ರನ್ಯಾಗೆ ಪರಂ ಟ್ರಸ್ಟ್‌ನಿಂದ 40 ಲಕ್ಷ ರು. ಪಾವತಿ: ಡಿಕೆಶಿ

ಅಕ್ರಮ ಚಿನ್ನ ಸಾಗಣೆ ಕೇಸಲ್ಲಿ ಬಂಧಿತ ನಟಿ ರನ್ಯಾ ರಾವ್‌ಗೆ ತಮ್ಮ ಚಾರಿಟೆಬಲ್‌ ಟ್ರಸ್ಟ್‌ನಿಂದ 25 ಲಕ್ಷ ರು. ಮತ್ತು 15 ಲಕ್ಷ ರು. ಪ್ರತ್ಯೇಕವಾಗಿ ನೀಡಲಾಗಿದೆ ಎಂದು ಡಾ.ಜಿ.ಪರಮೇಶ್ವರ್‌ ಅವರೇ ತಿಳಿಸಿದ್ದಾರೆ.

Follow Us

 ಬೆಂಗಳೂರು : ಅಕ್ರಮ ಚಿನ್ನ ಸಾಗಣೆ ಕೇಸಲ್ಲಿ ಬಂಧಿತ ನಟಿ ರನ್ಯಾ ರಾವ್‌ಗೆ ತಮ್ಮ ಚಾರಿಟೆಬಲ್‌ ಟ್ರಸ್ಟ್‌ನಿಂದ 25 ಲಕ್ಷ ರು. ಮತ್ತು 15 ಲಕ್ಷ ರು. ಪ್ರತ್ಯೇಕವಾಗಿ ನೀಡಲಾಗಿದೆ ಎಂದು ಡಾ.ಜಿ.ಪರಮೇಶ್ವರ್‌ ಅವರೇ ತಿಳಿಸಿದ್ದಾರೆ.

ಹೀಗೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರಿಂದ ರನ್ಯಾ ರಾವ್ ಪ್ರಕರಣಕ್ಕೂ ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಗಳ ಮೇಲಿನ ಜಾರಿ ನಿರ್ದೇಶನಾಲಯ(ಇ.ಡಿ) ದಾಳಿಗೂ ಸಂಬಂಧದ ಶಂಕೆ ಮೂಡುವಂತಾಗಿದೆ.

ಡಾ.ಜಿ.ಪರಮೇಶ್ವರ್‌ ಭೇಟಿ ನಂತರ ಮತ್ತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ನಾನು ಪರಮೇಶ್ವರ್‌ ಅವರ ಮನೆಗೆ ಹೋಗಿ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಸಾರ್ವಜನಿಕ ಜೀವನದಲ್ಲಿರುವ ನಾವೆಲ್ಲ ನಮ್ಮ ಚಾರಿಟೆಬಲ್‌ ಟ್ರಸ್ಟ್‌ಗಳ ಮೂಲಕ ಹಲವರಿಗೆ ನೆರವು ನೀಡುತ್ತೇವೆ.

ಅದೇ ರೀತಿ ಪರಮೇಶ್ವರ್‌ ಅವರೂ ಹಣ ನೀಡಿದ್ದಾರೆ. ತಮ್ಮ ಟ್ರಸ್ಟ್‌ನಿಂದ 25 ಲಕ್ಷ ರು. ಮತ್ತು 15 ಲಕ್ಷ ರು. ನೀಡಿರುವುದಾಗಿ ತಿಳಿಸಿದ್ದಾರೆ. ಇನ್ನು ಮದುವೆಯಲ್ಲಿ ಉಡುಗೊರೆ ನೀಡಿರುವುದು ಸಾಮಾನ್ಯ ವಿಚಾರ. ಮದುವೆ ಸೇರಿ ಶುಭ ಸಮಾರಂಭಕ್ಕೆ ಹೋದಾಗ ಉಡುಗೊರೆ ಕೊಟ್ಟಿರಬಹುದು ಎಂದರು.

ಡಾ.ಪರಮೇಶ್ವರ್‌ ಹಣ ನೀಡಿದ್ದಾರೆಂದ ಮಾತ್ರಕ್ಕೆ ಅದನ್ನು ಸ್ಮಗ್ಲಿಂಗ್‌ಗೆ ಬಳಸಿ ಎಂದು ಅವರು ಹೇಳಿಲ್ಲವಲ್ಲ. ಅಂತಹ ಪ್ರಭಾವಿ ವ್ಯಕ್ತಿ, ಕಾನೂನು ಪಾಲಿಸುವವರು ಆ ರೀತಿಯ ಕೆಲಸಕ್ಕೆ ಪ್ರೇರೇಪಿಸುವುದಿಲ್ಲ. ರನ್ಯಾರಾವ್‌ ತಪ್ಪು ಮಾಡಿದ್ದರೆ ಅದು ಆಕೆಯ ವೈಯಕ್ತಿಕ ವಿಚಾರ. ತಪ್ಪು ಸಾಬೀತಾದರೆ ಶಿಕ್ಷೆಯಾಗಲಿ ಎಂದರು.

ಪರಂ ಸಜ್ಜನ ರಾಜಕಾರಣಿ:

ಪರಮೇಶ್ವರ್‌ ಅವರು, ಗೃಹ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಅವರ ಬಗ್ಗೆ ನಮಗೆ ಹೆಮ್ಮೆಯಿದೆ. 1990ರಿಂದಲೂ ನನ್ನೊಂದಿಗೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ. ಪರಮೇಶ್ವರ್‌ ಯಾವುದೇ ತಪ್ಪು ಮಾಡಿಲ್ಲ. ನಾವು ಅವರ ಪರ ನಿಲ್ಲುತ್ತೇವೆ ಎಂದು ಹೇಳಿದರು.

ಡಿಕೆಶಿ ಹೇಳಿದ್ದೇನು?

ರನ್ಯಾಗೆ ತಮ್ಮ ಟ್ರಸ್ಟ್‌ನಿಂದ 40 ಲಕ್ಷ ಕೊಟ್ಟಿದ್ದಾಗಿ ಸ್ವತಃ ಪರಮೇಶ್ವರ್‌ ತನಗೆ ತಿಳಿಸಿದ್ದಾರೆ

ಮದುವೆ ಸೇರಿ ಶುಭ ಸಮಾರಂಭಕ್ಕೆ ಹೋದಾಗ ಅವರು ಉಡುಗೊರೆ ಕೊಟ್ಟಿರಬಹುದು

ಪರಮೇಶ್ವರ್‌ ಹಣ ನೀಡಿದ್ದಾರೆಂದ ಮಾತ್ರಕ್ಕೆ ಅದನ್ನು ಸ್ಮಗ್ಲಿಂಗ್‌ಗೆ ಬಳಸಿ ಎಂದು ಹೇಳಿಲ್ಲ

ರನ್ಯಾ ತಪ್ಪು ಮಾಡಿದ್ದರೆ ಅದು ಆಕೆಯ ವೈಯಕ್ತಿಕ ವಿಚಾರ. ತಪ್ಪು ಸಾಬೀತಾದರೆ ಶಿಕ್ಷೆಯಾಗಲಿ

Read more Articles on