ಭಾರತದ ಎಲೆಕ್ಟ್ರಾನಿಕ್ ಉದ್ಯಮದ ದಿಗ್ಗಜ ಬಿಪಿಎಲ್ ಸಂಸ್ಥಾಪಕ ಟಿಪಿಜಿ ನಂಬಿಯಾರ್ ವಿಧಿವಶ : ಗಣ್ಯರ ಸಂತಾಪ

Published : Nov 01, 2024, 07:57 AM IST
Nambiyar

ಸಾರಾಂಶ

ಭಾರತದ ಎಲೆಕ್ಟ್ರಾನಿಕ್ ಉದ್ಯಮದ ದಿಗ್ಗಜ ಹಾಗೂ ಬಿಪಿಎಲ್ ಸಂಸ್ಥಾಪಕರಾದ ಟಿಪಿಜಿ ನಂಬಿಯಾರ್ (94) ಅವರು ಗುರುವಾರ ಬೆಳಗ್ಗೆ ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು.

ಬೆಂಗಳೂರು : ಭಾರತದ ಎಲೆಕ್ಟ್ರಾನಿಕ್ ಉದ್ಯಮದ ದಿಗ್ಗಜ ಹಾಗೂ ಬಿಪಿಎಲ್ ಸಂಸ್ಥಾಪಕರಾದ ಟಿಪಿಜಿ ನಂಬಿಯಾರ್ (94) ಅವರು ಗುರುವಾರ ಬೆಳಗ್ಗೆ ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಗ್ಗೆ 10.15 ಗಂಟೆಗೆ ಬೆಂಗಳೂ ರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ದೇಶದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ನಂಬಿಯಾರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರದ ಮಾಜಿ ಸಚಿವ ಹಾಗೂ ಅಳಿಯರಾದ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.

ಮೃತರು ಪುತ್ರ ಅಜಿತ್ ನಂಬಿಯಾರ್, ಅಳಿಯ ರಾಜೀವ್ ಚಂದ್ರಶೇಖರ್, ಪುತ್ರಿ ಅಂಜು ಚಂದ್ರ ಶೇಖರ್, ಸೊಸೆ ಮೀನಾ, ಮೊಮ್ಮಕ್ಕಳಾದ ಶ್ರೇಯಾ, ದೇವಿಕಾ ಹಾಗೂ ವೇದ್ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದೇಶದ ಪ್ರತಿ ಮನೆಯ ಮಾತಾಗಿರುವ ಬಿಪಿಎಲ್ ಕಂಪೆನಿ ಕಟ್ಟಿದ್ದ ಅವರು ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ತೆರೆದಿದ್ದರು. 80ರ ದಶದಲ್ಲೇ ಮೇಕ್ ಇನ್ ಇಂಡಿಯಾವನ್ನು ದೇಶಕ್ಕೆ ಪರಿಚಯಿಸಿದ್ದ ದೂರದೃಷ್ಟಿ ಉದ್ಯಮಿ ಎಂದೇ ಹೆಸರಾಗಿದ್ದರು. ಕೇರಳ ಮೂಲದವರಾಗಿದ್ದರೂ ಬೆಂಗಳೂರು ಕೇಂದ್ರಿತವಾಗಿ ದೇಶ ಹಾಗೂ ವಿದೇಶಕ್ಕೆ ಹೆಸರುವಾಸಿಯಾಗಿರುವ ಹಲವು ಕಂಪನಿಗಳನ್ನು ಅವರು ಕಟ್ಟಿದ್ದರು.

ಗಣ್ಯರ ಸಂತಾಪ: ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್‌ಶಾ ಸೇರಿದಂತೆ ಹಲವರು ಟಿಪಿಜಿ ನಂಬಿಯಾರ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಅಂತ್ಯಕ್ರಿಯೆ: ಮೃತರ ಪಾರ್ಥಿವ ಶರೀರವನ್ನು ಶುಕ್ರವಾರ 10 ಗಂಟೆಯವರೆಗೆ ಬೆಂಗಳೂರಿನ ಲ್ಯಾವೆಲ್ಲ ರಸ್ತೆಯಲ್ಲಿನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಶುಕ್ರವಾರ ಬೆಳಗ್ಗೆ 11 ರಿಂದ 12 ಗಂಟೆ ನಡುವೆ ನಗರದ ಕಾಕ್ಸ್‌ಟೌನ್ ಬಳಿಯ ಕಲ್ಪಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀ ಟಿಪಿಜಿ ನಂಬಿಯಾರ್‌ಜಿ ಅವರು ಪ್ರವರ್ತಕ ನವೋದ್ಯಮಿ ಮತ್ತು ಕೈಗಾರಿಕೋದ್ಯಮಿಯಾಗಿದ್ದರು, ಅವರು ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸುವ ಪ್ರಬಲ ಪ್ರತಿಪಾದಕರಾಗಿದ್ದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು.

-ನರೇಂದ್ರ ಮೋದಿ ಪ್ರಧಾನಿ

ನನ್ನ ಮಾವ ಟಿಪಿಜಿ ನಂಬಿಯಾರ್, ಬಿಪಿಎಲ್ ಗ್ರೂಪ್ ಅಧ್ಯಕ್ಷರ ನಿಧನದ ಬಗ್ಗೆ ನಾನು ನಿಮಗೆಲ್ಲರಿಗೂ ತಿಳಿಸಲು ಬಹಳ ದುಃಖವಾಗಿದೆ. ಓಂ ಶಾಂತಿ. ಅವರು ನಿಜವಾದ ದಾರ್ಶನಿಕರಾಗಿದ್ದರು ಮತ್ತು ಭಾರತದ ಅತ್ಯಂತ ವಿಶ್ವಾಸಾರ್ಹ ಗ್ರಾಹಕ ಬ್ಯಾಂಡ್‌ಗಳಲ್ಲಿ ಒಂದನ್ನು ನಿರ್ಮಿಸಿದ್ದಾರೆ. ಅದು ಇಂದಿಗೂ ಜನಪ್ರಿಯವಾಗಿದೆ. ನಾನು ನನ್ನ ಕೇರಳ ಚುನಾವಣಾ ಪ್ರಚಾರ ಕಾರ್ಯವನ್ನು ವಿರಾಮಗೊಳಿಸುತ್ತಿದ್ದೇನೆ ಮತ್ತು ನನ್ನ ಕುಟುಂಬದೊಂದಿಗೆ ಇರಲು ಬೆಂಗಳೂರಿಗೆ ಹಿಂತಿರುಗುತ್ತಿದ್ದೇನೆ.

-ರಾಜೀವ್ ಚಂದ್ರಶೇಖ‌ರ್, ಬಿಜೆಪಿ ಮುಖಂಡ ಹಾಗೂ ಟಿಪಿಜಿ ನಂಬಿಯಾರ್ ಅವರ ಅಳಿಯ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ
569 ಲೈಸೆನ್ಸ್‌ ಇ-ಹರಾಜಿಗೆ ಮುಂದಾದ ಅಬಕಾರಿ ಇಲಾಖೆ