ಬೆಂಗಳೂರು : ಬೆಂಗಳೂರು ನಗರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯಕ್ಕೆ ಅನೇಕ ಬಟವಾಡೆ ಅಧಿಕಾರಿಗಳನ್ನೂ ನಿಯೋಜಿಸಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಸಾವಿರಾರು ಸರ್ಕಾರಿ ನೌಕರರಿಗೆ ವೇತನ ವಿಳಂಬವಾಗಿದೆ. ಸರ್ಕಾರಿ ನೌಕರರಿಗೆ ಪ್ರತೀ ತಿಂಗಳು 1ನೇ ತಾರೀಕು ಅಥವಾ ಆರಂಭದಲ್ಲೇ ವೇತನ ಬಿಡುಗಡೆಯಾಗುತ್ತದೆ. ಆದರೆ, ಈ ತಿಂಗಳಲ್ಲಿ 10 ದಿನ ಕಳೆದರೂ ಇನ್ನೂ ಕೂಡ ನಗರದ ಸುಮಾರು 25ರಿಂದ 30 ಸಾವಿರ ನೌಕರರಿಗೆ ವೇತನ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹೇಳುವ ಪ್ರಕಾರ, ಸರ್ಕಾರ ವೇತನ ಬಿಡುಗಡೆ ಮಾಡುವ ಅಥವಾ ಬಟವಾಡೆ ಅಧಿಕಾರಿಗಳನ್ನೂ ಜಾತಿ ಗಣತಿ ಸಮೀಕ್ಷೆಗೆ ನಿಯೋಜಿಸಲಾಗಿದೆ. ಅವರು ಕಚೇರಿಗೆ ಆಗಮಿಸಿ ಬಟವಾಡೆ ನೀಡುವವರೆಗೆ ವೇತನ ಆಗುವುದಿಲ್ಲ. ಬಟವಾಡೆ ಅಧಿಕಾರಿಗಳು ಇರುವ ಕೆಲವು ಇಲಾಖೆಗಳಲ್ಲಿ ಮಾತ್ರ ವೇತನ ಆಗಿದೆ. ವಿವಿಧ ಇಲಾಖೆಗಳ ಸುಮಾರು 30 ಸಾವಿರ ನೌಕರರಿಗೆ ಇನ್ನೂ ವೇತನ ಆಗಿಲ್ಲ ಎನ್ನಲಾಗಿದೆ.