ಸಿಎಸ್‌ಗೆ ಅವಹೇಳನ : ರವಿಕುಮಾರ್ ಮೇಲೆ ಕೇಸ್‌

Published : Jul 04, 2025, 10:05 AM IST
FIR on N Ravikumar

ಸಾರಾಂಶ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕುರಿತು ಅವಹೇಳನಕಾರಿ ಪದ ಬಳಸಿದ ಆರೋಪ ಮೇರೆಗೆ ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

  ಬೆಂಗಳೂರು :  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕುರಿತು ಅವಹೇಳನಕಾರಿ ಪದ ಬಳಸಿದ ಆರೋಪ ಮೇರೆಗೆ ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜೆ.ಪಿ.ನಗರದ ನಿವಾಸಿ ಹಾಗೂ ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಾಗರತ್ನ ಅವರ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ಈ ಬೆನ್ನಲ್ಲೇ ರವಿಕುಮಾರ್ ಅವರಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕುರಿತು ರವಿಕುಮಾರ್ ಅಗೌರವಯುತ ಮಾತುಗಳನ್ನಾಡಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ನಾನು ಸುದ್ದಿವಾಹಿನಿಗಳನ್ನು ನೋಡುತ್ತಿದ್ದೆ. ಆಗ ಬಿಜೆಪಿಯಿಂದ ವಿಧಾನಸೌಧ ಆ‍ವರಣದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಂತರ ಬಿಜೆಪಿ ನಾಯಕರು ಮಾತನಾಡುತ್ತಿದ್ದರು. ಆ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಕುರಿತು ಅಸಭ್ಯವಾಗಿ ‘ರಾತ್ರಿ ಸರ್ಕಾರಕ್ಕೆ ಹಗಲು ಸಿಎಂಗೆ ಕೆಲಸ ಮಾಡುತ್ತಾರೆ’ ಎಂದು ಸಾರ್ವಜನಿಕವಾಗಿ ರವಿಕುಮಾರ್ ಹೇಳಿದರು. ನನಗೆ ಈ ಅವಹೇಳನಕಾರಿ ಮಾತು ಕೇಳಿ ನೋವಾಯಿತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಅಗೌರವ ತೋರಿಸಿದ್ದು ಮಾತ್ರವಲ್ಲದೆ ಮಹಿಳಾ ಕುಲಕ್ಕೆ ಹಾನಿ ಉಂಟು ಮಾಡಿರುವ ರವಿಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನಾಗರತ್ನ ಆಗ್ರಹಿಸಿದ್ದಾರೆ.

ಸಿಎಸ್‌ಗೆ ಅವಮಾನ: ಎಂಎಲ್ಸಿ ರವಿಕುಮಾರ್‌ ವಿರುದ್ಧ ಆಕ್ರೋಶ 

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ವಿರುದ್ಧ ವಿಧಾನಪರಿಷತ್‌ ಪ್ರತಿಪಕ್ಷದ ಮುಖ್ಯ ಸಚೇತಕ ಸದಸ್ಯ ಎನ್‌.ರವಿಕುಮಾರ್‌ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ರವಿಕುಮಾರ್‌ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ ಹೆಚ್ಚಾಗಿದೆ.

ಇತ್ತೀಚೆಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸರ್ಕಾರ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರವಿಕುಮಾರ್‌, ಮುಖ್ಯ ಕಾರ್ಯದರ್ಶಿ ಅವರು ಇಡೀ ದಿನ ಮುಖ್ಯಮಂತ್ರಿಗಾಗಿ ಮತ್ತು ರಾತ್ರಿಯೆಲ್ಲ ರಾಜ್ಯ ಸರ್ಕಾರಕ್ಕಾಗಿ ಕೆಲಸ ಮಾಡುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕರ್ನಾಟಕದ ಭಾರತೀಯ ಆಡಳಿತ ಸೇವಾ ಅಧಿಕಾರಿಗಳ (ಐಎಎಸ್ ಅಧಿಕಾರಿಗಳು) ಸಂಘ, ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯರು, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಸೇರಿ ವಿವಿಧ ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಎನ್‌.ರವಿಕುಮಾರ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಮತ್ತು ಸಭಾಪತಿಗಳಲ್ಲಿ ಆಗ್ರಹಿಸಿವೆ.

ಸಿಎಂಗೆ ಐಎಎಸ್‌ ಅಧಿಕಾರಿಗಳ ಮನವಿ:

ಹಿರಿಯ ಐಎಎಸ್‌ ಅಧಿಕಾರಿಗಳಾದ ಗೌರವ್‌ ಗುಪ್ತ, ಪಂಕಜ್‌ಕುಮಾರ್‌ ಪಾಂಡೆ, ಖುಷ್ಬು ಗೋಯಲ್‌ ಚೌಧರಿ ಅವರನ್ನೊಳಗೊಂಡ ನಿಯೋಗ ಐಎಎಸ್‌ ಅಧಿಕಾರಿಗಳ ಸಂಘದ ಪರ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರವಿಕುಮಾರ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಮುಖ್ಯ ಕಾರ್ಯದರ್ಶಿ ಅವರು ರಾಜ್ಯದ ಅತ್ಯುನ್ನತ ನಾಗರಿಕ ಹುದ್ದೆ ಹೊಂದಿರುತ್ತಾರೆ. ಅಂಥವರ ವಿರುದ್ಧ ಜನಪ್ರತಿನಿಧಿಯಾದ ರವಿಕುಮಾರ್‌ ಅವರು ಸಾರ್ವಜನಿಕ ವೇದಿಕೆಯಲ್ಲಿ ಅಸಭ್ಯ ಮತ್ತು ಮಾನಹಾನಿಕರ ಹೇಳಿಕೆ ನೀಡಿ, ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ. ಈ ಹಿಂದೆಯೂ ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಆಧಾರರಹಿತ ಮತ್ತು ಕೋಮುವಾದಿ ಹೇಳಿಕೆ ನೀಡಿದ್ದರು. ಈಗ ಮುಖ್ಯ ಕಾರ್ಯದರ್ಶಿ ಅವರಿಗೆ ಅಪಮಾನ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಮೂರು ಬೇಡಿಕೆಗಳನ್ನು ಮುಂದಿಟ್ಟಿರುವ ಸಂಘವು, ಎನ್‌. ರವಿಕುಮಾರ್‌ ಅವರು ಸಾರ್ವಜನಿಕವಾಗಿ ಬೇಷರತ್‌ ಕ್ಷಮೆಯಾಚಿಸಬೇಕು, ಕಾನೂನಿನ ಅಡಿ ಅವರ ವಿರುದ್ಧ ಕ್ರಮವಾಗಬೇಕು ಹಾಗೂ ವಿಧಾನಪರಿಷತ್ತಿನಲ್ಲಿ ಅವರ ಹೇಳಿಕೆ ಖಂಡಿಸಿ, ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಸಭಾಪತಿಗೆ ಕಾಂಗ್ರೆಸ್‌ ದೂರು:

ವಿಧಾನಪರಿಷತ್‌ ಮುಖ್ಯ ಸಚೇತಕ ಸಲೀಂ ಅಹಮದ್‌ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರವಿಕುಮಾರ್‌ ವಿರುದ್ಧ ದೂರು ನೀಡಿದರು.

ಮಹಿಳಾ ಅಧಿಕಾರಿಯ ವ್ಯಕ್ತಿತ್ವಕ್ಕೆ ಅವಹೇಳನ ಮಾಡುವ ರೀತಿ ರವಿಕುಮಾರ್‌ ಹೇಳಿಕೆ ನೀಡಿದ್ದಾರೆ. ಸರ್ಕಾರ ಉನ್ನತ ಪದವಿಯ ನಾಗರಿಕ ಸೇವಾಧಿಕಾರಿಯ ಧೈರ್ಯ ಮತ್ತು ಪ್ರಾಮಾಣಿಕತೆಗೆ ಚ್ಯುತಿ ಬಂದಿದೆ. ಅಲ್ಲದೆ, ರವಿಕುಮಾರ್‌ ಹೇಳಿಕೆ ಪರಿಷತ್‌ನ ಗೌರವ ಕುಗ್ಗಿಸುವಂತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರವಿಕುಮಾರ್‌ ಅವರ ವಿರುದ್ಧ ಶಿಸ್ತು ಕ್ರಮದ ಜತೆಗೆ ಅವರ ಸದಸ್ಯತ್ವ ರದ್ದು ಮಾಡಬೇಕೆಂದು ಕಾಂಗ್ರೆಸ್‌ ಸದಸ್ಯರು ಕೋರಿದ್ದಾರೆ 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!