ಫುಟ್ಪಾತ್‌ನಲ್ಲಿ ವಾಹನ ಓಡಿಸಿದರೆ ₹5000 ದಂಡ ವಿಧಿಸಲು ಮನವಿ

Published : Jul 23, 2026, 07:00 AM IST
Bengaluru - footpath

ಸಾರಾಂಶ

ನಗರದಲ್ಲಿ ಪಾದಚಾರಿಗಳ ಸುರಕ್ಷಿತ ಓಡಾಟಕ್ಕೆ ಅನುವು ಮಾಡಿಕೊಡಲು ಪಾದಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವವರಿಗೆ ವಿಧಿಸಲಿರುವ ದಂಡದ ಮೊತ್ತವನ್ನು ಐದು ಸಾವಿರ ರು.ಗೆ ಹೆಚ್ಚಿಸುವಂತೆ ಪತ್ರ

ಬೆಂಗಳೂರು :  ನಗರದಲ್ಲಿ ಪಾದಚಾರಿಗಳ ಸುರಕ್ಷಿತ ಓಡಾಟಕ್ಕೆ ಅನುವು ಮಾಡಿಕೊಡಲು ಪಾದಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವವರಿಗೆ ವಿಧಿಸಲಿರುವ ದಂಡದ ಮೊತ್ತವನ್ನು ಐದು ಸಾವಿರ ರು.ಗೆ ಹೆಚ್ಚಿಸುವಂತೆ ಸಾರಿಗೆ ಸಚಿವ ಬೈರತಿ ಸುರೇಶ್‌ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪತ್ರ ಬರೆದಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ಬೆಂಗಳೂರು ನಗರ ಸಂಚಾರ ಪೊಲೀಸ್‌ ಅಧಿಕಾರಿಗಳ ಜತೆ ಸಭೆ ನಡೆಸಿದ ಕೃಷ್ಣ ಬೈರೇಗೌಡ, ಸಾರ್ವಜನಿಕರ ನಡಿಗೆಯ ಹಕ್ಕನ್ನು ಖಚಿತ ಪಡಿಸಲು ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಐದೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಂದ ತೆರವಾದ ಜಾಗದಲ್ಲಿ ಯಾವುದೇ ರೀತಿಯ ವಾಹನಗಳ ಓಡಾಟಕ್ಕೆ ತಡೆಯೊಡ್ಡಬೇಕು ಎಂದು ಸೂಚಿಸಿದರು.

ಜತೆಗೆ, ಪಾದಚಾರಿ ಮಾರ್ಗದಲ್ಲಿ ವಾಹನಗಳ ಓಡಾಟದಿಂದ ಪಾದಚಾರಿಗಳ ಜೀವಕ್ಕೆ ಅಪಾಯವುಂಟಾಗುತ್ತಿದೆ. ಅಲ್ಲದೆ, ದಿನದಿಂದ ದಿನಕ್ಕೆ ಪಾದಚಾರಿ ಮಾರ್ಗದಲ್ಲಿ ವಾಹನ ಓಡಾಟ ಹೆಚ್ಚುತ್ತಿದೆ. ಸಂಚಾರ ಪೊಲೀಸರು ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಈಗಿರುವ ದಂಡದ ಮೊತ್ತವನ್ನು 500 ರು.ನಿಂದ 5 ಸಾವಿರ ರು.ಗೆ ಹೆಚ್ಚಿಸುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಲೇಬಾರದು. ಈ ನಿಯಮವನ್ನು ಜಾರಿಗೊಳಿಸುವುದು ವಾಸ್ತವದಲ್ಲಿ ಕಷ್ಟ ಸಾಧ್ಯ. ಆದರೆ, ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳನ್ನಾದರೂ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು. ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪರ್ಯಾಯ ನಿಲುಗಡೆ ಅಥವಾ ಚಾಲ್ತಿಯಲ್ಲಿರುವ ಒನ್‌ ಸೈಡ್‌ ಪಾರ್ಕಿಂಗ್‌ ವ್ಯವಸ್ಥೆಯನ್ನು ವಾಹನ ಸವಾರರು ಪಾಲಿಸುವಂತೆ ಮಾಡಬೇಕು ಎಂದರು.

ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸಬೇಕಿಲ್ಲ

ಈಗಾಗಲೇ ಚಾಲ್ತಿಯಲ್ಲಿರುವ ನಿಗಮ ಪಾಲನೆಗೆ ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸಬೇಕಿಲ್ಲ. ಪರ್ಯಾಯ ಪಾರ್ಕಿಂಗ್‌ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ರಸ್ತೆಯ ಒಂದು ಬದಿ ಕನಿಷ್ಠ 7ರಿಂದ 8 ಅಡಿಗಳಷ್ಟು ಜಾಗ ಉಳಿಯಲಿದೆ ಎಂದು ಹೇಳಿದರು.

ಸಂಚಾರ ಪೊಲೀಸ್‌ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಕಾರ್ತಿಕ್‌ ರೆಡ್ಡಿ, ಜಿಬಿಎ ಅಪರ ಆಯುಕ್ತರಾದ ಆರ್‌. ಲತಾ, ಲೋಖಂಡೆ ಸ್ನೇಹಲ್‌ ಸುಧಾಕರ್‌, ಕವಿತಾ ರಾಜಾರಾಂ, ವೆಂಕಟಾಚಲಪತಿ, ನವೀನ್‌ಕುಮಾರ್‌ ರಾಜು ಇತರರಿದ್ದರು.

ಸಿಗ್ನಲ್‌ಗಳಲ್ಲಿ ಬಸ್‌ ನಿಲ್ಲಿಸಬೇಡಿ: ಕೃಷ್ಣ

ಟ್ರಾಫಿಕ್‌ ಸಿಗ್ನಲ್‌ಗಳ ಬಳಿ ವಾಹನ ನಿಲುಗಡೆಗೊಳಿಸುವುದರಿಂದ ವಾಹನ ದಟ್ಟಣೆ ಸಮಸ್ಯೆ ಉಲ್ಬಣಿಸುತ್ತಿದೆ. ಹೀಗಾಗಿ ಬಿಎಂಟಿಸಿ ಬಸ್‌ ಸೇರಿದಂತೆ ಯಾವುದೇ ವಾಹನಗಳನ್ನೂ ಅನಗತ್ಯವಾಗಿ ಸಿಗ್ನಲ್‌ಗಳ ಬಳಿ ನಿಲ್ಲಿಸಲು ಅವಕಾಶ ನೀಡಬಾರದು. ಸಿಗ್ನಲ್‌ಗಳಿಂದ 75 ಮೀ. ಹಾಗೂ ಜಂಕ್ಷನ್‌ಗಳಿಂದ 50 ಮೀ. ಅಂತರದಲ್ಲಿ ಯಾವುದೇ ಬಸ್‌ ನಿಲುಗಡೆ (ಶೆಲ್ಟರ್‌) ಇರಬಾರದು. ಹಾಗೆ ಇರುವ ಬಸ್‌ ನಿಲುಗಡೆಗಳನ್ನು ಸ್ಥಳಾಂತರಿಸಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎಫ್‌ಡಿಐ ಹೂಡಿಕೆ ಏರಿಕೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.1
ಮಾಧ್ಯಮಕ್ಕೆ ಸಾಮಾಜಿಕ ಕಳಕಳಿ ಅಗತ್ಯ : ಆಯಿಷಾ