ಮಳೆ ಹಾನಿ : ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ತಕ್ಷಣ ಪರಿಹಾರಕ್ಕೆ ಸಿಎಂ ಸೂಚನೆ

Published : May 22, 2025, 12:34 PM IST
Karnataka Chief Minister Siddaramaiah (File Photo/ANI)

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾದ ಬಗ್ಗೆ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾದ ಬಗ್ಗೆ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ಬಳಿಕ ಗೃಹ ಕಚೇರಿ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಭಾನುವಾರ ಒಂದೇ ರಾತ್ರಿ 132 ಮಿ.ಮೀ ಮಳೆಯಾಗಿದೆ. ಇದು ಕಳೆದ 10 ವರ್ಷದಲ್ಲಿ ಸುರಿದ 2ನೇ ಅತಿ ಹೆಚ್ಚಿನ ಮಳೆಯಾಗಿದೆ. ಹೀಗಾಗಿ, ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಪರಿಹಾರ ನೀಡುವಂತೆ ಸಂತ್ರಸ್ತರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ನೀಡುವುದಕ್ಕೆ ಬಿಬಿಎಂಪಿಗೆ ಸೂಚಿಸಲಾಗಿದೆ.

ಸಂತ್ರಸ್ತರು ತಲಾ 1 ಲಕ್ಷ ರು. ಪರಿಹಾರಕ್ಕೆ ಮನವಿ ಮಾಡಿದ್ದಾರೆ. 75 ಸಾವಿರ ರು. ನೀಡಬೇಕಾ, 50 ಸಾವಿರ ರು. ನೀಡಬೇಕಾ ಅಥವಾ 25 ಸಾವಿರ ರು. ಪರಿಹಾರ ನೀಡಬೇಕಾ ಎಂಬುದರ ಬಗ್ಗೆ ಸರ್ವೇ ಮಾಡಿ ತೀರ್ಮಾನ ಮಾಡಲಾಗುವುದು. ತಕ್ಷಣಕ್ಕೆ ತಾತ್ಕಾಲಿಕ ಪರಿಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ತಗ್ಗು ಪ್ರದೇಶದಲ್ಲಿ ಬೇಸ್‌ ಮೆಂಟ್‌ಗಿಲ್ಲ ಅವಕಾಶ

ನಗರದ ತಗ್ಗು ಪ್ರದೇಶದ ರಾಜಕಾಲುವೆಯ 100 ಮೀಟರ್‌ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಬೇಸ್‌ ಮೆಂಟ್‌ ನಿರ್ಮಾಣಕ್ಕೆ ಅವಕಾಶ ನೀಡದಂತೆ ಪಾಲಿಕೆ ಟೌನ್‌ಪ್ಲಾನ್‌ನಿಂಗ್‌ ನಿಯಮ ಬದಲಾವಣೆ ಮಾಡುವಂತೆ ನಿರ್ದೇಶಿಸಲಾಗಿದೆ. ಬೇಸ್‌ಮೆಂಟ್‌ ಬದಲು ಹೆಚ್ಚುವರಿ ಮಹಡಿ ನಿರ್ಮಾಣದ ಬಗ್ಗೆ ಬಿಬಿಎಂಪಿಯ ಟೌನ್‌ಪ್ಲಾನ್‌ ಅಧಿಕಾರಿಗಳು ತೀರ್ಮಾನಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

3 ವರ್ಷದಲ್ಲಿ 367 ಕಿ.ಮೀ ತಡೆಗೋಡೆ

ರಾಜಕಾಲುವೆ ಕಾಂಕ್ರೀಟಿಕರಣ ಕಾಮಗಾರಿ ನಡೆಸಲಾಗುತ್ತಿದೆ. 491 ಕಿ.ಮೀ ರಾಜಕಾಲುವೆ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿದ್ದು, 2026ರ ಫೆಬ್ರವರಿ ವೇಳೆಗೆ 194 ಕಿ.ಮೀ ತಡೆಗೋಡೆ ನಿರ್ಮಾಣ ಪೂರ್ಣಗೊಳಿಸಲಾಗುವುದು. ಇದೀಗ ವಿಶ್ವ ಬ್ಯಾಂಕ್‌ನಿಂದ 2 ಸಾವಿರ ಕೋಟಿ ರು, ಸಾಲ ಪಡೆದು 173 ಕಿ.ಮೀ ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಮುಲಾಜಿಲ್ಲಾದೇ ತೆರವಿಗೆ ಸೂಚನೆ

ರಾಜಕಾಲುವೆ ಒತ್ತವರಿಯನ್ನು ಮುಲಾಜಿಲ್ಲದೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವುಗೊಳಿಸಬೇಕು. ವಿಪತ್ತು ನಿರ್ವಹಣೆ ಕಾಯ್ದೆಯಡಿ ತೆರವು ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಬಿಬಿಎಂಪಿ ಮತ್ತು ಜಿಲ್ಲಾಡಳಿತ ಸಮನ್ವಯದಿಂದ ತೆರವು ಕಾರ್ಯ ನಿರ್ವಹಿಸಬೇಕು. 2014ರಲ್ಲಿ ಅಧಿಕಾರಕ್ಕೆ ಬಂದಾಗ ಒತ್ತುವರಿ ತೆರವು ಆರಂಭಿಸಲಾಯಿತು. ಆದರೆ, ಆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ತೆರವು ಕಾರ್ಯ ಮಾಡಲಿಲ್ಲ. ಹೀಗಾಗಿ, ಸಮಸ್ಯೆಯಾಗಿದೆ ಎಂದರು.

ಬೆಸ್ಕಾಂನಿಂದಲೂ ಪರಿಹಾರಕ್ಕೆ ಸೂಚನೆ

ಎಂ.ಎಸ್‌.ಪಾಳ್ಯದಲ್ಲಿ ವಿದ್ಯುತ್‌ ಶಾಕ್‌ನಿಂದ ಮೃತಪಟ್ಟ ಇಬ್ಬರ ಕುಟುಂಬಕ್ಕೆ ಬಿಬಿಎಂಪಿಯಿಂದ ತಲಾ 5 ಲಕ್ಷ ರು. ಪರಿಹಾರ ನೀಡುವುದಕ್ಕೆ ಸೂಚನೆ ನೀಡಲಾಗಿದೆ. ಜತೆಗೆ, ಬೆಸ್ಕಾಂನಿಂದ ಮಾನವೀಯತೆ ಆಧಾರದಲ್ಲಿ ಪರಿಹಾರ ನೀಡುವುದಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಜತೆಗೆ, ಬುಧವಾರ ಕೋರಮಂಗಲದ ಬಳಿ ಮರ ಬಿದ್ದು ಮೃತಪಟ್ಟ ಕುಟುಂಬಕ್ಕೂ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಜನರ ಸಹಕಾರವೂ ಬೇಕು: ಸಿಎಂ

ಹವಾಮಾನ ವೈಪರೀತ್ಯ, ಅಸಮರ್ಪಕ ಚರಂಡಿ ವ್ಯವಸ್ಥೆ, ರಾಜಕಾಲುವೆ ಒತ್ತುವರಿ, ಹೂಳು ತುಂಬಿಕೊಂಡಿರುವುದರಿಂದ ಪದೇ ಪದೇ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಲಾಗುತ್ತಿದೆ. ಅದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಪ್ಲಾಸ್ಟಿಕ್‌, ಕಸವನ್ನು ರಾಜಕಾಲುವೆಗೆ ಹಾಕಬಾರದು. ತಗ್ಗು ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಹೇಳಿದರು.

PREV
Read more Articles on

Recommended Stories

ವೀರರಾಘವನಪಾಳ್ಯ ಶಾಲೆಗೂ ಮುಖ್ಯಶಿಕ್ಷಕರಿಗೂ ಪ್ರಶಸ್ತಿ
ಕುರಾನ್ ಮಹತ್ವ ಅರಿತು ಸಮಾಜಕ್ಕೆ ಮಾದರಿಯಾಗಲು ಯುವಕರಿಗೆ ಸಲಹೆ