ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ : ಕೇಸ್ ದಾಖಲಿಸಲು ಕೋರಿ ಕೋರ್ಟಿಗೆ ಅರ್ಜಿ

Published : Apr 24, 2026, 07:47 AM IST
court verdict

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಘನ ತ್ಯಾಜ್ಯ ಟೆಂಡರ್ ಅಂತಿಮಗೊಳಿಸಲು‌ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ

 ಬೆಂಗಳೂರು :  ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಘನ ತ್ಯಾಜ್ಯ ಟೆಂಡರ್ ಅಂತಿಮಗೊಳಿಸಲು‌ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್‌ಡಬ್ಲ್ಯೂಎಂಎಲ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಲು ನಿರ್ದೇಶಿಸುವಂತೆ ಕೋರಿ ಗುತ್ತಿಗೆದಾರ ಎಸ್. ಎನ್. ಬಾಲಸುಬ್ರಮಣಿಯನ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಘನತ್ಯಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಬಾಲಸುಬ್ರಮಣಿಯನ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ನಡೆಸಿದರು.

ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟಿರುವುದನ್ನು ಪ್ರಮಾಣೀಕರಿಸಿ ಪ್ರಮಾಣ ಪತ್ರ ಸಲ್ಲಿಸುವುದಾಗಿ ಅರ್ಜಿದಾರರ‌ ಪರ ವಕೀಲರು ತಿಳಿಸಿದುದನ್ನು ಪರಿಗಣಿಸಿದ ಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನಕುಮಾರ್ ಹಾಜರಾಗಿ, ಶಾಂತಿನಗರ ತ್ಯಾಜ್ಯ ವಿಲೇವಾರಿ ಟೆಂಡರ್ ಪ್ಯಾಕೇಜ್ -2, ಸಿ.ವಿ. ರಾಮನ್ ನಗರ ಪ್ಯಾಕೇಜ್ -1 ಹಾಗೂ ದಾಸರಹಳ್ಳಿ ಪ್ಯಾಕೇಜ್ -3ಗೆ ಅರ್ಜಿದಾರರು ಸಲ್ಲಿಸಿದ ಎಲ್1 ಬಿಡ್ ಅನ್ನು ಅಧಿಕಾರಿಗಳು ಅಂಗೀಕರಿಸಿದ್ದರು. ಆದರೆ, ಕರೀಗೌಡ ಅವರು ಕಚೇರಿಗೆ ಅರ್ಜಿದಾರರನ್ನು ಕರೆದು ಮಾ.10 ರಂದು ಕೆಲ ಬಾಧ್ಯತೆಗಳನ್ನು ಪೂರೈಸುವಂತೆ ಹೇಳಿದರು. ಅಂದರೆ ಹಣ ನೀಡಬೇಕು.‌ ಇಲ್ಲವಾದರೆ ತುಷಾರ್ ಗಿರಿನಾಥ್ ಟೆಂಡರ್‌ ಅಂತಿಮಗೊಳಿಸುವುದಿಲ್ಲ‌ ಎಂಬುದಾಗಿ ತಿಳಿಸಿದರು ಎಂದು ಆರೋಪಿಸಿದರು.

ಏಳು ವರ್ಷದ ಗುತ್ತಿಗೆಗೆ ಸರ್ಕಾರ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಶೇ.15 ರಷ್ಟು ಲಂಚ

ಅಲ್ಲದೇ, ಏಳು ವರ್ಷದ ಗುತ್ತಿಗೆಗೆ ಸರ್ಕಾರ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಶೇ.15 ರಷ್ಟು ಲಂಚ ನೀಡಬೇಕೆಂದು ಕೇಳಿದರು. ಲಂಚ ನೀಡದಿದ್ದರೆ ಅರ್ಜಿದಾರರ ಇತರೆ ಗುತ್ತಿಗೆಗಳನ್ನು ರದ್ದುಪಡಿಸುತ್ತೇವೆಂದು ಬೆದರಿಸಿದ್ದಾರೆ. ಈ ಬಗ್ಗೆ ಮಾ.11 ರಂದು ಮುಖ್ಯ ಕಾರ್ಯದರ್ಶಿಗೆ ದೂರನ್ನು ನೀಡಲಾಗಿದೆ. ಅಂತಿಮವಾಗಿ ಲಂಚದ ಬೇಡಿಕೆಗೆ ಒಪ್ಪದಿದ್ದಕ್ಕೆ ಜುಲೈ 30ರಂದು ಕರೆಯಲಾಗಿದ್ದ ಟೆಂಡರ್ ಹಿಂಪಡೆದು ಹೊಸ ಟೆಂಡರ್ ಪ್ರಕಟಿಸಿ 2026ರ ಮಾ.25ರಂದು ಅಧಿಸೂಚನೆ ಹೊರಡಿಸಲಾಗಿದೆ.

ಹಾಗಾಗಿ, ಆ ಟೆಂಡರ್ ಅಧಿಸೂಚನೆಯನ್ನು ರದ್ದುಪಡಿಸಬೇಕು. ಅಧಿಕಾರದ ದುರುಪಯೋಗ ಮಾಡಿ, ಟೆಂಡರ್ ಅಧಿಸೂಚನೆ ಹಿಂಪಡೆದಿರುವುದು ಹಾಗೂ ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದರು.

ಗುತ್ತಿಗೆದಾರರ ಪರ ವಾದಕ್ಕೆ ತೀವ್ರ ಆಕ್ಷೇಪ

ಗುತ್ತಿಗೆದಾರರ ಪರ ವಕೀಲರ ವಾದವನ್ನು ತೀವ್ರವಾಗಿ ಆಕ್ಷೇಪಿಸಿದ ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅರ್ಜಿದಾರರು ಗುತ್ತಿದಾರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮಾ.10 ರಂದು ಅವರು ದೆಹಲಿಯಲ್ಲಿದ್ದರು. ಆ ದಿನ ದೆಹಲಿಯಲ್ಲಿದ್ದ ಬಗ್ಗೆ ವಿಮಾನ ಪ್ರಯಾಣದ ಬೋರ್ಡಿಂಗ್ ಪಾಸ್ ಇದೆ. ಹಿರಿಯ ಐಎಎಸ್ ಅಧಿಕಾರಿಗಳ ಮೇಲೆಯೇ ಸುಳ್ಳು ಆರೋಪ ಮಾಡಿರುವುದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.

ಅರ್ಜಿದಾರರ‌ ಪರ ವಕೀಲರು, ಮಾ.10ರಂದು ಖುದ್ದಾಗಿ ಭೇಟಿ ಮಾಡಿದಾಗ ಲಂಚ ಕೇಳಿದರು ಎಂದು ಹೇಳಿಲ್ಲ. ಅರ್ಜಿದಾರರು ಯಾವುದೇ ರೀತಿಯ ತನಿಖೆಗೂ ಸಿದ್ಧರಿದ್ದೇವೆ. ಅರ್ಜಿಯಲ್ಲಿ ತಿಳಿಸಿರುವ ವಿಚಾರಗಳಿಗೆ ನಾವು ಬದ್ಧವಾಗಿದ್ದೇವೆ. ಅದನ್ನು ಪ್ರಮಾಣೀಕರಿಸಿ ಪ್ರಮಾಣ ಪತ್ರ ಸಲ್ಲಿಸುವುದಾಗಿ ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸಿಲ್ಕ್‌ಬೋರ್ಡ್‌ನಲ್ಲಿ ಇನ್ನು ಟ್ರಾಫಿಕ್ ಜಾಂ ಇರೋದಿಲ್ಲ
ಎಸ್ಸೆಸ್ಸೆಲ್ಸಿಯಲ್ಲಿ ಕೋವಿಡ್ ಬ್ಯಾಚ್‌ ಬಳಿಕ 94.1% ಮಕ್ಕಳು ಉತ್ತೀರ್ಣ: ಐತಿಹಾಸಿಕ