ಸಂಚಾರ ದಟ್ಟಣೆ ತಗ್ಗಿಸಲು ಬೆಂಗಳೂರಿನ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 17,780 ಕೋಟಿ ರು. ವೆಚ್ಚದಲ್ಲಿ 16.7 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣ
ಬೆಂಗಳೂರು : ಸಂಚಾರ ದಟ್ಟಣೆ ತಗ್ಗಿಸಲು ಬೆಂಗಳೂರಿನ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 17,780 ಕೋಟಿ ರು. ವೆಚ್ಚದಲ್ಲಿ 16.7 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚರ್ಚಿಸಿ ಹೈಬ್ರಿಡ್ ಅಥವಾ ಲೂಪ್ ಯಾವ ಮಾದರಿಯ ಸುರಂಗ ರಸ್ತೆ ನಿರ್ಮಾಣ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು. ಬಳಿಕ ಗ್ಲೋಬಲ್ ಟೆಂಡರ್ ಆಹ್ವಾನಿಸಬೇಕು ಎಂದು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರದಲ್ಲಿ ಸುರಂಗ ಮಾರ್ಗದ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಮಾಡಲಾಗಿದೆ. ಹೆಬ್ಬಾಳದಿಂದ ಎಚ್‌ಎಸ್‌ಆರ್ ಬಡಾವಣೆ, ಸಿಲ್ಕ್ ಬೋರ್ಡ್‌ವರೆಗೆ 16.7 ಕಿ.ಮೀ. ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಇದು ದಕ್ಷಿಣ-ಉತ್ತರ ಕಾರಿಡಾರ್ ಯೋಜನೆಯಾಗಿದ್ದು ಮೂರು ಪ್ರವೇಶ ಹಾಗೂ ಮೂರು ನಿರ್ಗಮನ ಪ್ರಸ್ತಾಪಿಸಲಾಗಿದೆ. ಶೀಘ್ರಗತಿಯಲ್ಲಿ ಯೋಜನೆ ಪೂರ್ಣಗೊಳಿಸುವ ಸಲುವಾಗಿ ಟೆಂಡರ್ ಪಡೆಯುವವರಿಗೆ 26 ತಿಂಗಳಲ್ಲಿ ಸುರಂಗ ಮಾರ್ಗ ಕೊರೆಯುವುದು ಹಾಗೂ 12 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಷರತ್ತು ವಿಧಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
- ವಿಪರೀತ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ರಾಜಧಾನಿಯಲ್ಲಿ ಸುಗಮ ಸಂಚಾರಕ್ಕೆ ಸರ್ಕಾರ ಯೋಜನೆ
- ಬೆಂಗಳೂರಿನ ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸುರಂಗ ರಸ್ತೆ
- ಹೈಬ್ರಿಡ್ ಅಥವಾ ಲೂಪ್ ಪೈಕಿ ಯಾವ ಮಾದರಿಯಲ್ಲಿ ನಿರ್ಮಿಸಬೇಕು ಎಂದು ಸಿಎಂ, ಡಿಸಿಎಂ ನಿರ್ಧಾರ
- ಬಳಿಕ ಜಾಗತಿಕ ಟೆಂಡರ್ ಕರೆದು ಯೋಜನೆ ಆರಂಭಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
- 26 ತಿಂಗಳಲ್ಲಿ ಸುರಂಗ ಮಾರ್ಗ ನಿರ್ಮಾಣ, 12 ತಿಂಗಳಲ್ಲಿ ರಸ್ತೆ ಕಾಮಗಾರಿ ಅಂತ್ಯಗೊಳಿಸಲು ಷರತ್ತು