ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಬುಧವಾರ ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳೊಂದಿಗೆ ರೈತರ ಕೃಷಿ ಭೂಮಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಅವಲೋಕನ ನಡೆಸಿದರು
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಬುಧವಾರ ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳೊಂದಿಗೆ ರೈತರ ಕೃಷಿ ಭೂಮಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಅವಲೋಕನ ನಡೆಸಿದರು.
ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಸಂದ್ರ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ರಾಗಿ, ಜೋಳ ಬೆಳೆ ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿ ರೈತರಿಂದ, ಅಧಿಕಾರಿಗಳಿಂದ ಮಾಹಿತಿ ಪಡೆದರು.ಬಳಿಕ ಮಾತನಾಡಿದ ಅವರು ಜೂನ್, ಜುಲೈ ನಲ್ಲಿ ಕಡಿಮೆ ಮಳೆ ಆಗಿದೆ. ಜೂನ್ 1 ರಿಂದ ಆಗಸ್ಟ್ 4 ವರೆಗೆ ವಾಡಿಕೆಯಂತೆ 174.2 ಮಿಮಿ ಮಳೆ ಆಗಬೇಕಿತ್ತು. ಆದರೆ 116.3 ಮಿಮೀ ಮಾತ್ರ ಮಳೆ ಸುರಿದಿದ್ದು, ಶೇ.33ರಷ್ಟು ಮಳೆ ಕೊರತೆ ಎದುರಾಗಿದೆ. ಆಗಸ್ಟ್ 15 ರೊಳಗೆ ಮಳೆ ಬರದಿದ್ದಲ್ಲಿ ಬಿತ್ತನೆ ಆಗಿರುವ ಬೆಳೆಗಳಿಗೆ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ರೈತರು ಕಡಿಮೆ ಅವಧಿಯಲ್ಲಿ ಬೆಳೆಯುವ ರಾಗಿ ಬೆಳೆಯನ್ನು ಈ ಬಾರಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಬೇಗ ಬೆಳೆ ಬರುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.
ತಪ್ಪದೇ ಬೆಳೆ ವಿಮೆ ಮಾಡಿಸಿ:ಮಳೆ ಅಭಾವದಿಂದ ಬೆಳೆ ನಷ್ಟ ಆಗುವ ಸಂಭವವಿದೆ. ಹಾಗಾಗಿ ತಪ್ಪದೇ ಎಲ್ಲಾ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಇದರಿಂದ ನಷ್ಟ ಪರಿಹಾರ ಸರಿದೂಗಲಿದೆ. ಈಗಾಗಲೇ ಹಲವಾರು ರೈತರು ರಾಗಿ, ಜೋಳ ಬಿತ್ತನೆ ಮಾಡಿದ್ದಾರೆ. ಮಳೆ ಕೊರತೆಯಿಂದ ಸರಿಯಾಗಿ ಹುಟ್ಟಿಲ್ಲ. ಆ. 30ವರೆಗೆ ಕಾದು ನೋಡಬೇಕು ಮಳೆ ಬರದಿದಲ್ಲಿ ಸರ್ಕಾರ ಪರಿಹಾರದ ಬಗ್ಗೆ ಚಿಂತನೆ ಮಾಡಲಿದೆ ಎಂದು ಹೇಳಿದರು.
ಮೇವು ಕೊರತೆಯಾಗದಂತೆ ನಿಗಾ ವಹಿಸಿ:ಜಾನುವಾರುಗಳಿಗೆ ಮೇವಿಗೆ ಸಂಬಂಧಿಸಿದಂತೆ ರೈತರಿಗೆ ಮೇವು ಬಿತ್ತನೆ ಬೀಜ ಪೂರೈಕೆ ಮಾಡಬೇಕು. ಮೇವು ಕಿಟ್ ಗಳನ್ನು, ಸೈಲೇಜ್ ಆಹಾರದ ಬಗ್ಗೆ ರೈತರಿಗೆ ಅರಿವು ಮೂಡಿಸುವುದು ಅಗತ್ಯ. ಪ್ರಸ್ತುತ ಸನ್ನಿವೇಶದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳುವುದು ಮೊದಲ ಆದ್ಯತೆಯಾಗಿದೆ ಎಂದು ಪಶುಸಂಗೋಪನೆ ಅಧಿಕಾರಿಗಳಿಗೆ ಸೂಚಿಸಿದರು.
ಬನ್ನಿಮಂಗಲ ಕೆರೆ ಹೂಳೆತ್ತಲು ಕ್ರಮ:ಆಲೂರುದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಮಂಗಲ ಕೆರೆಯಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿದ ಅವರು, ಕೆರೆಗಳ ಹೂಳೆತ್ತುವ ಕೆಲಸ ಮೊದಲು ಆಗಬೇಕಿದೆ. ನಂತರ ನೀರು ತುಂಬಿಸುವ ಕೆಲಸ ಮಾಡಬೇಕು. ಕೆರೆಗಳಲ್ಲಿರುವ ಬಿದಿರು ತೆಗೆಯಬೇಕು. ಅರಣ್ಯ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೆರೆಗೆ ಹುರಿದು ಬರುವ ನೀರಿನ ಕಾಲುವೆಗಳನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲವಾದರೆ ಮಳೆಗಾಲದಲ್ಲಿ ನೀರು ತುಂಬಲಿದೆ. ಎಲ್ಲಾ ಕೆರೆಗಳ ಸುತ್ತಲೂ ಬೌಂಡರಿ ಫಿಕ್ಸ್ ಮಾಡಿ ಸುತ್ತಲು ಟ್ರೆಂಚ್ ಅಗೆದು, ಹಣ್ಣಿನ ಗಿಡಗಳನ್ನು ಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.(ಫೋಟೋ ಕ್ಯಾಪ್ಷನ್)
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ ಸಮೀಪದ ಬೀರಸಂದ್ರ ಗ್ರಾಮದಲ್ಲಿ ಕೃಷಿ ಜಮೀನುಗಳಿಗೆ ಭೇಟಿ ನೀಡಿದ ಸಚಿವ ಕೆ.ಎಚ್.ಮುನಿಯಪ್ಪ ಬರ ಪರಿಸ್ಥಿತಿ ಅವಲೋಕನ ನಡೆಸಿದರು. ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ ಇತರರಿದ್ದರು.