ಮಿಸ್‌ ಕಾಲ್‌ ಕೊಟ್ಟರೆ ಕಾವೇರಿ ನೀರಿನ ಸಂಪರ್ಕ : ಜಲಮಂಡಳಿಯಿಂದ ಇನ್ನೊಂದು ತಿಂಗಳಲ್ಲಿ ವ್ಯವಸ್ಥೆ ಜಾರಿ

Published : Dec 05, 2024, 10:17 AM IST
cauvery

ಸಾರಾಂಶ

ಬೆಂಗಳೂರು ಜಲಮಂಡಳಿಯು ಹೊಸ ಸಂಪರ್ಕ ಪಡೆಯುವುದನ್ನು ಸರಳ ಹಾಗೂ ಸುಲಭ ಮಾಡಲು ಗ್ಯಾಸ್‌ ಸಿಲಿಂಡರ್‌ ಬುಕ್ಕಿಂಗ್‌ ಮಾದರಿಯಲ್ಲಿ ಮಿಸ್‌ ಕಾಲ್‌ ವ್ಯವಸ್ಥೆ ಜಾರಿಗೆ ತರುವುದಕ್ಕೆ ಮುಂದಾಗಿದೆ!

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು : ಬೆಂಗಳೂರು ಜಲಮಂಡಳಿಯು ಹೊಸ ಸಂಪರ್ಕ ಪಡೆಯುವುದನ್ನು ಸರಳ ಹಾಗೂ ಸುಲಭ ಮಾಡಲು ಗ್ಯಾಸ್‌ ಸಿಲಿಂಡರ್‌ ಬುಕ್ಕಿಂಗ್‌ ಮಾದರಿಯಲ್ಲಿ ಮಿಸ್‌ ಕಾಲ್‌ ವ್ಯವಸ್ಥೆ ಜಾರಿಗೆ ತರುವುದಕ್ಕೆ ಮುಂದಾಗಿದೆ!

ಇನ್ನೊಂದು ತಿಂಗಳ ನಂತರ ನೀವು ಹೊಸ ಸಂಪರ್ಕ ಪಡೆಯಲು ಒಂದು ಮಿಸ್‌ ಕಾಲ್‌ ಕೊಟ್ಟರೆ ಸಾಕು, ಖುದ್ದು ಜಲಮಂಡಳಿ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸಂಪರ್ಕ ಕೊಡುತ್ತಾರಂತೆ!

ಸದ್ಯ ಈ ಕುರಿತು ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದಕ್ಕೆ ಮುಂದಾಗಿರುವ ಜಲಮಂಡಳಿಯ ಅಧಿಕಾರಿಗಳು ಮುಂದಿನ ಒಂದು ತಿಂಗಳಲ್ಲಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಿದ್ದಾರೆ. ಆ ನಂತರ ಮಿಸ್‌ ಕಾಲ್‌ ಮಾಡುವ ನಂಬರ್‌ ಅನ್ನು ಅನಾವರಣಗೊಳಿಸುವುದಕ್ಕೆ ನಿರ್ಧರಿಸಿದ್ದಾರೆ.

ಮಿಸ್‌ ಕಾಲ್‌ ಪ್ರಕ್ರಿಯೆ ಹೇಗೆ?:

ಕಾವೇರಿ ನೀರಿನ ಹೊಸ ಸಂಪರ್ಕ ಪಡೆಯುವವ ಗ್ರಾಹಕರು ಜಲಮಂಡಳಿಯು ನೀಡುವ ಸಂಖ್ಯೆಗೆ ಮಿಸ್‌ ಕಾಲ್‌ ನೀಡಬೇಕು. ಆ ಬಳಿಕ ಜಲಮಂಡಳಿಯ ಸಹಾಯವಾಣಿ ಕಚೇರಿಯ ಸಿಬ್ಬಂದಿ ಮಿಸ್‌ ಕಾಲ್‌ ನೀಡಿದ ಗ್ರಾಹಕರ ಮೊಬೈಲ್‌ಗೆ ಕರೆ ಮಾಡಿ ಹೆಸರು, ವಿಳಾಸ ಸೇರಿದಂತೆ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಆ ಮಾಹಿತಿಯಲ್ಲಿ ಸಂಬಂಧಪಟ್ಟ ಜಲಮಂಡಳಿಯ ವಿಭಾಗ ಮಟ್ಟದ ಅಧಿಕಾರಿಗಳಿಗೆ ನೀಡಲಿದ್ದಾರೆ. ವಿಭಾಗ ಅಧಿಕಾರಿಗಳು ಹೊಸ ಸಂಪರ್ಕ ಪಡೆಯುವ ಅರ್ಜಿ ಮೊದಲಾದ ದಾಖಲೆಗಳೊಂದಿಗೆ ಮಿಸ್‌ ಕಾಲ್‌ ನೀಡಿದ ಗ್ರಾಹಕರ ಮನೆ ಅಥವಾ ಕಚೇರಿಗೆ ಭೇಟಿ ನೀಡಿ ಮುಂದಿನ ಕ್ರಮ ವಹಿಸಲಿದ್ದಾರೆ. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಗ್ರಾಹಕರು ಆನ್‌ಲೈನ್‌ ಮೂಲಕ ಶುಲ್ಕ ಪಾವತಿ ಮಾಡಿದರೆ ಕಾವೇರಿ ನೀರಿನ ಸಂಪರ್ಕ ನೀಡಲಾಗುತ್ತದೆ.

ಮಿಸ್‌ ಕಾಲ್‌ 110 ಹಳ್ಳಿಜನರಿಗೆ ಅನುಕೂಲ

ಇತ್ತೀಚಿಗೆ ನಗರದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆಯ 5ನೇ ಹಂತದ ಯೋಜನೆಗೆ ಚಾಲನೆ ನೀಡಿದ್ದು, ಬೇಸಿಗೆ ಅವಧಿಯಲ್ಲಿ ನೀರಿನ ಬವಣೆ ಎದುರಿಸಿದ 110 ಹಳ್ಳಿಯ ಜನರು ಹೇಗೆ ಕಾವೇರಿ ನೀರಿನ ಸಂಪರ್ಕ ಪಡೆಯುವುದು ಎಂಬ ಗೊಂದಲ ಇದೆ. ಹೀಗಾಗಿ, ಕಾವೇರಿ ನೀರಿನ ಸಂಪರ್ಕ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಮಿಸ್‌ ಕಾಲ್‌ ವ್ಯವಸ್ಥೆಯು 110 ಹಳ್ಳಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ, ನಗರದ ಇತರೆ ಭಾಗದಲ್ಲಿ ಕಾವೇರಿ ನೀರಿನ ಹೊಸ ಸಂಪರ್ಕ ಪಡೆಯುವವರಿಗೆ ಅನುಕೂಲವಾಗಲಿದೆ.

 15 ದಿನದಲ್ಲಿ 5 ಸಾವಿರ ಅರ್ಜಿ

110 ಹಳ್ಳಿ ವ್ಯಾಪ್ತಿಯಲ್ಲಿ ಕಳೆದ 15 ದಿನದಲ್ಲಿ ಹೊಸದಾಗಿ ಕಾವೇರಿ ನೀರಿನ ಸಂಪರ್ಕಕ್ಕೆ 5 ಸಾವಿರಕ್ಕೂ ಅಧಿಕ ಅರ್ಜಿ ಬಂದಿದ್ದು, ಈ ಪೈಕಿ 1,163 ಮಂದಿ ಶುಲ್ಕ ಪಾವತಿ ಮಾಡಿ ಹೊಸ ಸಂಪರ್ಕ ಪಡೆದುಕೊಂಡಿದ್ದಾರೆ. ಇನ್ನು 2,240 ಅರ್ಜಿಗೆ ಅನುಮೋದನೆ ನೀಡಲಾಗಿದ್ದು, ಗ್ರಾಹಕರು ಶುಲ್ಕ ಪಾವತಿ ಮಾಡುತ್ತಿದಂತೆ ಹೊಸ ಸಂಪರ್ಕ ನೀಡಲಾಗುವುದು. 110 ಹಳ್ಳಿ ವ್ಯಾಪ್ತಿಯಲ್ಲಿ ಸದ್ಯ 55 ಸಾವಿರ ಕಾವೇರಿ ಸಂಪರ್ಕ ನೀಡಲಾಗಿದ್ದು, ಮುಂಬರುವ ಮಾರ್ಚ್‌ ಅಂತ್ಯಕ್ಕೆ 1 ಲಕ್ಷ ಸಂಪರ್ಕ ನೀಡುವ ಗುರಿ ಹಾಕಿಕೊಂಡಿದೆ. ಈ ಕಾರ್ಯಕ್ಕೆ ಮಿಸ್‌ ಕಾಲ್‌ ವ್ಯವಸ್ಥೆ ಮಂಡಳಿಗೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊಸದಾಗಿ ಕಾವೇರಿ ನೀರಿನ ಸಂಪರ್ಕ ಪಡೆಯುವುದಕ್ಕೆ ಗ್ರಾಹಕರಿಗೆ ಅನುಕೂಲಕ್ಕಾಗಿ ಸರಳ ವಿಧಾನ ಜಾರಿಗೊಳಿಸುವುದಕ್ಕೆ ಮಿಸ್‌ ಕಾಲ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಒಂದು ತಿಂಗಳಲ್ಲಿ ಮಿಸ್‌ ಕಾಲ್‌ ಸಂಖ್ಯೆಯನ್ನು ಅನಾವರಣಗೊಳಿಸಲಾಗುವುದು.

-ಡಾ। ರಾಮ್‌ ಪ್ರಸಾತ್‌ ಮನೋಹರ್‌, ಅಧ್ಯಕ್ಷ, ಬೆಂಗಳೂರು ಜಲಮಂಡಳಿ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...