನಪ್ರಿಯ ಟಿವಿ ಶೋ ‘ಬಿಗ್ ಬಾಸ್’ ಶೂಟಿಂಗ್ ಸೆಟ್ ಇರುವ ಬಿಡದಿಯ ಜಾಲಿವುಡ್ ಸ್ಟುಡಿಯೋ ಮುಚ್ಚಲು ಆದೇಶ ಮಾಡಿ ಭಾರೀ ಸುದ್ದಿಯಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಳೆದ 9 ತಿಂಗಳಲ್ಲಿ ರಾಜ್ಯದ 158 ಕಾರ್ಖಾನೆ, ಕೈಗಾರಿಕೆಗಳನ್ನು ಬಂದ್ ಮಾಡಲು ಆದೇಶ ಹೊರಡಿಸಿದೆ.
ಪ್ಲಾಸ್ಟಿಕ್ ವಸ್ತುಗಳ ಉತ್ಪಾದನಾ ಘಟಕಗಳು, ಹಾಟ್ ಮಿಕ್ಸ್ ಪ್ಲಾಂಟ್, ಟಾರ್ ಪ್ಲಾಂಟ್, ಚಿನ್ನಾಭರಣ ತಯಾರಿ ಮತ್ತು ಕರಗಿಸುವ ಘಟಕ, ಆಹಾರ ಉತ್ಪನ್ನ ತಯಾರಿಕಾ ಘಟಕ, ಜೀನ್ಸ್, ಕಬ್ಬಿಣ, ವಸ್ತ್ರಗಳಿಗೆ ಬಣ್ಣ ಹಾಕುವ ಕಾರ್ಖಾನೆ, ಸಿಮೆಂಟ್ ಪೈಪ್ ನಿರ್ಮಾಣ, ಎರಕದ ಮನೆ, ಬಳಸಿದ ಬ್ಯಾಟರಿ ಲೀಡ್ ಸಂಸ್ಕರಣೆ ಘಟಕ, ಕಾರ್ ಮತ್ತು ಬೈಕ್ ಶೋರೂಮ್ ಮತ್ತು ಸರ್ವೀಸಿಂಗ್ ಸೆಂಟರ್ ಸೇರಿ ಇನ್ನಿತರ ಘಟಕಗಳಿಗೆ ಮಂಡಳಿಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ಬಹುತೇಕ ಕೈಗಾರಿಕೆ, ಕಾರ್ಖಾನೆಗಳು ಬೆಂಗಳೂರಿನಲ್ಲೇ ಇವೆ. ಉಳಿದಂತೆ ಬಳ್ಳಾರಿ, ರಾಮನಗರ, ಕೊಪ್ಪಳ, ಬೆಳಗಾವಿ, ಮೈಸೂರು, ರಾಯಚೂರು, ಕೋಲಾರ, ಮಂಡ್ಯ, ದಾವಣಗೆರೆ ಸೇರಿ ಇನ್ನಿತರ ಜಿಲ್ಲೆಗಳಲ್ಲಿನ ಘಟಕಗಳನ್ನು ಮುಚ್ಚುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇನ್ನು ನೋಟಿಸ್ ಪಡೆದಿರುವ ಕಾರ್ಖಾನೆಗಳ ಪೈಕಿ ಕೆಲ ಕಾರ್ಖಾನೆಗಳು ಅಕ್ರಮವಾಗಿ ಅಥವಾ ನೋಂದಣಿ ಮಾಡಿಕೊಳ್ಳದೆ ಕಾರ್ಯಾಚರಣೆ ನಡೆಸುತ್ತಿರುವುದನ್ನು ಮಂಡಳಿ ಪತ್ತೆ ಹಚ್ಚಿ ಜಲ ಮತ್ತು ವಾಯು ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ ಅಡಿ ನೋಟಿಸ್ ನೀಡಲಾಗಿದೆ.
ಮಾಲಿನ್ಯ ಮಾಡುವವರ ವಿರುದ್ಧ ಕ್ರಮ:
ಸುಪ್ರೀಂ ಕೋರ್ಟ್ ಆದೇಶಗಳು, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶಗಳು ಹಾಗೂ ಮಾಲಿನ್ಯಕ್ಕೆ ಸಂಬಂಧಿಸಿದ ಕಾಯ್ದೆಗಳ ಅನ್ವಯ ಜಲ ಮತ್ತು ವಾಯು ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳಿಗೆ ನೋಟಿಸ್ ನೀಡಲಾಗುತ್ತದೆ. ಕಾಲಾವಕಾಶ ನೀಡಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗುತ್ತದೆ. ನಿಯಮಾನುಸಾರ ನೀಡಿದ ನೋಟಿಸ್‌ಗಳಿಗೆ ಉತ್ತರಿಸದೆ ನಿಯಮ ಪಾಲಿಸದ ಘಟಕಗಳನ್ನು ಮುಚ್ಚಲಾಗುತ್ತದೆ ಎಂದು ಮಂಡಳಿ ಸದಸ್ಯ ಕಾರ್ಯದರ್ಶಿ ಲಿಂಗರಾಜ ಎಸ್.ಎಸ್. ತಿಳಿಸಿದರು.
ಅನುಮತಿ ಪಡೆಯದ ಕಾರ್ಖಾನೆಗಳನ್ನು ನೇರವಾಗಿ ಮುಚ್ಚಲು ಎನ್‌ಜಿಟಿ ಆದೇಶವಿದೆ. ಇನ್ನು ಪರವಾನಗಿ ನವೀಕರಿಸದಿರುವುದು, ಸಾರ್ವಜನಿಕರ ದೂರುಗಳು, ಮಂಡಳಿ ಅಧಿಕಾರಿಗಳು ಕೂಡ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸದಸ್ಯ ಕಾರ್ಯದರ್ಶಿ ಲಿಂಗರಾಜ ಎಸ್.ಎಸ್ ಹೇಳಿದರು.