ಬೆಂಗಳೂರಲ್ಲಿ ಮಳೆಯಿಂದಾಗಿ 500ಕ್ಕೂ ಅಧಿಕ ಡೆಂಘೀ ಕೇಸ್‌, ಸಾಂಕ್ರಾಮಿಕ

Published : May 23, 2025, 11:02 AM IST
Dengue Mosquito

ಸಾರಾಂಶ

ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ನಗರದಲ್ಲಿ ಡೆಂಘೀ, ಸೇರಿ ಸಾಂಕ್ರಾಮಿಕ ರೋಗಗಳು ಏಕಾಏಕಿ ಹೆಚ್ಚಾಗಿವೆ. ನಗರದಲ್ಲಿ ಸಕ್ರಿಯ 500ಕ್ಕೂ ಹೆಚ್ಚಿನ ಡೆಂಘೀ ಪ್ರಕರಣಗಳಿದ್ದು, ಸಾಮಾನ್ಯ ಜ್ವರವೂ ವ್ಯಾಪಕವಾಗಿದೆ.

ಬೆಂಗಳೂರು : ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ನಗರದಲ್ಲಿ ಡೆಂಘೀ, ಸೇರಿ ಸಾಂಕ್ರಾಮಿಕ ರೋಗಗಳು ಏಕಾಏಕಿ ಹೆಚ್ಚಾಗಿವೆ. ನಗರದಲ್ಲಿ ಸಕ್ರಿಯ 500ಕ್ಕೂ ಹೆಚ್ಚಿನ ಡೆಂಘೀ ಪ್ರಕರಣಗಳಿದ್ದು, ಸಾಮಾನ್ಯ ಜ್ವರವೂ ವ್ಯಾಪಕವಾಗಿದೆ.

ಮುಂಗಾರು ಪೂರ್ವ ಮಳೆ ನಗರವನ್ನು ಜಲಾವೃತ ಮಾಡಿದ್ದು ಮಾತ್ರವಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಆತಂಕ ಸೃಷ್ಟಿಸಿದೆ. ಡೆಂಘೀ, ಮಲೇರಿಯಾ, ಚಿಕುನ್‌ಗುನ್ಯಾ ಪ್ರಕರಣಗಳು ಕಂಡುಬರುತ್ತಿವೆ. ಜತೆಗೆ ಸಾಮಾನ್ಯ ಜ್ವರ, ವೈರಲ್‌ ಸೋಂಕು, ನೆಗಡಿ, ಸುಸ್ತು, ತಲೆನೋವು ಪ್ರಕರಣಗಳೂ ಹೆಚ್ಚಾಗಿವೆ. ಕಲುಷಿತ ನೀರು ಸೇವನೆಯಿಂದ ಬರುವ ಗ್ಯಾಸ್ಟ್ರೋ ಎಂಟರೈಟಿಸ್‌ ಹೆಚ್ಚಾಗಿದೆ. ನಗರದ ಕೆ.ಸಿ.ಜನರಲ್‌, ವಿಕ್ಟೋರಿಯಾ ಸೇರಿ ಇತರೆ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗದಲ್ಲಿ ಈ ಪ್ರಕರಣಗಳಿಂದ ಬಳಲುವ ಜನ ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಮಳೆಯಿಂದಾಗಿ ನಿಂತಿರುವ ನೀರು, ಬದಲಾದ ಹವಾಮಾನ, ದಿನವಿಡೀ ಶೀತ ವಾತಾವರಣ ಇದಕ್ಕೆ ಕಾರಣವಾಗಿದೆ. ಹೆಚ್ಚಾಗಿ ನಗರದ ಸ್ಲಂ, ಇಕ್ಕಟ್ಟಾಗಿರುವ, ಸಂಕೀರ್ಣ ವಸತಿ ವ್ಯವಸ್ಥೆ ಇರುವೆಡೆ ನಿವಾಸಿಗಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರಲ್ಲಿ ಜ್ವರ ಕಂಡುಬರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈಡೀಸ್‌ ಈಜಿಪ್ಟಿ ಸೊಳ್ಳೆಯಿಂದ ಬರುವ ಡೆಂಘಿಗೆ ಕಾಯಿಲೆಗೆ ಪ್ರಾರಂಭದಲ್ಲಿಯೇ ಸರಿಯಾದ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಹೆಚ್ಚು. ಲಾರ್ವಾ ಉಂಟಾಗದಂತೆ ನೀರು ನಿಲ್ಲುವುದನ್ನು ತಡೆಯಲು ಹೆಚ್ಚಿನ ಜಾಗೃತಿ ವಹಿಸಿ ಎಂದು ವೈದ್ಯರು ತಿಳಿಸಿದ್ದಾರೆ.

ಮಕ್ಕಳು, ವೃದ್ಧರ ಬಗ್ಗೆ ಕಾಳಜಿ ಇರಲಿ: ಇನ್ನು, ಹೊಟ್ಟೆಯ ಜ್ವರ ಎನ್ನಬಹುದಾದ ಗ್ಯಾಸ್ಟ್ರೋಎಂಟರೈಟಿಸ್‌ ಪ್ರಕರಣವೂ ನಗರದಲ್ಲಿ ಏರಿಕೆಯಾಗಿದೆ. ಸೋಂಕುಪೀಡಿತ ವ್ಯಕ್ತಿಯ ಸಂಪರ್ಕ ಅಥವಾ ಕಲುಷಿತ ಆಹಾರ, ನೀರಿಂದ ಬರುವ ಈ ಜ್ವರದಿಂದ ಅತಿಸಾರ, ವಾಂತಿ, ರಕ್ತದೊತ್ತಡ ಕಡಿಮೆಯಾಗುವುದು, ಮೂತ್ರಪಿಂಡ ಸಮಸ್ಯೆ ಸೇರಿ ಇತರೆ ತೊಂದರೆಗಳು ಉಂಟಾಗುತ್ತವೆ. ಮಕ್ಕಳು, ವೃದ್ಧರು ಅಂದರೆ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಇದು ಕಾಣಿಸುತ್ತಿದೆ. ಇಂತಹ ಸಮಸ್ಯೆ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ.

ರಾಜ್ಯದಲ್ಲಿವೆ 1403 ಡೆಂಘೀ ಪ್ರಕರಣ: ಡಾ.ಅನ್ಸಾರ್‌ ಬೆಂಗಳೂರಿನಲ್ಲಿ ಕಳೆದ ವಾರ 110 ಡೆಂಘೀ ದಾಖಲಾಗಿದ್ದು, ಒಟ್ಟಾರೆ 500ಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ. ಉಳಿದ ಜಿಲ್ಲೆಗಳು ಸೇರಿ ರಾಜ್ಯದಲ್ಲಿ ಒಟ್ಟಾರೆ 1403 ಡೆಂಘೀ ಪ್ರಕರಣಗಳಿವೆ ಎಂದು ಡಾ.ಅನ್ಸಾರ್‌ ಅಹ್ಮದ್‌ ತಿಳಿಸಿದರು. ಜತೆಗೆ ಕಳೆದ ವಾರ ದಾಖಲಾದ 22 ಸೇರಿ 343 ಚಿಕನ್‌ ಗುನ್ಯಾ ಹಾಗೂ 65 ಮಲೇರಿಯಾ ಪ್ರಕರಣಗಳು ರಾಜ್ಯದಲ್ಲಿವೆ. ಈ ಪೈಕಿ ಬೆಂಗಳೂರಿನಲ್ಲೇ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅವರು ಹೇಳಿದರು.

  ಕಳೆದೊಂದು ವಾರದಲ್ಲಿ ಬೆಂಗಳೂರು ನಗರದಲ್ಲಿ ಡೆಂಘೀ ಏಕಾಏಕಿ ಅಧಿಕವಾಗಿದೆ. ಜತೆಗೆ ಕೋವಿಡ್ ಆತಂಕವೂ ಎದುರಾಗುತ್ತಿದೆ. ಜನ ಆರೋಗ್ಯದ ಬಗ್ಗೆ ಮುಂಜಾಗೃತೆ ವಹಿಸಬೇಕು.

- ಡಾ.ಅನ್ಸರ್‌ ಅಹ್ಮದ್‌, ಸಂಯೋಜಿತ ರೋಗಗಳ ನಿಗಾ ಯೋಜನೆ ನಿರ್ದೇಶಕ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಆಹಿಂಸೆ, ಶಾಂತಿಧೂತ ಗಾಂಧೀಜಿ ಸ್ಮರಣೆ ನಿರಂತರವಾಗಿರಲಿ
ವಿಕಲಚೇತನರ ಸವಲತ್ತುಗಳ ಸಮರ್ಪಕ ನಿರ್ವಹಣೆಗೆ ಒತ್ತು