ರೈತರಿಂದಲೇ ಮೆಕ್ಕೆ ಜೋಳ ಖರೀದಿಸಿ: ಡಿಸ್ಟಿಲರಿಗಳಿಗೆ ಸಿಎಂ

Published : Nov 29, 2025, 09:58 AM IST
CM Siddaramaiah

ಸಾರಾಂಶ

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಥೆನಾಲ್ ಕೋಟಾಗೆ ಅನುಗುಣವಾಗಿ ಡಿಸ್ಟಿಲರಿಗಳು ಖರೀದಿಸಬೇಕಾಗಿರುವ ಮೆಕ್ಕೆ ಜೋಳವನ್ನು ನೇರವಾಗಿ ರೈತರಿಂದಲೇ ಖರೀದಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಬೆಂಗಳೂರು :  ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಥೆನಾಲ್ ಕೋಟಾಗೆ ಅನುಗುಣವಾಗಿ ಡಿಸ್ಟಿಲರಿಗಳು ಖರೀದಿಸಬೇಕಾಗಿರುವ ಮೆಕ್ಕೆ ಜೋಳವನ್ನು ನೇರವಾಗಿ ರೈತರಿಂದಲೇ ಖರೀದಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಎಷ್ಟು ಮೆಕ್ಕೆಜೋಳ ಖರೀದಿಸಬೇಕು ಎಂಬ ಬಗ್ಗೆ ಕೃಷಿ ಮಾರುಕಟ್ಟೆ ಇಲಾಖೆ ನೀಡಿರುವ ಸೂಚನೆ ಅನ್ವಯ ರೈತರಿಂದ ಖರೀದಿಸಬಹುದು.

ಅಲ್ಲದೆ, ಡಿಸ್ಟಿಲರಿಗಳು ನೇರವಾಗಿ ರೈತರಿಂದ ಕನಿಷ್ಠ ಬೆಂಬಲ ದರ ನೀಡಿ ಮೆಕ್ಕೆಜೋಳ ಖರೀದಿಸಲು ಮುಂದೆ ಬಂದರೆ, ಜಿಲ್ಲಾಡಳಿತದ ಮೂಲಕ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮೆಕ್ಕೆಜೋಳ ದರ ಕುಸಿತ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಖರೀದಿ ಹಾಗೂ ಎಥೆನಾಲ್‌ಗೆ ಸಂಬಂಧಿಸಿ ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸ್ಟಿಲರಿ ಮಾಲೀಕರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಮೆಕ್ಕೆಜೋಳಕ್ಕೆ ನಾಫೆಡ್ ಪ್ರತಿ ಕ್ವಿಂಟಾಲ್‌ಗೆ 2639 ರು. ನಿಗದಿ ಮಾಡಿದೆ. ಕನಿಷ್ಠ ಬೆಂಬಲ ಬೆಲೆ 2,400 ರು. ಇದ್ದು ನಾಫೆಡ್‌ ಮೂಲಕ ಖರೀದಿಸಿದರೆ 239 ರು. ಹೊರೆ ಆಗುತ್ತದೆ ಎಂದು ಡಿಸ್ಟಲರಿ ಮಾಲೀಕರು ಅಳಲು ತೋಡಿಕೊಂಡರು. ಈ ಹಿನ್ನೆಲೆಯಲ್ಲಿ ಇದರ ಬದಲು ರೈತರಿಗೆ ನೇರವಾಗಿ 2,400 ರು. ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಲು ಅವಕಾಶ ಮಾಡಿಕೊಡುವುದಾಗಿ ಸಿದ್ದರಾಮಯ್ಯ ಹೇಳಿದರು.

ಹೆಚ್ಚುವರಿ ಜೋಳ ಖರೀದಿಗೆ ನಕಾರ:

ಕೇಂದ್ರವು ಕನಿಷ್ಠ ಬೆಂಬಲ ಬೆಲೆ 2,400 ರು. ನಿಗದಿ ಮಾಡಿದ್ದರೂ ರಾಜ್ಯದ ಮಾರುಕಟ್ಟೆಯಲ್ಲಿ 1,500 ರು. ಹಾಗೂ 1,600 ರು. ಮಾತ್ರ ಇದೆ. ಹೀಗಾಗಿ ಡಿಸ್ಟಿಲರಿಗಳು 7.5 ಲಕ್ಷ ಟನ್‌ಗಿಂತ ಹೆಚ್ಚಾಗಿ ಮೆಕ್ಕೆಜೋಳವನ್ನು 2,400 ರು. ಕನಿಷ್ಠ ಬೆಂಬಲ ಬೆಲೆಯಂತೆ ಖರೀದಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಇದಕ್ಕೆ ಡಿಸ್ಟಿಲರಿಗಳು ನಾಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ. ರಾಜ್ಯದಲ್ಲಿ ಧಾನ್ಯವನ್ನು ಮಾತ್ರ ಆಧರಿಸಿರುವ ಮೂರು ಡಿಸ್ಟಿಲರಿಗಳಿಂದ ಒಟ್ಟು 94400 ಕಿ.ಲೀ ಎಥೆನಾಲ್ ಉತ್ಪಾದನೆಗೆ ಅನುಮತಿ ನೀಡಿದ್ದು, ಇದಕ್ಕೆ 2,48,461 ಟನ್ ಮೆಕ್ಕೆಜೋಳದ ಅವಶ್ಯಕತೆ ಇದೆ. 7 ಡ್ಯುಯಲ್ ಫೀಡ್ಸ್ಟಾಕ್ ಡಿಸ್ಟಿಲರಿಗಳಿಗೆ 1,90,751 ಕಿ.ಲೀ. ಎಥೆನಾಲ್ ಹಂಚಿಕೆಯಾಗಿದ್ದು, 5,02,056 ಟನ್ ಮೆಕ್ಕೆಜೋಳದ ಅವಶ್ಯಕತೆಯಿದೆ. ಹೆಚ್ಚುವರಿ ಜೋಳ ಖರೀದಿಸಿದರೆ ನಮ್ಮಿಂದ ಉತ್ಪಾದನೆಯಾಗುವ ಹೆಚ್ಚುವರಿ ಎಥೆನಾಲ್‌ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಿಂದ ಹೆಚ್ಚುವರಿ ಎಥೆನಾಲ್‌ ಖರೀದಿಸಲು ಹಾಗೂ ಪ್ರತಿ ಲೀಟರ್‌ ಎಥೆನಾಲ್‌ಗೆ ನಿಗದಿಪಡಿಸಿರುವ ದರ ಹೆಚ್ಚಳ ಮಾಡಲು ಕೇಂದ್ರದ ಮನವೊಲಿಸಿ ಎಂದು ಡಿಸ್ಟಿಲರಿ ಮಾಲೀಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಈ ಬಗ್ಗೆ ನಾವು ಮನವಿ ಮಾಡಿದ್ದು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೈತರಿಂದಲೇ ನೇರವಾಗಿ ಖರೀದಿಸಿ-ಸಿಎಂ:

ಈ ವೇಳೆ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ಧಾನ್ಯ ಆಧಾರಿತ ಡಿಸ್ಟಿಲರಿಗಳು ನಾಫೆಡ್/ಎನ್ಸಿಸಿಎಫ್ ಮೂಲಕ ಮೆಕ್ಕೆಜೋಳ ಸಂಗ್ರಹಿಸಲು ಎಸ್‌ಒಪಿ ಹೊರಡಿಸಿದೆ. ರಾಜ್ಯದಲ್ಲಿ ರೈತರು ಹಾಗೂ ಡಿಸ್ಟಿಲರಿಗಳ ಹಿತ ಕಾಯಲು ನೇರವಾಗಿ ಡಿಸ್ಟಲರಿಗಳು ರೈತರಿಂದ ಖರೀದಿಸಲು ಅಗತ್ಯ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಎಥೆನಾಲ್ ಕೋಟಾ ನಿಗದಿ, ಮೆಕ್ಕೆಜೋಳ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಈಗಾಗಲೇ ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಕಬ್ಬು ಬೆಳೆಗಾರರ, ಸಕ್ಕರೆ ಕಾರ್ಖಾನೆಗಳ ಹಾಗೂ ಡಿಸ್ಟಿಲರಿಗಳು ಎದುರಿಸುತ್ತಿರುವ ಸಮಸ್ಯೆ ಮನವರಿಕೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಭೆಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ್‌, ಚಲುವರಾಯಸ್ವಾಮಿ, ಆರ್‌.ಬಿ. ತಿಮ್ಮಾಪುರ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ