ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌

Published : Jan 17, 2026, 07:41 AM IST
Exam

ಸಾರಾಂಶ

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ 1ರ ಕೆಲ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಜ.19ರಿಂದ ಆರಂಭವಾಗಲಿರುವ ಪೂರ್ವ ಸಿದ್ಧತಾ ಪರೀಕ್ಷೆ 2ರಲ್ಲಿ ಮತ್ತೆ ಇಂಥ ಲೋಪಗಳಾಗದಂತೆ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ.

 ಬೆಂಗಳೂರು :  ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ 1ರ ಕೆಲ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಜ.19ರಿಂದ ಆರಂಭವಾಗಲಿರುವ ಪೂರ್ವ ಸಿದ್ಧತಾ ಪರೀಕ್ಷೆ 2ರಲ್ಲಿ ಮತ್ತೆ ಇಂಥ ಲೋಪಗಳಾಗದಂತೆ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ.

ನೋಡಲ್‌ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಆ ಕೇಂದ್ರದ ಪ್ರಾಂಶುಪಾಲರ ಮೇಲೆ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್‌ಅಪ್‌/ ಯೂಟ್ಯೂಬ್‌/ ಇನ್‌ಸ್ಟಾಗ್ರಾಂ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಬಹಿರಂಗ, ಪ್ರಸಾರ ಮಾಡಿದಲ್ಲಿ ವಿದ್ಯಾರ್ಥಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಕಾಲೇಜುಗಳು ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಕಾರಣವಾದರೆ ಕಾಲೇಜಿನ ಅನುದಾನ ಹಿಂಪಡೆಯಲು, ಪ್ರಶ್ನೆ ಪತ್ರಿಕೆ ಸೋರಿಕೆ ಪರೀಕ್ಷಾ ಕೇಂದ್ರದಲ್ಲಿ ನಡೆದರೆ ಅಂಥ ಕೇಂದ್ರವನ್ನೇ ರದ್ದುಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಉಪನಿರ್ದೇಶಕರ ಜವಾಬ್ದಾರಿ ನಿಗದಿ:

ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಉಪನಿರ್ದೇಶಕರು(ಡಿಡಿಪಿಯು) ಒಂದೇ ಐಪಿ ವಿಳಾಸ ಮತ್ತು ಒಂದೇ ಗಣಕ ಯಂತ್ರದಲ್ಲಿ ಮಾತ್ರವೇ ಡೌನ್‌ಲೋಡ್‌ ಮಾಡಬೇಕು. ತಪ್ಪಿದರೆ ಸಂಬಂಧಿಸಿದ ಉಪನಿರ್ದೇಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ತಮ್ಮ ಜಿಲ್ಲೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣಾಲಯವನ್ನು ಡಿಡಿಪಿಯು ಮೊದಲೇ ಗುರುತಿಸಬೇಕು. ಮುದ್ರಣ ಕಾರ್ಯ ಆರಂಭವಾದ ಬಳಿಕ ಖಾಸಗಿ ಮುದ್ರಣ ಚಟುವಟಿಕೆ ನಡೆಸುವಂತಿಲ್ಲ, ಖಾಸಗಿ ವ್ಯಕ್ತಿಗಳು ಅಲ್ಲಿಗೆ ಪ್ರವೇಶಿಸುವಂತಿಲ್ಲ. ಕೇವಲ ಸರ್ಕಾರಿ ಪಿಯು ಕಾಲೇಜುಗಳನ್ನು ಮಾತ್ರ ನೋಡಲ್‌ ಕೇಂದ್ರವಾಗಿ ಗುರುತಿಸಿ ಆ ಕೇಂದ್ರದ ಪ್ರಾಂಶುಪಾಲರು ಮತ್ತು ಒಬ್ಬ ಉಪನ್ಯಾಸಕರನ್ನು ಪ್ರಶ್ನೆ ಪತ್ರಿಕೆ ಪಾಲಕರನ್ನಾಗಿ ನೇಮಿಸಿ ಪ್ರಶ್ನೆ ಪತ್ರಿಕೆ ಸಂರಕ್ಷಣೆ ನಿರ್ವಹಣೆ ಜವಾಬ್ದಾರಿ ವಹಿಸಬೇಕು.

ನೋಡಲ್‌ ಕೇಂದ್ರದ ಕಾಲೇಜು ಕೋಡ್‌ ಅನ್ನು ವಾಟರ್‌ ಮಾರ್ಕ್‌ ಆಗಿ ಹೊಂದಿರುವ ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್‌ ಮಾಡಬೇಕು. ಆ ಪ್ರಶ್ನೆ ಪತ್ರಿಕೆಗಳ ಮುದ್ರಣ, ಪ್ಯಾಕಿಂಗ್‌ ಅನ್ನು ಬದಲಾಯಿಸಲಾಗದ ಸೀಲ್‌ ಬಳಸಿ ನಿಯೋಜಿತ ಮುದ್ರಣಾಲಯದಲ್ಲೇ ಸೀಲಿಂಗ್‌ ಕಾರ್ಯ ಮುಗಿಸಬೇಕು. ಸೀಲ್‌ ಮಾಡಿರುವ ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳನ್ನು ಉಪನಿರ್ದೇಶಕರ ಕಚೇರಿಯಲ್ಲಿ ನೋಡಲ್‌ ಕೇಂದ್ರದ ಪ್ರಾಂಶುಪಾಲರು ಮತ್ತು ಪ್ರಶ್ನೆ ಪತ್ರಿಕೆ ಪಾಲಕರಿಗೆ ಹಸ್ತಾಂತರಿಸಬೇಕು. ನಂತರ ಪ್ರಶ್ನೆ ಪತ್ರಿಕೆ ಸಂಪೂರ್ಣ ಜವಾಬ್ದಾರಿ ನೋಡಲ್‌ ಕೇಂದ್ರದವರದ್ದಾಗಿರುತ್ತದೆ ಎಂದು ಸೂಚಿಸಲಾಗಿದೆ.

ಪ್ರಾಂಶುಪಾಲರ ಹೊಣೆ:

ನೋಡಲ್‌ ಕೇಂದ್ರದ ಒಂದು ಕೋಣೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿಟ್ಟು ಸೀಲ್‌ ಮಾಡಬೇಕು. ಪ್ರತಿ ದಿನ ಬೆಳಗ್ಗೆ 8.30ಕ್ಕೆ ಆಯಾ ದಿನದ ಪರೀಕ್ಷಾ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಮಾತ್ರ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಮೊದಲ ದಿನವೇ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಕಾಲೇಜುಗಳಿಗೆ ನೀಡುವಂತಿಲ್ಲ. ಕಾಲೇಜಿನ ಪ್ರಾಂಶುಪಾಲರು ಪ್ರಶ್ನೆ ಪತ್ರಿಕೆ ಪ್ಯಾಕೆಟ್‌ಗಳನ್ನು ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ತೆರೆಯಬೇಕು. ಈ ಸಂಬಂಧ ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಪ್ರಮಾಣೀಕರಿಸಬೇಕು ಎಂದು ಸೂಚಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸಂಘದ ಸೌಲಭ್ಯ ಸದ್ಬಳಸಿಕೊಳ್ಳಿ: ಅಧ್ಯಕ್ಷ ಮುನಿಕೃಷ್ಣಪ್ಪ ಸಲಹೆ
ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮಕರ ಸಂಕ್ರಾಂತಿ ಹಬ್ಬ