;Resize=(412,232))
ಬೆಂಗಳೂರು: ಕಳೆದೊಂದು ವರ್ಷದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಚಿತ್ರ ನಟಿ, ಡಿಜಿಪಿ ರಾಮಚಂದ್ರರಾವ್ ಅವರ ಮಲ ಮಗಳು ರನ್ಯಾ ರಾವ್ ಬುಧವಾರ ಸೆರೆಮನೆಯಿಂದ ಹೊರಬಂದಿದ್ದಾರೆ.
ಕಾರಾಗೃಹದಿಂದ ಸಂಜೆ ಬಿಡುಗಡೆಗೊಂಡ ರನ್ಯಾ ತಮ್ಮ ವಕೀಲರ ತಂಡದ ಜತೆ ಕಾರಿನಲ್ಲಿ ತೆರಳಿದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಂಡರು.
ಕಂದಾಯ ಗುಪ್ತಚರ ಜಾರಿನಿರ್ದೇಶನಾಲಯ (ಡಿಆರ್‌ಐ) ಜಾರಿಗೊಳಿಸಿದ್ದ ಕಾಫಿಪೋಸಾ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ರನ್ಯಾಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಈಗಾಗಲೇ ಚಿನ್ನಕಳ್ಳ ಸಾಗಣೆ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ನೀಡಿತ್ತು.
ಕಳೆದ ವರ್ಷ ಮಾ.29 ರಂದು ದುಬೈನಿಂದ 12 ಕೋಟಿ ರು. ಮೌಲ್ಯದ 14.02 ಕೆ.ಜಿ. ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ರನ್ಯಾರಾವ್ ಬಂಧಿಸಿದ್ದರು. ಬಳಿಕ ತನಿಖೆ ವೇಳೆ ರನ್ಯಾಳ ಬಂಗಾರ ಕಳ್ಳ ಸಾಗಣೆ ಜಾಲ ಬಯಲಾಗಿತ್ತು. ಎರಡು ವರ್ಷಗಳ ಅವಧಿಯಲ್ಲಿ 100 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಚಿನ್ನವನ್ನು ರನ್ಯಾ ತಂಡ ಅಕ್ರಮವಾಗಿ ಸಾಗಿಸಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಹೀಗಾಗಿ ರನ್ಯಾ ಹಾಗೂ ಆಕೆಯ ಸಹಚರರ ವಿರುದ್ಧ ಡಿಆರ್‌ಐ ಕಾಫಿಪೋಸಾ ಕಾಯ್ದೆ ಪ್ರಯೋಗಿಸಿತ್ತು. ಇದರಿಂದ ಒಂದು ವರ್ಷ ರನ್ಯಾಗೆ ಜಾಮೀನು ಸಿಕ್ಕರೂ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಇನ್ನು ರನ್ಯಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಸಹ ಪ್ರತ್ಯೇಕವಾಗಿ ತನಿಖೆ ನಡೆಸಿದೆ. ಕೊನೆಗೂ ಒಂದು ವರ್ಷದ ಬಳಿಕ ರನ್ಯಾಗೆ ಸೆರೆಮನೆಯಿಂದ ಮುಕ್ತಿ ಸಿಕ್ಕಿದೆ.
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಡಿಆರ್‌ಐ ಅಧಿಕಾರಿಗಳ ತಪಾಸಣೆ ವೇಳೆ ಕಳ್ಳಸಾಗಣೆ ಬೆಳಕಿಗೆ
ಬಳಿಕ ತನಿಖೆ ವೇಳೆ 2 ವರ್ಷಗಳ ಅವಧಿಯಲ್ಲಿ ₹100 ಕೋಟಿ ಮೌಲ್ಯದ ಗೋಲ್ಡ್ ಸ್ಮಗ್ಲಿಂಗ್ ಪತ್ತೆ
ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಕಾಫಿಫೋಸಾ ಕಾಯ್ದೆ ಜಾರಿಗೊಳಿಸಿದ್ದ ಡಿಆರ್‌ಐ ಅಧಿಕಾರಿಗಳು
ಈ ಕಾಯ್ದೆ ಜಾರಿಯಾದರೆ ಕೋರ್ಟ್ ಜಾಮೀನು ನೀಡಿದರೂ ಒಂದು ವರ್ಷ ಬಿಡುಗಡೆ ಅವಕಾಶವಿಲ್ಲ
ಇದೀಗ ಬಂಧನದಲ್ಲಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಟಿ ಬಿಡುಗಡೆ, ಸೀದಾ ಮನೆಗೆ