ಕಸ ವಿಲೇವಾರಿಗೆ ₹4791 ಕೋಟಿ ಟೆಂಡರ್‌ ಪ್ರಕ್ರಿಯೆಗೆ ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಸಂಬಂಧ 7 ವರ್ಷಕ್ಕೆ 4,791.95 ಕೋಟಿ ರು. ವೆಚ್ಚದ ಟೆಂಡರ್‌ ಪ್ರಕ್ರಿಯೆ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಲಾಗಿದೆ.

Follow Us

ಬೆಂಗಳೂರು : ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಸಂಬಂಧ 7 ವರ್ಷಕ್ಕೆ 4,791.95 ಕೋಟಿ ರು. ವೆಚ್ಚದ ಟೆಂಡರ್‌ ಪ್ರಕ್ರಿಯೆ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಲಾಗಿದೆ. ಈವರೆಗೆ ವಾರ್ಡ್‌ಗೆ ಒಂದರಂತೆ ಇದ್ದ ಪ್ಯಾಕೇಜ್‌ಗೆ ಕೊಕ್‌ ನೀಡಿ ಕ್ಷೇತ್ರಕ್ಕೆ ಒಂದರಂತೆ ಹಾಗೂ ದೊಡ್ಡ ಕ್ಷೇತ್ರಗಳಲ್ಲಿ ಮಾತ್ರ 2 ಪ್ಯಾಕೇಜ್‌ಗಳಂತೆ 33 ಪ್ಯಾಕೇಜ್‌ಗಳಿಗೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ.

ಈ ಕುರಿತು ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬಿಜೆಪಿ ಸರ್ಕಾರ ಇದ್ದಾಗ ಕಸ ಸಂಗ್ರಹ ಮತ್ತು ವಿಲೇವಾರಿಗೆ 98 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಆ ವಿಚಾರವಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಇದೀಗ ಅರ್ಜಿ ವಜಾಗೊಳಿಸಿ, ಮುಂದಿನ 4 ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ತೀರ್ಪು ನೀಡಿದೆ. ಹೀಗಾಗಿ ನಾವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಪ್ಯಾಕೇಜ್‌ ಮತ್ತು ದೊಡ್ಡ ಕ್ಷೇತ್ರಗಳಲ್ಲಿ ಎರಡು ಪ್ಯಾಕೇಜ್‌ನಂತೆ 33 ಪ್ಯಾಕೇಜ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು. 

ಶೀಘ್ರದಲ್ಲಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ತ್ಯಾಜ್ಯ ವಿಲೇವಾರಿ ಸಂಬಂಧ 7 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತಿದೆ. ಅದಕ್ಕಾಗಿ 4,791.95 ಕೋಟಿ ರು. ವ್ಯಯಿಸಲಾಗುವುದು. ಈಗಿರುವ ವ್ಯವಸ್ಥೆಗೂ, ಹೊಸ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿರಲಿದೆ. ಕಸ ವಿಂಗಡಣೆ, ವಾಹನಗಳ ಜವಾಬ್ದಾರಿ, ಕಟ್ಟಡ ತ್ಯಾಜ್ಯ ಪ್ರತ್ಯೇಕತೆ ಸೇರಿದಂತೆ ಅನೇಕ ಜವಾಬ್ದಾರಿ ನೀಡಲಾಗುವುದು. ಇದರ ಮೇಲುಸ್ತುವಾರಿಯನ್ನು ಬಿಎಸ್‌ಡಬ್ಲ್ಯೂಎಂಎಲ್‌ಗೆ ವಹಿಸಲಾಗುವುದು ಎಂದು ವಿವರಿಸಿದರು. ಬಿಡಿಎ ನಿವೇಶನ ಬಡ್ಡಿ ಮನ್ನಾ:

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಾರ್ವನಿಕ ಸೌಲಭ್ಯದ ನಿವೇಶನ ಪಡೆದಿರುವ ಸಂಘ ಸಂಸ್ಥೆಗಳು ಸಕಾಲದಲ್ಲಿ ಹಣ ಪಾವತಿಸಿ ನಿವೇಶನ ಪಡೆಯದೆ 250ಕ್ಕೂ ಹೆಚ್ಚು ಕೋಟಿ ರು. ಹಣ ಬಾಕಿ ಉಳಿಸಿಕೊಂಡಿವೆ. ಇಂತಹವರು 120 ದಿನಗಳ ಒಳಗಾಗಿ ಪಾವತಿ ಮಾಡಿದರೆ ಬಡ್ಡಿ ಮನ್ನಾ ಮಾಡಲು ತೀರ್ಮಾನಿಸಲಾಗಿದ್ದು, ಒಂದು ಬಾರಿ ಮಾತ್ರ ಈ ವಿನಾಯಿತಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಂಡೇಮಠದಲ್ಲಿ ಕೆಎಚ್‌ಬಿ ವಸತಿ ಸಮುಚ್ಛಯ:

ಬೆಂಗಳೂರು ನಗರದ ಕೆಂಗೇರಿ ಬಂಡೇಮಠ ಬಡಾವಣೆಯ 3 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ 180 ಕೋಟಿ ರು. ವೆಚ್ಚದಲ್ಲಿ ಬಹುಮಹಡಿ ವಸತಿ ಸಮುಚ್ಛಯ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಎಚ್‌.ಎನ್‌. ವ್ಯಾಲಿ ಯೋಜನೆಯಿಂದ ಏತ ನೀರಾವರಿ ಮೂಲಕ ನೀರೊದಗಿಸಲು 140 ಕೋಟಿ ರು.ಗಳ ಯೋಜನೆಗೆ ಅನುಮೋದನೆ ನೀಡಿರುವುದಾಗಿ ಸಚಿವ ಎಚ್.ಕೆ. ಪಾಟೀಲ್‌ ಮಾಹಿತಿ ನೀಡಿದ್ದಾರೆ.

Read more Articles on