ಸಿಲ್ಕ್‌ಬೋರ್ಡ್‌ನಲ್ಲಿ ಇನ್ನು ಟ್ರಾಫಿಕ್ ಜಾಂ ಇರೋದಿಲ್ಲ

Published : Apr 24, 2026, 07:35 AM IST
  silk board

ಸಾರಾಂಶ

ಭಾರಿ ಟ್ರಾಫಿಕ್ ಜಾಮ್ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ನಗರದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನ ‘ಎಚ್‌ಎಸ್‌ಆರ್ ಲೇಔಟ್ 5ನೇ ಮೇನ್‌ನಿಂದ- ಜಯನಗರದ ರಾಗಿಗುಡ್ಡ’ವರೆಗಿನ ಮೇಲ್ಸೇತುವೆ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

 ಬೆಂಗಳೂರು :  ಭಾರಿ ಟ್ರಾಫಿಕ್ ಜಾಮ್ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ನಗರದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನ ‘ಎಚ್‌ಎಸ್‌ಆರ್ ಲೇಔಟ್ 5ನೇ ಮೇನ್‌ನಿಂದ- ಜಯನಗರದ ರಾಗಿಗುಡ್ಡ’ವರೆಗಿನ ಮೇಲ್ಸೇತುವೆ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಜನಪ್ರತಿನಿಧಿಗಳಿಂದ ಅಧಿಕೃತ ಉದ್ಘಾಟನೆಗೆ ಕಾಯದೆ ಸಂಚಾರ ಪೊಲೀಸರೇ ಪೂಜೆ ಮಾಡಿದ್ದು, ಸಂಚಾರ ಪೊಲೀಸರ ವಾಹನಗಳು ಮೊದಲು ಪ್ರವೇಶಿಸಿದವು. ನಂತರ ಸಾರ್ವಜನಿಕರ ವಾಹನಗಳ ಸಂಚಾರ ಆರಂಭಿಸಲಾಗಿದೆ. ಇದೇ ಜಂಕ್ಷನ್‌ನಲ್ಲಿ ರಾಗಿಗುಡ್ಡದಿಂದ ಸಿಲ್ಕ್‌ಬೋರ್ಡ್ ನಡುವಿನ ಮೇಲ್ಸೇತುವೆಯನ್ನು 2024ರಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು ಫ್ಲೈಓವರ್‌ ಒಟ್ಟು 3.5 ಕಿ.ಮೀ ಉದ್ದ ಇದೆ.

ಐಟಿ-ಬಿಟಿ ಕಂಪನಿಗಳು, ಪ್ರಮುಖ ರಾಷ್ಟ್ರೀಯ ಹೆದ್ದಾರಿ ಹೊಸೂರು ರಸ್ತೆಯು ಬರುವ ಕಾರಣ ಈ ಜಂಕ್ಷನ್‌ನಲ್ಲಿ ಕಳೆದ ಎರಡು ದಶಕಗಳಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಮೆಟ್ರೊ ಕಾಮಗಾರಿಯು ನಡೆಯುತ್ತಿದ್ದ ಕಾರಣ ಟ್ರಾಫಿಕ್ ಜಾಮ್ ಇನ್ನೂ ಹೆಚ್ಚಾಗಿತ್ತು. ಹೀಗಾಗಿ, ಮೆಟ್ರೊ ಮಾರ್ಗಕ್ಕೆ ಪೂರಕವಾಗಿ 520 ಕೋಟಿ ರು. ವೆಚ್ಚದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಿಸಲಾಗಿದೆ.

ಹಳದಿ ಮಾರ್ಗ ಮೆಟ್ರೊ ರೈಲ್ವೆ ಹಳಿಗಳ ಮೇಲಿನಿಂದ ಹಾದು ಹೋಗುವ ಈ ಮೇಲ್ಸೇತುವೆ ಡ್ರೋನ್ ಮೂಲಕ ಚಿತ್ರಿಸಿ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿರುವುದಕ್ಕೆ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಅರ್ಧ ಗಂಟೆ ಉಳಿತಾಯ: ರಿಂಗ್ ರಸ್ತೆಯಲ್ಲಿ ಎಚ್‌ಎಸ್‌ಆರ್ ಲೇಔಟ್ ಕಡೆಯಿಂದ ಜಯನಗರ ರಾಗಿಗುಡ್ಡ ಕಡೆ ತೆರಳಲು ಈ ಮೊದಲು 40 ನಿಮಿಷ ಆಗುತ್ತಿತ್ತು. ಫ್ಲೈಓವರ್ ಉದ್ಘಾಟನೆಯಿಂದ ಕೇವಲ 10 ನಿಮಿಷಗಳಲ್ಲಿ ಜಂಕ್ಷನ್ ದಾಟಬಹುದು ಎಂದು ವಿಜೇತ್ ಕುಮಾರ್ ಎಂಬುವರು ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೂಚನಾ ಫಲಕಗಳಿಗೆ ಸಲಹೆ

ಫ್ಲೈಓವರ್‌ನಲ್ಲಿ ‘ಎಸ್’ ಮಾದರಿಯಲ್ಲಿ ತಿರುವು ಇರುವುದರಿಂದ ವಾಹನಗಳು ಫ್ಲೈಓವರ್ ಪ್ರವೇಶಿಸಿ ಸಾಗುವಾಗ ತಿರುವು ಕಾಣಿಸುವುದಿಲ್ಲ. ವಾಹನಗಳು ವೇಗವಾಗಿ ಸಂಚರಿಸಿದರೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಎಸ್ ತಿರುವು ಕುರಿತು ಫಲಕ ಅಳವಡಿಸಬೇಕು. ಸೂಚನಾ ಫಲಕಗಳನ್ನು ದೊಡ್ಡದಾಗಿ ಹಾಕಬೇಕು. ಮಾರ್ಗ ಸೂಚನೆಯನ್ನು ನೀಡುವ ಫಲಕಗಳನ್ನು ಅಳವಡಿಸಬೇಕು ಎಂದು ವಾಹನ ಸವಾರರು ಸಲಹೆ ನೀಡಿದ್ದಾರೆ.

ರಾಗಿಗುಡ್ಡ ಮೆಟ್ರೊ ನಿಲ್ದಾಣದ ಬಳಿ ಜಾಮ್!

ಸಿಲ್ಕ್‌ಬೋರ್ಡ್ ಜಂಕ್ಷನ್ ಅನ್ನು ವಾಹನಗಳು ಸರಾಗವಾಗಿ ದಾಟಿಕೊಂಡು ಬರುತ್ತವೆ. ಆದರೆ, ರಾಗಿಗುಡ್ಡ ಮೆಟ್ರೊ ನಿಲ್ದಾಣ ಡೌನ್‌ ರ್‍ಯಾಂಪ್ ಬಳಿ ಮುಖ್ಯ ರಸ್ತೆಗೆ ಸಂಪರ್ಕಿಸುವ ಸ್ಥಳದಲ್ಲಿ ಜಾಮ್ ಉಂಟಾಗುತ್ತಿದೆ. ರಾಗಿಗುಡ್ಡ ಮೆಟ್ರೊ ನಿಲ್ದಾಣದಿಂದ ಜಯನಗರ ಕಡೆಗೆ ರಸ್ತೆ ಕಿರಿದಾಗಿರುವ ಕಾರಣ ಜಾಮ್ ಆಗುತ್ತಿದೆ ಎಂದು ವಾಹನ ಸವಾರರು ದೂರಿದ್ದಾರೆ. ಹೊಸ ಮೇಲ್ಸೇತುವೆಯಲ್ಲೂ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಕೆಲವು ವಾಹನ ಸವಾರರು ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎಸ್ಸೆಸ್ಸೆಲ್ಸಿಯಲ್ಲಿ ಕೋವಿಡ್ ಬ್ಯಾಚ್‌ ಬಳಿಕ 94.1% ಮಕ್ಕಳು ಉತ್ತೀರ್ಣ: ಐತಿಹಾಸಿಕ
4 ಕೋಟಿ ಬೆಲೆಯ ಚಿನ್ನ ಕಳಕೊಂಡ ಸಂತ್ರಸ್ತ ಗ್ರಾಹಕರಿಂದ ಪ್ರತಿಭಟನೆ