;Resize=(412,232))
ಮಂಜುನಾಥ ಕೆ
ಬೆಂಗಳೂರು : ನಗರದಲ್ಲಿ ಇನ್ನು ಮುಂದೆ ಅವಧಿ ಮೀರಿ ಪಟಾಕಿ ಹೊಡೆಯುವವರು ನೂರು ಬಾರಿ ಯೋಚಿಸಿ ಇಲ್ಲವಾದರೆ ಕಾನೂನಿನ ಸಂಕಷ್ಟ ಎದುರಿಸಬೇಕಾದೀತು.
ನಗರದಲ್ಲಿ ಈಗಾಗಲೇ ಅಳವಡಿಸಿರುವ ಕ್ಯಾಮೆರಾಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಾಫ್ಟ್‌ವೇರ್ ಒಂದನ್ನು ಪ್ರಾಯೋಗಿಕವಾಗಿ ಅಳವಡಿಸಿದ್ದು, ಅದು ಯಶಸ್ವಿಯಾಗಿದ್ದರಿಂದ ಅಗತ್ಯ ಬಿದ್ದಾಗ ಇತರೆ ಕ್ಯಾಮೆರಾಗಳಿಗೂ ವಿಸ್ತರಿಸಲು ನಗರ ಪೊಲೀಸರು ಚಿಂತನೆ ನಡೆಸಿದ್ದಾರೆ. ಈ ಸಾಫ್ಟ್‌ವೇರ್ ಪಟಾಕಿ ಹೊಡೆದವರ ದೃಶ್ಯವನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿದು ಪೊಲೀಸ್ ನಿಯಂತ್ರಣ ಕೊಠಡಿಗೆ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ. ಆ ದೃಶ್ಯ ಆಧರಿಸಿ ಪೊಲೀಸರು ಅವಧಿ ಮೀರಿ ಪಟಾಕಿ ಹೊಡೆದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಿದ್ದಾರೆ. ಈ ಸಂಬಂಧ ಪ್ರಾಯೋಗಿಕ ಪರೀಕ್ಷೆಯನ್ನು ನಗರ ಪೊಲೀಸರು ನಡೆಸಿದ್ದಾರೆ. ಇದನ್ನು ನಗರದಲ್ಲಿರುವ ಕೆಲ ಕ್ಯಾಮೆರಾಗಳಿಗೆ ಅಳವಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾತ್ರಿ 10 ಗಂಟೆಯಾದರೂ ನಮ್ಮ ಮನೆ ಬಳಿ ಪಟಾಕಿ ಸಿಡಿಸಿ ತೊಂದರೆ ಕೊಡುತ್ತಿದ್ದಾರೆ ಎಂದು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ವಸತಿ ಪ್ರದೇಶಗಳಿಂದ ಹಲವು ದೂರುಗಳು ಬರುತ್ತಿರುತ್ತವೆ. ಅದರಲ್ಲಿಯೂ ದೀಪಾವಳಿ ಹಬ್ಬದ ಆಚರಣೆ ಸಮಯದಲ್ಲಿ ಹೆಚ್ಚಿನ ದೂರುಗಳು ಪೊಲೀಸ್ ನಿಯಂತ್ರಣ ಕೊಠಡಿಗೆ ಬರುತ್ತವೆ. ದೀಪಾವಳಿಯ ಜತೆಗೆ, ಹುಟ್ಟುಹಬ್ಬದ ಪಾರ್ಟಿಗಳು, ವಿವಾಹ ವಾರ್ಷಿಕೋತ್ಸವಗಳು, ಹುಟ್ಟುಹಬ್ಬ ಇತ್ಯಾದಿಗಳನ್ನು ಆಚರಿಸಲು ಕೆಲವರು ಮಧ್ಯರಾತ್ರಿಯಲ್ಲಿ ಪಟಾಕಿಗಳನ್ನು ಸಿಡಿಸುತ್ತಾರೆ ಈ ಬಗ್ಗೆ ಪೊಲೀಸರಿಗೆ ಆಗಾಗ್ಗೆ ಹಲವು ದೂರುಗಳು ಬರುತ್ತವೆ. ಆಗ, ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹರಿಸುತ್ತಿದ್ದರು. ಆದರೆ ಇನ್ನು ಮುಂದೆ ಮಧ್ಯರಾತ್ರಿ ಅಥವಾ ನಿಗದಿತ ಸಮಯಕ್ಕಿಂತ ಹೆಚ್ಚು ಪಟಾಕಿ ಸಿಡಿಸುವ ಬಗ್ಗೆ ದೂರು ನೀಡಲು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಬೇಕಾಗಿಲ್ಲ. ನಿರ್ಭಯಾ ಯೋಜನೆಯಡಿ ನಗರದಾದ್ಯಂತ ಅಳವಡಿಸಲಾಗಿರುವ ಕಣ್ಗಾವಲು ಕ್ಯಾಮೆರಾಗಳು ಪಟಾಕಿ ಸಿಡಿತವನ್ನು ಪತ್ತೆಹಚ್ಚಿ ಈ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಗರ ಪೊಲೀಸರು ಈ ಕ್ಯಾಮೆರಾಗಳಲ್ಲಿ ಪಟಾಕಿ ಸಿಡಿಸಿದ್ದನ್ನು ಪತ್ತೆಹಚ್ಚುವ ಕೃತಕ ಬುದ್ಧಿಮತ್ತೆ ಆಧಾರಿತ ಸಾಫ್ಟ್‌ವೇರ್ ಅನ್ನು ನಗರದ ಕೆಲ ಕ್ಯಾಮೆರಾಗಳಿಗೆ ಅಳವಡಿಸಿದ್ದರು. ನಗರದ ಶ್ರೀರಾಂಪುರ, ಮಲ್ಲೇಶ್ವರ, ಕೆ.ಆರ್. ಮಾರುಕಟ್ಟೆ, ಎಚ್‌ಎಸ್‌ಆರ್ ಲೇಔಟ್, ಹರಳೂರು, ಮಾರತಹಳ್ಳಿ ಮತ್ತು ಬೆಳ್ಳಂದೂರು ಮುಂತಾದ ಪ್ರದೇಶಗಳಲ್ಲಿ 200 ವಿಭಿನ್ನ ಸ್ಥಳಗಳಲ್ಲಿ ಈ ಪ್ರಯೋಗ ಐದು ದಿನಗಳ ಕಾಲ ನಡೆಯಿತು. ಈ ಕ್ಯಾಮೆರಾಗಳು ದಿನದ 24 ಗಂಟೆಯೂ ಪಟಾಕಿ ಸಿಡಿಸುವುದನ್ನು ಸೆರೆಹಿಡಿದಿವೆ.
ಐದು ದಿನಗಳ ನಡೆದ ಪರೀಕ್ಷಾ ಅವಧಿಯಲ್ಲಿ ಪಟಾಕಿ ಸಿಡಿತದ 2,000 ಎಚ್ಚರಿಕೆ ಸಂದೇಶಗಳನ್ನು ಪೊಲೀಸ್ ನಿಯಂತ್ರಣ ಕೊಠಡಿ ಸ್ವೀಕರಿಸಿದೆ. ಅವುಗಳಲ್ಲಿ ಸುಮಾರು 850 ಎಚ್ಚರಿಕೆ ಸಂದೇಶಗಳು (42.5%) ರಾತ್ರಿ 10 ಗಂಟೆಯ ನಂತರ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಉಪಕರಣ ನಮಗೆ ಬಹಳಷ್ಟು ಸಹಾಯ ಮಾಡುತ್ತಿದೆ ಮತ್ತು ಭವಿಷ್ಯದಲ್ಲಿ ಇದೊಂದು ಉಪಯುಕ್ತ ಸಾಫ್ಟ್‌ವೇರ್ ಆಗಲಿದೆ. ಇದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದು.
ಇದು ಸಾಕ್ಷ್ಯ ಆಧಾರಿತ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ಮೈಲಿಗಲ್ಲು ಆಗಿದೆ ಎಂದು ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ. ಈ ಸಾಫ್ಟ್‌ವೇರ್ ಅನ್ನು ಸ್ವಲ್ಪ ಮಾರ್ಪಾಡು ಮಾಡಿದರೆ ಕ್ಯಾಮೆರಾಗಳು ಹೊಗೆಯನ್ನೂ ಪತ್ತೆ ಮಾಡುತ್ತದೆ. ಎಐ ಆಧರಿತ ಸಾಫ್ಟ್‌ವೇರ್ ಅನ್ನು ನಿರ್ಭಯಾ ಯೋಜನೆಯಡಿ ಅಳವಡಿಸಲಾದ ಯಾವುದೇ ಕ್ಯಾಮೆರಾಗಳಿಗೆ ಮತ್ತು ಸಾರ್ವಜನಿಕರು ಅಳವಡಿಸಿದ ಕ್ಯಾಮೆರಾಗಳಿಗೆ ಸೇರಿಸಬಹುದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿರ್ಭಯಾ ಯೋಜನೆಯಡಿ ಬೆಂಗಳೂರಿನಲ್ಲಿ 9,000ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಮತ್ತು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ನಾಗರಿಕರು 5 ಲಕ್ಷಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ.
ಜನಸಂದಣಿ ಹೆಚ್ಚಾಗುವ ಸ್ಥಳಗಳಲ್ಲಿ, ಪ್ರತಿಭಟನೆಗಳ ಸಮಯದಲ್ಲಿ, ವಿಐಪಿಗಳು ರಸ್ತೆಯಲ್ಲಿ ಪ್ರಯಾಣಿಸುವಾಗ ಅಥವಾ ಹೋಟೆಲ್‌ನಲ್ಲಿ ವಾಸಿಸುವ ವಿಐಪಿಗಳು ಇತ್ಯಾದಿಗಳಲ್ಲಿ ಪಟಾಕಿ ಪತ್ತೆ ಸಾಧನವನ್ನು ಬಳಸಬಹುದು. ಈ ಉಪಕರಣವು ವಿವಿಧ ಹಂತಗಳಲ್ಲಿ ಮತ್ತು ವಿಭಿನ್ನ ಸಂದರ್ಭಗಳಲ್ಲಿಯೂ ಕಾರ್ಯನಿರ್ವಹಿಸಲಿದೆ. -ಕೋಟ್-
ನಗರದ ಕೆಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇದ್ದ ಕ್ಯಾಮರಾಗಳಿಗೆ ಎಐ ಆಧರಿತ ಸಾಫ್ಟ್‌ವೇರ್ ಒಂದನ್ನು ಅಳವಡಿಸಿ ಇತ್ತೀಚೆಗೆ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗಿದೆ. ಆ ಸಾಫ್ಟ್‌ವೇರ್ ಒಳಗೊಂಡಿದ್ದ ಕ್ಯಾಮೆರಾಗಳು ಪಟಾಕಿಗಳ ಸಿಡಿತ ದೃಶ್ಯಗಳನ್ನು ಕಮಾಂಡ್ ಸೆಂಟರ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಇದೊಂದು ಉಪಯುಕ್ತ ಸಾಫ್ಟ್‌ವೇರ್ ಆಗಿದ್ದು, ಇದನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಅಗತ್ಯವಿರುವ ಕಡೆ ಈ ಸಾಫ್ಟ್‌ವೇರ್ ಬಳಸಲಾಗುವುದು. -ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ