ದೊಡ್ಡಬಳ್ಳಾಪುರ: ಜೀವನ್ಮುಕ್ತಿಗೆ ನಾದೋಪಾಸನೆ ಸರಳ ಮಾರ್ಗವಾಗಿದ್ದು, ಅದು ರೋಗ ಹರಣ, ಮುಕ್ತಿ ಸಾಧನ ಎಂದು ಮನೋವಿಜ್ಞಾನ ತಜ್ಞರ ಅಭಿಮತವಾಗಿದೆ ಎಂದು ಸಂಗೀತ ವಿಮರ್ಶಕ ಕೆ.ವಿ.ಎಂ.ಗಿರಿಧರ್ ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಸುಸ್ವರ ಟ್ರಸ್ಟ್ ನೇತೃತ್ವದಲ್ಲಿ ಆಯೋಜಿಸಿದ್ದ 27ನೇ ವಾರ್ಷಿಕೋತ್ಸವ ಹಾಗೂ ದಾಸವರೇಣ್ಯ ತ್ಯಾಗರಾಜ, ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ತ್ಯಾಗರಾಜರ ಕುರಿತು ಉಪನ್ಯಾಸ ನೀಡಿದರು.ತ್ಯಾಗರಾಜರ ಕೀರ್ತನೆಗಳು ಮನೋವೈಜ್ಞಾನಿಕ ಭೂಮಿಕೆಯಲ್ಲೂ ಪ್ರಸ್ತುತ ಎನಿಸುತ್ತವೆ. ಆ ಕೀರ್ತನೆಗಳನ್ನು ದಿನಕ್ಕೊಂದು ಕೇಳಿ ಆಸ್ವಾದಿಸುವುದು ದೇಹದಲ್ಲಿ ಧನಾತ್ಮಕ ಮೌಲ್ಯಗಳ ವೃದ್ದಿ ಹಾಗೂ ಶ್ವಾಸ ಪ್ರಕ್ರಿಯೆ ಸರಾಗಗೊಳ್ಳಲು ಪೂರಕವಾಗಿರುತ್ತದೆ ಎಂಬುದನ್ನು ಮನೋವಿಜ್ಞಾನಿಗಳು ಹೇಳುತ್ತಾರೆ. ತ್ಯಾಗರಾಜರಲ್ಲಿ ಆರ್ಜವ ಶಕ್ತಿ ಇತ್ತು. ಹೀಗಾಗಿಯೇ ಅವರು 96 ಕೋಟಿ ಬಾರಿ ರಾಮಸ್ತುತಿ ಮಾಡಿದ್ದರು. ಮಾತು, ಕೃತಿ, ಮನಸ್ಸು ಏಕೀಕೃತ ಭಾವದಲ್ಲಿ ಹೊರಹೊಮ್ಮುವ ಅದ್ಬುತ ಶಕ್ತಿ ಅದು ಎಂದು ಅವರು ವಿಶ್ಲೇಷಿಸಿದರು.
ನಿಂದಾಸ್ತುತಿಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಪುರಂದರದಾಸ, ಕನಕದಾಸರೂ ಅನೇಕ ನಿಂದಾಸ್ತುತಿಗಳನ್ನು ಬರೆದಿದ್ದಾರೆ. ನಿಂದಾ ಎಂದರೆ ನಿಂದಿಸುವುದು, ಸ್ತುತಿ ಎಂದರೆ ಹಾಡಿ ಹೊಗಳುವುದು. ನಿಂದಾಸ್ತುತಿ ಎಂದರೆ ಏಕಕಾಲದಲ್ಲಿ ಸ್ತುತಿ ಮತ್ತು ನಿಂದನೆಗಳನ್ನು ತರುವು ಅಪರೂಪದ ರಚನೆಗಳು ಎಂದ ಅವರು, ದಾಸವರೇಣ್ಯರ ಅನೇಕ ನಿಂದಾಸ್ತುತಿಗಳನ್ನು ಸಹೋದಾರಣವಾಗಿ ನೀಡಿದರು.ಸುಸ್ವರ ವಾರ್ಷಿಕ ಪುರಸ್ಕಾರ:
ಇದೇ ವೇಳೆ ಖ್ಯಾತ ಸಂಗೀತ ವಿದುಷಿ ಶೈಲಜಾಕುಮಾರಿ ಅವರಿಗೆ ಸುಸ್ವರ ವಾರ್ಷಿಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುಸ್ವರ ಸಂಗೀತ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ, ಬಹುಮಾನ ನೀಡಿ ಅಭಿನಂದಿಸಲಾಯಿತು.
ಸುಸ್ವರ ಆಯೋಜನಾ ಸಮಿತಿ ಅಧ್ಯಕ್ಷೆ ವಿದುಷಿ ಶಾರದಾ ಶ್ರೀಧರ್ ಮಾತನಾಡಿ, ಸುಸ್ವರ ಸಂಗೀತ ಸಂಸ್ಥೆಗೆ ಅನನ್ಯ ಇತಿಹಾಸವಿದೆ. ದೊಡ್ಡಬಳ್ಳಾಪುರದ ವಿಶಿಷ್ಟ ಸಂಘಟನೆಗಳಲ್ಲಿ ಒಂದಾಗಿರುವ ಈ ಸಂಸ್ಥೆಯ ಚಟುವಟಿಕೆಗಳಲ್ಲಿ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಸುಸ್ವರ ಟ್ರಸ್ಟ್ ಅಧ್ಯಕ್ಷ ಎ.ಆರ್.ನಾಗರಾಜನ್, ಮ್ಯಾನೇಜಿಂಗ್ ಟ್ರಸ್ಟಿ ಬಿ.ಪಿ.ಶ್ರೀನಿವಾಸಮೂರ್ತಿ, ಖಜಾಂಚಿ ಎಂ.ಬಿ.ಗುರುದೇವ್, ಸಂಚಾಲಕ ಎಸ್.ನಾರಾಯಣ್, ಟ್ರಸ್ಟಿ ಎ.ಒ.ಆವಲಮೂರ್ತಿ, ಟಿ.ಗಿರೀಶ್, ಆಯೋಜನಾ ಸಮಿತಿಯ ಸುಮಾ ಸುನಿಲ್, ವಿಜಯಾ, ವರಲಕ್ಷ್ಮಿ, ಶ್ವೇತಾ ನಾರಾಯಣ್, ಲತಾ ಸುನಿಲ್, ಸಂಧ್ಯಾ, ಮಧುಶ್ರೀ, ಹರ್ಷದ, ರವಿ, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.ದಾಸವರೇಣ್ಯರ ಆರಾಧನಾ ಮಹೋತ್ಸವ:
ಇದಕ್ಕೂ ಮುನ್ನ ಬೆಳಗ್ಗೆ ಶ್ರೀ ತ್ಯಾಗರಾಜರು ಹಾಗೂ ಶ್ರೀಪುರಂದರ ದಾಸರ ಆರಾಧನಾ ಮಹೋತ್ಸವಕ್ಕೆ ದಾಸವರೇಣ್ಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಮಂಗಳವಾದ್ಯ ಕಾರ್ಯಕ್ರಮ, ಸ್ಥಳೀಯ ಕಲಾವಿದರ ಗಾಯನ ಸೇವೆ ನಡೆಯಿತು.ಮುದ್ದೇನಹಳ್ಳಿಯ ನಾದ ಗುರುಕುಲಂ ತಂಡದಿಂದ ಗಾಯನ, ಸ್ಥಳೀಯ ಕಲಾವಿದರಿಂದ ಪುರಂದರ ದಾಸರ ಪಿಳ್ಳಾರಿ ಗೀತೆಗಳು ಹಾಗೂ ತ್ಯಾಗರಾಜರ ಪಂಚರತ್ನ ಕೃತಿಗಳ ಸಮೂಹ ಗಾಯನ ನಡೆಯಿತು.
ಫೋಟೋ-12ಕೆಡಿಬಿಪಿ4- ದೊಡ್ಡಬಳ್ಳಾಪುರದ ಸುಸ್ವರ ಟ್ರಸ್ಟ್ 27ನೇ ವಾರ್ಷಿಕೋತ್ಸವ ಅಂಗವಾಗಿ ವಿದುಷಿ ಶೈಲಜಾಕುಮಾರಿ ಅವರಿಗೆ ವಾರ್ಷಿಕ ಪುರಸ್ಕಾರ ನೀಡಿ ಗೌರವಿಸಲಾಯಿತು.