;Resize=(412,232))
ಬೆಂಗಳೂರು : ರಾಜ್ಯ ಅಬಕಾರಿ ಇಲಾಖೆಯ ಭ್ರಷ್ಟಾಚಾರ ಮತ್ತು ಸರ್ಕಾರಿ ಅಧಿಕಾರಿಗಳಿಂದ ಅಕ್ರಮ ಸಂಪತ್ತು ಸಂಗ್ರಹಣೆ ಆರೋಪದಡಿ ಜಾರಿ ನಿರ್ದೇಶನಾಲಯದ(ಇ.ಡಿ.) ಅಧಿಕಾರಿಗಳು ಬುಧವಾರ ರಾಜ್ಯದ 14 ಕಡೆ ನಡೆಸಿದ್ದ ದಾಳಿ ವೇಳೆ ಅಬಕಾರಿ ಇಲಾಖೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಡಿ.ಮಂಜುನಾಥ್, ಅವರ ಚಾಲಕ, ಕುಟುಂಬದ ಸದಸ್ಯರು ಹಾಗೂ ಸಹಚರರ ಬಳಿ 13.3 ಕೋಟಿ ರು. ಅಪರಾಧದ ಆದಾಯ ಪತ್ತೆಯಾಗಿದೆ.
ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳು ಲಂಚ ಸಂಗ್ರಹಿಸಲು ಸಹಚರರು ಮತ್ತು ಖಾಸಗಿ ವ್ಯಕ್ತಿಗಳ ಸಂಘಟಿತ ಸಿಂಡಿಕೇಟ್ ಜಾಲ ಮಾಡಿಕೊಂಡಿದ್ದರು, ಲಂಚದ ಹಣವನ್ನು ಕುಟುಂಬದ ಸದಸ್ಯರು, ಸಹಚರರ ಮೂಲಕ ಸ್ಥಿರ/ಚರಾಸ್ತಿಗಳಲ್ಲಿ ಹೂಡಿಕೆ ಮಾಡಿದ್ದರು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಪ್ರಮುಖವಾಗಿ ಹಿರಿಯ ಅಬಕಾರಿ ಅಧಿಕಾರಿಗಳಾದ ಸಚಿವ ಸತೀಶ್ ಜಾರಕಿಹೊಳಿ ಭಾವ ವೈ.ಡಿ. ಮಂಜುನಾಥ್, ಜಗದೀಶ್ ನಾಯಕ್, ಕೆ.ಎಂ.ತಮ್ಮಣ್ಣ ಮತ್ತು ಅವರ ಕುಟುಂಬದ ಸದಸ್ಯರು, ವ್ಯವಹಾರದ ಪಾಲುದಾರರು ಹಾಗೂ ಸಹಚರರಿಗೆ ಸೇರಿದ ಬೆಳಗಾವಿ, ಮೈಸೂರು, ಬೆಂಗಳೂರಿನ ನಿವಾಸಗಳು, ಕಚೇರಿಗಳು ಸೇರಿ 14 ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು.
ಶೋಧ ಕಾರ್ಯ ವೇಳೆ ಅಬಕಾರಿ ಇಲಾಖೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಡಿ.ಮಂಜುನಾಥ್, ಅವರ ಚಾಲಕ, ಕುಟುಂಬದ ಸದಸ್ಯರು ಹಾಗೂ ಅವರ ಸಹಚರರಿಂದ 5.5 ಕೋಟಿ ರು. ನಗದು, ಸುಮಾರು 7.8 ಕೋಟಿ ರು. ಮೌಲ್ಯದ ಚಿನ್ನಾಭರಣಗಳು, 3.3 ಲಕ್ಷ ರು. ಮೌಲ್ಯದ ವಿದೇಶಿ ಕರೆನ್ಸಿಗಳು ಸೇರಿ ಒಟ್ಟು 13.3 ಕೋಟಿ ರು. ಮೌಲ್ಯದ ಅಪರಾಧದ ಆದಾಯ ಪತ್ತೆಯಾಗಿದೆ. ಅಂತೆಯೇ ಡಿಜಿಟಲ್ ಸಾಧನಗಳು, ಲಂಚ ವಿತರಣೆ ನಗದು ಪುಸ್ತಕ, ಆಸ್ತಿ ದಾಖಲೆಗಳು ಸೇರಿ ಮಹತ್ವದ ಪುರಾವೆಗಳನ್ನು ಜಪ್ತಿ ಮಾಡಲಾಗಿದೆ.
ವಿವಿಧ ಅಬಕಾರಿ ಪರವಾನಗಿ ನೀಡಲು ಲಂಚ ಪಡೆದ ಆರೋಪದಡಿ ರಾಜ್ಯದ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಈ ಹಿಂದೆ ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಇ.ಡಿ.ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಅಬಕಾರಿ ಇಲಾಖೆಯ ಆರೋಪಿತ ಅಧಿಕಾರಿಗಳು ಲಂಚ ರೂಪದಲ್ಲಿ ಪಡೆದ ಹಣವನ್ನು ತಮ್ಮ ಕುಟುಂಬದ ಸದಸ್ಯರು, ಸಹಚರರ ಮುಖಾಂತರ ಸ್ಥಿರ/ಚರಾಸ್ತಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಬೇನಾಮಿ ವಹಿವಾಟುಗಳು ಮತ್ತು ವ್ಯವಹಾರದ ಹೂಡಿಕೆ ಮುಖಾಂತರ ಅಕ್ರಮ ಹಣ ವರ್ಗಾವಣೆ ಮಾಡಿರುವುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಂಡಿಕೇಟ್ ಮಾದರಿ ಕಾರ್ಯ:
ರಾಜ್ಯ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳು ಲಂಚ ಸಂಗ್ರಹಿಸಲು ತಮ್ಮ ಸಹಚರರು ಮತ್ತು ಖಾಸಗಿ ವ್ಯಕ್ತಿಗಳ ಸಂಘಟಿತ ಸಿಂಡಿಕೇಟ್ ಜಾಲ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಜಾಲ ವಿವಿಧ ಅಬಕಾರಿ ಅಂಗಡಿಗಳಿಂದ ಮಾಸಿಕ ನಿಗದಿತ ಲಂಚ ಸಂಗ್ರಹಿಸಿ ಸಂಬಂಧಿತ ಅಧಿಕಾರಿಗಳಿಗೆ ಪಾವತಿಸುತ್ತಿದೆ. ಪರವಾನಗಿ ನವೀಕರಣ, ವರ್ಗಾವಣೆ ವೇಳೆ ಮತ್ತು ಹೊಸ ಪರವಾನಗಿ ನೀಡುವ ಸಮಯದಲ್ಲಿ ಮಧ್ಯವರ್ತಿಗಳು ಮತ್ತು ಸಹಚರರ ಸಹಾಯದಿಂದ ಲಂಚ ಸಂಗ್ರಹಿಸಲಾಗುತ್ತಿದೆ. ಹೀಗೆ ಸಂಗ್ರಹಿಸಿದ ಹಣ ಯಾರಿಂದ ಸ್ವೀಕರಿಸಲಾಗಿದೆ ಮತ್ತು ಯಾರಿಗೆ ಪಾವತಿಸಲಾಗಿದೆ ಎಂಬುದನ್ನು ನಗದು ಪುಸ್ತಕದಲ್ಲಿ ನಮೂದಿಸಲಾಗಿದೆ. ಶೋಧದ ವೇಳೆ ಈ ಅನಧಿಕೃತ ನಗದು ಪುಸ್ತಕವನ್ನು ಇ.ಡಿ. ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕುಟುಂಬದ ಸದಸ್ಯರ ಹೆಸರಿನಲ್ಲಿ ಲೈಸೆನ್ಸ್:
ಈ ಅಪರಾಧದ ಆದಾಯವನ್ನು ಅಧಿಕಾರಿಗಳು ವೈಯಕ್ತಿಕ ಬಳಕೆ, ಆಸ್ತಿಗಳಲ್ಲಿ ಹೂಡಿಕೆ, ವ್ಯವಹಾರಕ್ಕಾಗಿ ಬಳಸಿದ್ದಾರೆ. ಅಬಕಾರಿ ಇಲಾಖೆಯ ಹೆಚ್ಚಿನ ಅಧಿಕಾರಿಗಳು ತಮ್ಮ ಕುಟುಂಬದ ಸದಸ್ಯರು ಮತ್ತು ಕುಟುಂಬದಿಂದ ನಿಯಂತ್ರಿಸಲ್ಪಡುವ ಘಟಕಗಳ ಹೆಸರಿನಲ್ಲಿ ಮದ್ಯದ ಪರವಾನಗಿಗಳನ್ನು ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಮದ್ಯದ ವ್ಯವಹಾರ ನಡೆಸುತ್ತಿದ್ದಾರೆ. ಈ ವ್ಯವಹಾರಗಳಿಂದ ಬರುವ ಆದಾಯವನ್ನು ಕಾನೂನುಬದ್ಧ ವ್ಯವಹಾರಗಳಿಂದ ಬರುತ್ತಿರುವ ಆದಾಯ ಎಂದು ಬಿಂಬಿಸುತ್ತಿರುವುದು ಇ.ಡಿ. ತನಿಖೆಯಿಂದ ತಿಳಿದು ಬಂದಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.
ಇ.ಡಿ. ಹೇಳಿದ್ದೇನು?
- ರಾಜ್ಯ ಅಬಕಾರಿ ಅಧಿಕಾರಿಗಳು ಲಂಚ ಸಂಗ್ರಹಿಸಲು ಸಹಚರರು, ಖಾಸಗಿ ವ್ಯಕ್ತಿಗಳ ಸಂಘಟಿತ ಸಿಂಡಿಕೇಟ್ ಜಾಲ ಹೊಂದಿದ್ದಾರೆ
- ವಿವಿಧ ಅಬಕಾರಿ ಅಂಗಡಿಗಳಿಂದ ಮಾಸಿಕ ನಿಶ್ಚಿತ ಲಂಚ ಸಂಗ್ರಹವಾಗುತ್ತಿದೆ. ಪರವಾನಗಿ ನವೀಕರಣ ವೇಳೆಯೂ ಲಂಚ ಸ್ವೀಕಾರ
- ಈ ಹಣ ಒಂದು ಕಡೆ ಸಂಗ್ರಹ. ಯಾರಿಂದ ಸಂಗ್ರಹ, ಯಾರಿಗೆ ಪಾವತಿ ಎಂಬುದನ್ನು ನಮೂದಿಸುವ ಪುಸ್ತಕ ಕೂಡ ಶೋಧ ವೇಳೆ ವಶ
- ಈ ರೀತಿಯ ಅಪರಾಧದಿಂದ ಗಳಿಸಿದ ಆದಾಯವನ್ನು ಅಧಿಕಾರಿಗಳು ಆಸ್ತಿಗಳಲ್ಲಿ ಹೂಡಿದ್ದಾರೆ. ಅದನ್ನು ಬಳಸಿ ವ್ಯವಹಾರ ಮಾಡಿದ್ದಾರೆ
- ಅಬಕಾರಿ ಇಲಾಖೆಯ ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರು, ಕುಟುಂಬದಿಂದ ನಿಯಂತ್ರಿಸಲ್ಪಡುವವರ ಹೆಸರಲ್ಲಿ ಮದ್ಯ ಲೈಸೆನ್ಸ್ ಹೊಂದಿದ್ದಾರೆ
₹5.5 ಕೋಟಿ ನಗದು, ₹7.8 ಕೋಟಿ ಚಿನ್ನ ವಶ
ಅಬಕಾರಿ ಇಲಾಖೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಡಿ.ಮಂಜುನಾಥ್, ಅವರ ಚಾಲಕ, ಕುಟುಂಬದ ಸದಸ್ಯರು ಹಾಗೂ ಅವರ ಸಹಚರರಿಂದ 5.5 ಕೋಟಿ ರು. ನಗದು, ಸುಮಾರು 7.8 ಕೋಟಿ ರು. ಮೌಲ್ಯದ ಚಿನ್ನಾಭರಣಗಳು, 3.3 ಲಕ್ಷ ರು. ಮೌಲ್ಯದ ವಿದೇಶಿ ಕರೆನ್ಸಿಗಳು ಸೇರಿ ಒಟ್ಟು 13.3 ಕೋಟಿ ರು. ಮೌಲ್ಯದ ಅಪರಾಧದ ಆದಾಯ ಪತ್ತೆಯಾಗಿದೆ ಎಂದು ಇ.ಡಿ. ತಿಳಿಸಿದೆ